
ನೆಲಮಂಗಲ, ಏಪ್ರಿಲ್ 9: ನೆಲಮಂಗಲದ ಅಡಕಮಾರನಹಳ್ಳಿಯಲ್ಲಿನ ಆಹಾರ ಸಂಗ್ರಹ ಗೋದಾಮಿನಲ್ಲಿ ಬುಧವಾರ ರಾತ್ರಿ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಆಂಜನೇಯ ದೇಗುಲದ ಬಳಿ ಇರುವ ಗೋದಾಮಿನಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ ಗೋದಾಮಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳು ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಅವಘಡದ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ನೆಲಮಂಗಲ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ರಾತ್ರಿ ಸುಮಾರು 10 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ದುರಂತ ಸಂಭವಿಸಿರಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಈ ಗೋದಾಮು 18 ವರ್ಷಗಳ ಹಿಂದೆ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ರಾತ್ರಿ ವೇಳೆ ಘಟನೆ ಸಂಭವಿಸಿದ್ದರಿಂದ ಯಾವುದೇ ಕಾರ್ಮಿಕರು ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ ಎಂದು ಗೋದಾಮಿನ ಮಾಲಿಕ ಪದ್ಮರಾಜ್ ತಿಳಿಸಿದ್ದಾರೆ.
ವರದಿ: ಮಂಜುನಾಥ್, ಟಿವಿ9 ನೆಲಮಂಗಲ