ಬೆಂಗಳೂರು, ಮೇ 16: ನೀಟ್ ಪರೀಕ್ಷೆ (NEET Exam) ಅಕ್ರಮ ದೇಶಾದ್ಯಂತ ಸದ್ದು ಮಾಡುತ್ತಿದೆ. ಬಗೆದಷ್ಟು ನೀಟ್ ಮಾಫಿಯಾ ಬಯಲಾಗುತ್ತಿದೆ. ಒಂದೆಡೆ ಪರೀಕ್ಷಾ ಅಕ್ರಮಕ್ಕೆ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಆದರೆ ಈ ಮಧ್ಯೆ ರಾಜ್ಯದ (Karnataka) ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ಒಂದು ಒದಗಿಬಂದಿದೆ. ಅದೇನೆಂದರೆ ರಾಜ್ಯಕ್ಕೆ ಹೆಚ್ಚುವರಿ 1122 ಸರ್ಕಾರಿ ಮೆಡಿಕಲ್ ಸೀಟ್ಗಳು ಮಂಜೂರಾಗಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಘೋಷಿಸಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ.
ಮುಖ್ಯಾಂಶಗಳು
- ಮೆಡಿಕಲ್ ಸೀಟ್ ಲಭ್ಯತೆಯಲ್ಲಿ ಕರ್ನಾಟಕದ ಹೊಸ ದಾಖಲೆ
- ರಾಜ್ಯಕ್ಕೆ ದಾಖಲೆಯ 1,122 ಹೆಚ್ಚುವರಿ ಮೆಡಿಕಲ್ ಸೀಟುಗಳ ಮಂಜೂರಾತಿ
- ಮೆಡಿಕಲ್ ಸೀಟ್ ಲಭ್ಯತೆಯಲ್ಲಿ ಕರ್ನಾಟಕದ ಹೊಸ ದಾಖಲೆ
ಶನಿವಾರ ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್, ರಾಜ್ಯದಲ್ಲಿ ಮೆಡಿಕಲ್ ಸೀಟು ಲಭ್ಯತೆ ಹೆಚ್ಚಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ಲಭಿಸಲಿದೆ. ರಾಜ್ಯಕ್ಕೆ ಹೆಚ್ಚುವರಿ 1122 ಸೀಟುಗಳು ದೊರೆಯಲಿವೆ ಎಂದರು. ನಮ್ಮ ರಾಜ್ಯದ ವೈದ್ಯಕೀಯ ಕ್ಷೇತ್ರದ ದೇಶದಲ್ಲೇ ಮುಂಚೂಣಿಯಲ್ಲಿದೆ. ಒಂದು ರಾಜ್ಯಕ್ಕೆ ಒಂದೇ ಬಾರಿ ಸಾವಿರಕ್ಕೂ ಹೆಚ್ಚು ಮೆಡಿಕಲ್ ಸೀಟು ಸಿಕ್ಕಿರುವುದು ದಾಖಲೆಯಾಗಿದೆ. ಇದು ಕರ್ನಾಟಕದ ಸಾಧನೆಗೆ ಪೂರಕ ಸಾಕ್ಷಿ ಎಂದು ಅವರು ಹೇಳಿದರು.
ಎಲ್ಲೆಲ್ಲಿ ಹೆಚ್ಚುವರಿ ಸೀಟು?
ಹೊಸದಾಗಿ ಮಂಜೂರಾದ ಸೀಟುಗಳು ಕೊಪ್ಪಳ, ಗದಗ, ಚಾಮರಾಜನಗರ, ಕಾರವಾರ, ಕಾವೇರಿ ಸೇರಿದಂತೆ ಹಲವು ಜಿಲ್ಲೆಗಳ ವೈದ್ಯಕೀಯ ಕಾಲೇಜುಗಳಿಗೆ ಹಂಚಿಕೆಯಾಗಲಿವೆ.
1090 ಕೋಟಿ ರೂ ಅನುದಾನ
ಕೇಂದ್ರ ಸರ್ಕಾರ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಮೇ 15ರಂದು ಇದಕ್ಕೆ ಅಂತಿಮ ಮುದ್ರೆ ಹಾಕಿದೆ. ಪದವಿಪೂರ್ವ ವೈದ್ಯಕೀಯ ಸೀಟುಗಳಿಗೆ 495 ಕೋಟಿ ರೂ. ಹಾಗೂ ಸ್ನಾತಕೋತ್ತರ ಸೀಟುಗಳಿಗೆ 541 ಕೋಟಿ ರೂ. ಸೇರಿ ಒಟ್ಟು 1090 ಕೋಟಿ ರೂ. ಅನುದಾನ ರಾಜ್ಯಕ್ಕೆ ದೊರೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ: ‘ಎರಡು ವರ್ಷದ ಶ್ರಮ ವ್ಯರ್ಥವಾಯಿತು’: ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ
ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ಕರ್ನಾಟಕದಲ್ಲಿ ಈಗ ವಿಫುಲ ಅವಕಾಶಗಳು ಸೃಷ್ಟಿಯಾಗಿವೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಾ. ಶರಣಪ್ರಕಾಶ ಪಾಟೀಲ್ ಕರೆ ನೀಡಿದರು.
ರಾಜ್ಯದ ಮೆಡಿಕಲ್ ಸೀಟುಗಳ ವಿವರ
- ಒಟ್ಟು ವೈದ್ಯಕೀಯ ಕಾಲೇಜು- 72 (ಖಾಸಗಿ, ಡೀಮ್ಡ್ ಸೇರಿ)
- ಈಗ ಲಭ್ಯವಿರುವ UG ಸೀಟು- 13,945
- ಈಗ ಲಭ್ಯವಿರುವ PG ಸೀಟು- 7,727
- ಹೊಸದಾಗಿ ಸೇರ್ಪಡೆಯಾದ ಸೀಟು- 1,122
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 5:53 pm, Sat, 16 May 26