Headlines

ನೀಟ್-ಯುಜಿ ಪೇಪರ್ ಲೀಕ್ ಹಗರಣ: ಸಿಬಿಐ ತನಿಖೆಯಲ್ಲಿ ಬಿಗ್ ಟ್ವಿಸ್ಟ್; ಬ್ಯೂಟಿಷಿಯನ್ ಬಿಚ್ಚಿಟ್ಟ ಸ್ಫೋಟಕ ರಹಸ್ಯವೇನು? – Kannada News | NEET UG Paper Leak Case: CBI Probe Points to Key Role of Beautician

ಪುಣೆ, ಮೇ 18: ದೇಶದ ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ(NEET – UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳಿಗೆ ಬೆಚ್ಚಿಬೀಳಿಸುವ ಮಾಹಿತಿಗಳು ಲಭ್ಯವಾಗಿವೆ. ಪುಣೆಯ 46 ವರ್ಷದ ಬ್ಯೂಟಿಷಿಯನ್ ಒಬ್ಬರು ಈ ಇಡೀ ಜಾಲದ “ಪ್ರಮುಖ ಕೊಂಡಿ”ಯಾಗಿ ಕೆಲಸ ಮಾಡಿರುವುದು ಪತ್ತೆಯಾಗಿದೆ. ಈ  ಮೂಲಕ ಪರೀಕ್ಷಾ ಮಂಡಳಿಯ (NTA) ಉನ್ನತ ಮಟ್ಟದ ಅಧಿಕಾರಿಯೇ ಈ ಸೋರಿಕೆಯ ಮಾಸ್ಟರ್‌ಮೈಂಡ್ ಆಗಿರುವುದು ತನಿಖೆಯಲ್ಲಿ ಬಯಲಾಗಿದೆ.

ಎನ್‌ಟಿಎ (NTA) ಸಮಿತಿಯ ತಜ್ಞೆಯೇ ಸೂತ್ರಧಾರಿ
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA)ಯ 2026ನೇ ಸಾಲಿನ ನೀಟ್-ಯುಜಿ ಪ್ರಶ್ನೆ-ನಿಗದಿ ಸಮಿತಿಯ ತಜ್ಞೆಯಾಗಿದ್ದ 57 ವರ್ಷದ ಮನೀಷಾ ಗುರುನಾಥ್ ಮಾಂಧರೆ ಅವರನ್ನು ಸಿಬಿಐ ಬಂಧಿಸಿದೆ. ಈಕೆಗೆ ಸಸ್ಯಶಾಸ್ತ್ರ (Botany) ಮತ್ತು ಪ್ರಾಣಿಶಾಸ್ತ್ರ (Zoology) ಎರಡೂ ವಿಷಯಗಳ ಅಂತಿಮ ಪ್ರಶ್ನೆಪತ್ರಿಕೆಗಳನ್ನು ನೋಡಲು ಅವಕಾಶವಿತ್ತು. ಆರ್ಥಿಕ ಲಾಭಕ್ಕಾಗಿ ಮಾಂಧರೆ ಈ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷೆಗೂ ಮುನ್ನವೇ ಸೋರಿಕೆ ಮಾಡಿದ್ದರು ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಇವರನ್ನು 14 ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ.

ಪುಣೆಯ ಸುಖಸಾಗರ್ ನಗರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮನೀಷಾ ವಾಘ್ಮೋರೆ ಈ ಪ್ರಕರಣದ ಪ್ರಮುಖ ಕೊಂಡಿಯಾಗಿದ್ದಾರೆ. ಈಕೆಗೆ ಮಾಂಧರೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಸಮಿತಿಯಲ್ಲಿದ್ದಾರೆ ಎಂಬ ವಿಷಯ ತಿಳಿದ ತಕ್ಷಣ, ಇಬ್ಬರೂ ಸೇರಿ ಸೋರಿಕೆಯ ಮಾಸ್ಟರ್ ಪ್ಲಾನ್ ರೂಪಿಸಿದ್ದರು. ಇವರಿಗೆ ನಿವೃತ್ತ ಶಿಕ್ಷಕಿ ಪಿವಿ ಕುಲಕರ್ಣಿ ಸಾಥ್ ನೀಡಿದ್ದರು.

ವಾಘ್ಮೋರೆ ತನ್ನ ಪಾರ್ಲರ್‌ಗೆ ಬರುತ್ತಿದ್ದ ಗ್ರಾಹಕರು ಹಾಗೂ ಟ್ಯೂಷನ್ ಶಿಕ್ಷಕರನ್ನು ಹುಡುಕುತ್ತಿದ್ದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಪ್ರಶ್ನೆಪತ್ರಿಕೆ ಖರೀದಿಸಲು ಸೂಕ್ತ ಅಭ್ಯರ್ಥಿಗಳನ್ನು ಹುಡುಕಲು ಆರಂಭಿಸಿದ್ದಳು.

