
ಮೀನ ರಾಶಿಯಲ್ಲಿ ಶನಿ, ಕುಜ, ರವಿ ಮತ್ತು ಬುಧ – ಈ ನಾಲ್ಕು ಪ್ರಬಲ ಗ್ರಹಗಳ ಯುತಿ ನಡೆಯುತ್ತಿರುವುದು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಕುತೂಹಲಕಾರಿ ವಿದ್ಯಮಾನವಾಗಿದೆ. ಈ ಚತುರ್ಗ್ರಹಿ ಯೋಗವು ದ್ವಾದಶ ರಾಶಿಗಳ ಮೇಲೆ ವೈವಿಧ್ಯಮಯ ಪರಿಣಾಮಗಳನ್ನು ಬೀರುತ್ತದೆ. ಈ ಸಂಯೋಗವು ಏಪ್ರಿಲ್ 11ರಿಂದ ಆರಂಭವಾಗಿ ಏಪ್ರಿಲ್15ರವರೆಗೆ ಇರಲಿದೆ. ಅಲ್ಪಾವಧಿಯಾದರೂ ಗ್ರಹಗಳು ತಮ್ಮ ಕಾರ್ಯವನ್ನು ಮಾಡಿ ಮುಂದಡಿಯಿಡುತ್ತವೆ.
ಶುಭ ಫಲದ ರಾಶಿಗಳು:
ವೃಷಭ ರಾಶಿ:
ನಿಮಗೆ ಈ ಸಂಯೋಗವು ಲಾಭ ಸ್ಥಾನದಲ್ಲಿ ನಡೆಯುವುದರಿಂದ ಆರ್ಥಿಕವಾಗಿ ಉತ್ತಮ ಪ್ರಗತಿ ಕಂಡುಬರಲಿದೆ. ಹಳೆಯ ಬಾಕಿ ಹಣ ವಾಪಸ್ ಬರಬಹುದು ಮತ್ತು ಉದ್ಯೋಗದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ.
ಮಿಥುನ ರಾಶಿ:
ಕರ್ಮ ಸ್ಥಾನದಲ್ಲಿ ಈ ಗ್ರಹಗಳಿರುವುದರಿಂದ ವೃತ್ತಿ ಜೀವನದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದ್ದು, ಸಮಾಜದಲ್ಲಿ ಗೌರವ ಹೆಚ್ಚುತ್ತದೆ.
ಕರ್ಕಾಟಕ ರಾಶಿ:
ಭಾಗ್ಯ ಸ್ಥಾನದಲ್ಲಿ ಈ ಯುತಿ ಇರುವುದರಿಂದ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ದೂರದ ಪ್ರಯಾಣದಿಂದ ಲಾಭವಾಗಲಿದ್ದು, ತಂದೆಯ ಕಡೆಯಿಂದ ಬೆಂಬಲ ಸಿಗಲಿದೆ.
ವೃಶ್ಚಿಕ ರಾಶಿ:
ಬುದ್ಧಿವಂತಿಕೆಯಿಂದ ಕಠಿಣ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೀರಿ. ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದ್ದು, ಹೂಡಿಕೆಗಳಿಂದ ಲಾಭ ಪಡೆಯುವ ಸಾಧ್ಯತೆ ಇದೆ.
ಮಿಶ್ರ ಫಲದ ರಾಶಿಗಳು:
ಮೇಷ ರಾಶಿ:
ವ್ಯಯ ಸ್ಥಾನದಲ್ಲಿ ಈ ಸಂಯೋಗವಿರುವುದರಿಂದ ಖರ್ಚುಗಳು ಹೆಚ್ಚಾಗಬಹುದು. ಆದರೆ ವಿದೇಶಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಉತ್ತಮ ಲಾಭ ಸಿಗಲಿದೆ. ಆರೋಗ್ಯದ ಕಡೆ ಗಮನವಿರಲಿ.
ಸಿಂಹ ರಾಶಿ:
ಅಷ್ಟಮ ಸ್ಥಾನದ ಈ ಯುತಿಯು ಹಠಾತ್ ಧನಲಾಭ ತರಬಹುದು, ಆದರೆ ವಾಹನ ಚಲಾಯಿಸುವಾಗ ಮತ್ತು ಸಂವಹನದಲ್ಲಿ ಜಾಗ್ರತೆ ಅಗತ್ಯ.
ತುಲಾ ರಾಶಿ:
ಶತ್ರುಗಳ ಮೇಲೆ ಜಯ ಸಾಧಿಸುತ್ತೀರಿ. ಸಾಲದ ಹೊರೆ ಕಡಿಮೆಯಾಗಲಿದೆ, ಆದರೆ ಗುಪ್ತ ರೋಗಗಳು ಅಥವಾ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗಳ ಬಗ್ಗೆ ಎಚ್ಚರವಿರಲಿ.
ಧನು ರಾಶಿ:
ಸುಖ ಸ್ಥಾನದಲ್ಲಿ ಈ ಗ್ರಹಗಳಿರುವುದರಿಂದ ಮನೆ ಅಥವಾ ಆಸ್ತಿ ಖರೀದಿಗೆ ಯೋಗವಿದೆ. ಆದರೆ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಬಹುದು.
ಅಶುಭದ ರಾಶಿಗಳು
ಕನ್ಯಾ ರಾಶಿ:
ಸಪ್ತಮ ಸ್ಥಾನದಲ್ಲಿ ಈ ಸಂಯೋಗವಿರುವುದರಿಂದ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.
ಮಕರ ರಾಶಿ:
ತೃತೀಯ ಸ್ಥಾನದಲ್ಲಿ ಈ ಯುತಿ ಇರುವುದರಿಂದ ಧೈರ್ಯ ಹೆಚ್ಚಾಗುತ್ತದೆ, ಆದರೆ ಒಡಹುಟ್ಟಿದವರೊಂದಿಗೆ ವಾಗ್ವಾದ ಉಂಟಾಗುವ ಸಾಧ್ಯತೆ ಇದೆ. ಸಣ್ಣ ಪ್ರಯಾಣಗಳು ಅಡೆತಡೆಗಳಿಂದ ಕೂಡಿರಬಹುದು.
ಕುಂಭ ರಾಶಿ:
ಎರಡನೇ ಮನೆಯಲ್ಲಿ ಈ ಗ್ರಹಗಳಿರುವುದರಿಂದ ಮಾತಿನ ಮೇಲೆ ನಿಯಂತ್ರಣವಿರಲಿ. ಕುಟುಂಬದಲ್ಲಿ ಕಲಹವಾಗದಂತೆ ನೋಡಿಕೊಳ್ಳಿ. ಕಣ್ಣಿನ ಸಮಸ್ಯೆಗಳ ಬಗ್ಗೆ ಜಾಗ್ರತೆ ಅಗತ್ಯ.
ಮೀನ ರಾಶಿ:
ನಿಮ್ಮದೇ ರಾಶಿಯಲ್ಲಿ ಈ ನಾಲ್ಕು ಗ್ರಹಗಳಿರುವುದರಿಂದ ಮಾನಸಿಕ ಒತ್ತಡ ಹೆಚ್ಚಿರಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಬೇಡ. ಶನಿ ಮತ್ತು ಕುಜನ ಪ್ರಭಾವದಿಂದಾಗಿ ಕೋಪದ ಮೇಲೆ ಹತೋಟಿ ಇರಲಿ.
– ಲೋಹಿತ ಹೆಬ್ಬಾರ್