ತುಮಕೂರು, ಫೆ.26: ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ನಡೆದ ಡಿಪ್ಲೊಮಾ ವಿದ್ಯಾರ್ಥಿ ಧನುಷ್ (19) ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದ್ದ ಧನುಷ್, ವಾಟ್ಸಾಪ್ ಮತ್ತು ಫೇಸ್ಬುಕ್ನಲ್ಲಿ ಭಾವನಾತ್ಮಕ ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾಗಿರುವುದು ಈಗ ಬೆಳಕಿಗೆ ಬಂದಿದೆ. ತುರುವೇಕೆರೆ ತಾಲೂಕಿನ ಗೋಪ್ಪೆನಹಳ್ಳಿ ನಿವಾಸಿಯಾದ ಧನುಷ್, ಪಟ್ಟಣದ ಸರ್ಕಾರಿ ಡಿಪ್ಲೊಮಾ ಕಾಲೇಜಿನಲ್ಲಿ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದ. ನಿನ್ನೆ ಬೆಳಿಗ್ಗೆ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ಬಂದಿದ್ದ ಆತ ಸಂಜೆಯಾದರೂ ವಾಪಸ್ ಹೋಗಿರಲಿಲ್ಲ. ಪೋಷಕರು ಕರೆ ಮಾಡಿದರೂ ರಿಸೀವ್ ಮಾಡದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಡಿಪ್ಲೊಮಾ ಕಾಲೇಜಿನ ಹಿಂಭಾಗ ಇರುವ ಕಟ್ಟೆಯೊಂದರ ಬಳಿ ಬ್ಯಾಗ್, ಚಪ್ಪಲಿ, ಮೊಬೈಲ್ ಪತ್ತೆಯಾಗಿದೆ. ಈ ಬಗ್ಗೆ ಕೊಡಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದಾರೆ. ಇದೇ ವೇಳೆ ನೀರಿನ ಕಟ್ಟೆ ಬಳಿ ವಿದ್ಯಾರ್ಥಿ ಧನುಷ್ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕಟ್ಟೆಯಿಂದ ಹೊರತೆಗೆದು ತುರುವೇಕೆರೆ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿತ್ತು. ಘಟನೆ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಹೊಸ ಟ್ವಸ್ಟ್ ಸಿಕ್ಕಿದೆ. ಧನುಷ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಮೊಬೈಲ್ನಲ್ಲಿ ಮನಕಲಕುವ ಸ್ಟೇಟಸ್ ಹಾಕಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ಗಿರಿ; ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಜಾತಿ ನಿಂದನೆ ಮಾಡಿದ ಅಪ್ಪ-ಮಗ
ನೀನೇ ಖುಷಿಯಾಗಿರು, ನಾನು ಈ ಪ್ರಪಂಚವನ್ನೇ ಬಿಟ್ಟು ಹೋಗುತ್ತಿದ್ದೇನೆ… ಬಾಯ್” ಎಂದು ಬರೆದುಕೊಂಡು ನೀರಿನ ಕಟ್ಟೆಯ ಫೋಟೋ ಹಾಕಿದ್ದ ಎನ್ನಲಾಗಿದೆ. ಇದು ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ನಡೆದ ಘಟನೆಯೇ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಮಗನ ಸಾವಿನ ಸುದ್ದಿ ಕೇಳಿ ಧನುಷ್ ಮನೆಯವರು ದುಃಖ ಪಡುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