ಪ್ರತಿ ವಿದ್ಯಾರ್ಥಿಗೆ 10 ಲಕ್ಷ ರೂಪಾಯಿಯ ಡೀಲ್!
ಮೂಲಗಳ ಪ್ರಕಾರ, ಸಿಕ್ಕಿಬಿದ್ದಿರುವ ಆರೋಪಿಗಳು ಪ್ರತಿ ವಿದ್ಯಾರ್ಥಿಯಿಂದ ಪ್ರಶ್ನೆಪತ್ರಿಕೆಗಾಗಿ ಬರೋಬ್ಬರಿ 10 ಲಕ್ಷ ರೂಪಾಯಿ ಲೂಟಿ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ಈ ಮೊತ್ತದಲ್ಲಿ ಬ್ಯೂಟಿಷಿಯನ್ ವಾಘ್ಮೋರೆ, ಎನ್‌ಟಿಎ ತಜ್ಞೆ ಮಾಂಧರೆ ಮತ್ತು ನಿವೃತ್ತ ಶಿಕ್ಷಕಿ ಕುಲಕರ್ಣಿ ತಲಾ 2.5 ಲಕ್ಷದಿಂದ 3 ಲಕ್ಷ ರೂಪಾಯಿಗಳವರೆಗೆ ಹಂಚಿಕೊಳ್ಳಲು ನಿರ್ಧರಿಸಿದ್ದರು. ವಾಘ್ಮೋರೆ ಈಗಾಗಲೇ ನಾಲ್ಕೈದು ವಿದ್ಯಾರ್ಥಿಗಳನ್ನು ಈ ಜಾಲಕ್ಕೆ ಸಿಲುಕಿಸಿದ್ದಳು.

ಮತ್ತಷ್ಟು ಓದಿ: ವೃತ್ತಿಯಲ್ಲಿ ಬ್ಯೂಟಿಷಿಯನ್, ಗಂಡ ದಂತವೈದ್ಯ; ನೀಟ್ ಹಗರಣದಲ್ಲಿ ಸಿಕ್ಕಿಬಿದ್ದ ಮನಿಷಾ ಬಗ್ಗೆ ನಿಮಗೆಷ್ಟು ಗೊತ್ತು?

ವಾಘ್ಮೋರೆ ತಾನು ಪಡೆದ ಪ್ರಶ್ನೆಪತ್ರಿಕೆಯನ್ನು ತನ್ನ ಹಳೆಯ ಸ್ನೇಹಿತ ಧನಂಜಯ್ ಲೋಖಂಡೆಗೆ ರವಾನಿಸಿದ್ದಳು. ಆತ ನಾಸಿಕ್‌ನಲ್ಲಿ ಕೌನ್ಸೆಲಿಂಗ್ ವ್ಯವಹಾರ ನಡೆಸುತ್ತಿದ್ದ ಶುಭಂ ಖೈರ್ನಾರ್‌ಗೆ ತಲುಪಿಸಿದ್ದ. ಶುಭಂ ಈ ಪ್ರಶ್ನೆಪತ್ರಿಕೆಯ ಪಿಡಿಎಫ್ (PDF) ಫೈಲ್‌ಗಳನ್ನು ಗುರುಗ್ರಾಮ್‌ನ ಯಶ್ ಯಾದವ್ ಮತ್ತು ಜೈಪುರದ ಇತರೆ ದಲ್ಲಾಳಿಗಳಿಗೆ ಹಂಚಿದ್ದ. ಕಳೆದ ಮಂಗಳವಾರ ಪರೀಕ್ಷೆ ರದ್ದಾದ ಕೆಲವೇ ಗಂಟೆಗಳಲ್ಲಿ ಮೊದಲ ಶಂಕಿತ ಖೈರ್ನಾರ್‌ನನ್ನು ಬಂಧಿಸಿದ ಸಿಬಿಐ, ಸಾಲು ಸಾಲು ಆರೋಪಿಗಳನ್ನು ವಶಕ್ಕೆ ಪಡೆದಿದೆ.

ಸದ್ಯ ಸಿಬಿಐ ಈ ಜಾಲದ ಆಳ ಅಗಲವನ್ನು ಹುಡುಕುತ್ತಿದ್ದು, ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಇನ್ನೂ ಹಲವಾರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ದೊಡ್ಡ ಮಟ್ಟದ ಸಂಘಟಿತ ಅಪರಾಧ ತಂಡ ಇದರ ಹಿಂದೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡಿದ ಈ ಹಗರಣದ ಸಂಪೂರ್ಣ ಸತ್ಯವನ್ನು ಹೊರತರಲು ಸಿಬಿಐ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *