ನೆಲಮಂಗಲಕ್ಕೆ ಬಂದ ಮಹಾರಾಷ್ಟ್ರಆರ್ಟಿಓ ಅಧಿಕಾರಿಗೆ ‘ಬಿಷ್ಣೋಯ್’ ಗ್ಯಾಂಗ್ ಬೆದರಿಕೆ!
ನೆಲಮಂಗಲ, ಏಪ್ರಿಲ್ 18: ಮಹಾರಾಷ್ಟ್ರ ನೋಂದಣಿ ಇಲ್ಲದೆ ಸಂಚರಿಸುತ್ತಿದ್ದ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದ ಅಧಿಕಾರಿಗಳಿಗೆ ಅಪರಿಚಿತ ಗ್ಯಾಂಗ್‌ನಿಂದ ಬೆದರಿಕೆ ಕರೆ ಬಂದಿರುವ ಘಟನೆ ಬೆಳಕಿಗೆ ಬಂದಿದೆ. ಆಲ್ ಇಂಡಿಯಾ ಮೋಟಾರ್ ವೆಹಿಕಲ್ ಫೆಡರೇಷನ್ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ಗೆ ಆಗಮಿಸಿದ್ದ ಮಹಾರಾಷ್ಟ್ರದ ಆರ್‌ಟಿಒ ಅಧಿಕಾರಿಗೆ ಬೆದರಿಕೆ ಕರೆ ಬಂದಿದ್ದು, ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಿಕೆಟ್ ಟೂರ್ನಮೆಂಟ್ಗೆ ಬಂದಿದ್ದ ಅಧಿಕಾರಿ
ಮಹಾರಾಷ್ಟ್ರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಅಧಿಕಾರಿ ಪ್ರಸಾದ್ ಶಿವದಾಸ್ ನಾಲ್ವಡೆ ಕಳೆದ ವಾರ ಬೆಂಗಳೂರುಗೆ ಆಗಮಿಸಿ, ಆಲ್ ಇಂಡಿಯಾ ಮೋಟಾರ್ ವೆಹಿಕಲ್ ಫೆಡರೇಷನ್ ವತಿಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಅಭಿಯಾನದ ಭಾಗವಾಗಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವು ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕ ರೈಸಿಂಗ್ ಸ್ಟಾರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿತ್ತು.
ಏಪ್ರಿಲ್ 12ರಂದು ಗುಣಿ ಅಗ್ರಹಾರ ಪ್ರದೇಶದಲ್ಲಿದ್ದ ವೇಳೆ ಅವರಿಗೆ ಈ ಬೆದರಿಕೆ ಕರೆ ಬಂದಿದ್ದರಿಂದ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿಯೇ ಈ ಪ್ರಕರಣ ದಾಖಲಾಗಿದ್ದು, ಕರೆ ಮಾಡಿದವರ ಬಗ್ಗೆ ತನಿಖೆ ಆರಂಭಿಸಲಾಗಿದೆ.
ಇದನ್ನೂ ಓದಿ ಬೆಂಗಳೂರಿನಲ್ಲಿ ನಿಲ್ಲದ ಡ್ರ್ಯಾಗ್ ರೇಸ್ ಹಾಗೂ ಸ್ಟಂಟ್‌ಗಳ ಹುಚ್ಚಾಟ! ವಿಡಿಯೋ ವೈರಲ್
ಆಟೋ ಚಾಲಕರ ಮೇಲೆ ಕಠಿಣ ಕ್ರಮ ಕೈಗೊಂಡಿದ್ದಕ್ಕೆ ಬೆದರಿಕೆ
ಅಧಿಕಾರಿಗೆ ರವಿ ಬಿಷ್ಣೋಯಿ ಗ್ಯಾಂಗ್ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಲಾಗಿದ್ದು, ಆಟೋ ಚಾಲಕರಿಗೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದೀರಿ, ಇದರ ಪರಿಣಾಮ ನಿಮ್ಮ ಕುಟುಂಬದ ಮೇಲೆ ಬೀಳುತ್ತದೆ ಎಂದು ಧಮ್ಕಿ ಹಾಕಲಾಗಿದೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ದಾಖಲೆ ಇಲ್ಲದ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಬೆದರಿಕೆ ಹಾಕಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪ್ರಕರಣದ ಹಿನ್ನೆಲೆ ಹಾಗೂ ಗ್ಯಾಂಗ್ ಸಂಪರ್ಕಗಳ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 12:08 pm, Sat, 18 April 26