Headlines

ನೆಹರು ದಾಖಲೆ ಮುರಿದ ಪ್ರಧಾನಿ ಮೋದಿ: ಜಗತ್ತಿನಾದ್ಯಂತ ಹರಿದುಬಂದ ಅಭಿನಂದನೆಗಳ ಮಹಾಪೂರ, ವಿಶ್ವ ನಾಯಕರು ಹೇಳಿದ್ದೇನು? – Kannada News

ನವದೆಹಲಿ, ಜೂನ್ 10: ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಸತತ 4,399 ದಿನಗಳ ಸುಸ್ಥಿರ ಆಡಳಿತ ಪೂರೈಸಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಸ್ವತಂತ್ರ ಭಾರತದಲ್ಲಿ ಸತತವಾಗಿ ಅತಿ ದೀರ್ಘ ಅವಧಿಗೆ ಚುನಾಯಿತರಾದ ಮೊದ ಪ್ರಧಾನಿ ಎಂಬ ಐತಿಹಾಸಿಕ ಮೈಲಿಗಲ್ಲನ್ನು ಅವರು ಸ್ಥಾಪಿಸಿದ್ದಾರೆ.

ಭಾರತವನ್ನು ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿ ಬೆಳೆಸಿದ ಹಾಗೂ ಜಾಗತಿಕ ವೇದಿಕೆಯಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ಪ್ರಧಾನಿ ಮೋದಿಯವರ ಈ ಅಪೂರ್ವ ಸಾಧನೆಗೆ ದೇಶ-ವಿದೇಶಗಳ ಪ್ರಮುಖ ನಾಯಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಯಾರು ಏನು ಹೇಳಿದರು ಇಲ್ಲಿದೆ ಮಾಹಿತಿ.

ಜಾಗತಿಕ ನಾಯಕರ ಹಾರೈಕೆ
ಮೊಹಮ್ಮದ್ ಮುಯಿಝು (ಮಾಲ್ಡೀವ್ಸ್ ಅಧ್ಯಕ್ಷ): ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಈ ಮೈಲಿಗಲ್ಲು ತಲುಪಿದ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪರಸ್ಪರ ಗೌರವ ಮತ್ತು ಸಾರ್ವಭೌಮ ಸಮಾನತೆಯ ಆಧಾರದ ಮೇಲೆ ಭಾರತದೊಂದಿಗೆ ಸಹಕಾರವನ್ನು ಮತ್ತಷ್ಟು ಬಲಪಡಿಸಬೇಕೆಂಬುದು ಮಾಲ್ಡೀವ್ಸ್  ಆಶಯ ಎಂದರು.

ಮುಯಿಝು ಪೋಸ್ಟ್​

ಬೋಲಾ ಅಹ್ಮದ್ ಟಿನುಬು (ನೈಜೀರಿಯಾ ಅಧ್ಯಕ್ಷ): ಈ  ಐತಿಹಾಸಿಕ ಸಾಧನೆಯು ಭಾರತದ ಜನರು ಸತತ ಮೂರು ಅವಧಿಗಳಲ್ಲಿ ಅವರ ನಾಯಕತ್ವದ ಮೇಲೆ ಇಟ್ಟಿರುವ ಅಚಲ ವಿಶ್ವಾಸಕ್ಕೆ ಸಾಕ್ಷಿ. ಪ್ರಧಾನಿ ಮೋದಿ ಅವರು ನೈಜೀರಿಯಾದ ಆಪ್ತ ಸ್ನೇಹಿತ. ಅವರ ಬುದ್ಧಿವಂತಿಕೆ ಮತ್ತು ಧೈರ್ಯ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ ಎಂದಿದ್ದಾರೆ.

ಅನುರ ಕುಮಾರ ದಿಸಾನಾಯಕ (ಶ್ರೀಲಂಕಾ ಅಧ್ಯಕ್ಷ): ಈ ಮೈಲಿಗಲ್ಲು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಜನರು ನಿಮ್ಮ ನಾಯಕತ್ವದ ಮೇಲೆ ಪದೇ ಪದೇ ಇಟ್ಟಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. (2022 ರ ಆರ್ಥಿಕ ಬಿಕ್ಕಟ್ಟಿನ ವೇಳೆ ಭಾರತ ನೀಡಿದ ಬೆಂಬಲ ಹಾಗೂ 2025 ರಲ್ಲಿ ಪ್ರಧಾನಿ ಮೋದಿಯವರಿಗೆ ಲಂಕಾದ ಅತ್ಯುನ್ನತ ‘ಮಿತ್ರ ವಿಭೂಷಣ’ ಗೌರವ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು).

ಶ್ರೀಲಂಕಾ ಅಧ್ಯಕ್ಷರ ಪೋಸ್ಟ್​

ಜೇಮ್ಸ್ ಮರಾಪೆ (ಪಪುವಾ ನ್ಯೂಗಿನಿಯಾ ಪ್ರಧಾನಿ): ವಿಶೇಷ ವೀಡಿಯೊ ಸಂದೇಶ ಕಳುಹಿಸಿರುವ ಅವರು, ಪ್ರಧಾನಿ ಮೋದಿಯವರನ್ನು ನಾಯಕತ್ವದ ಅದ್ಭುತ ಮಾದರಿ ಎಂದು ಬಣ್ಣಿಸಿದ್ದಾರೆ. ಭಾರತದಲ್ಲಿ 20 ಕೋಟಿಗೂ ಅಧಿಕ ಜನರನ್ನು ಬಡತನದಿಂದ ಮೇಲೆತ್ತಿದ ಮೋದಿಯವರ ಸಾಧನೆಯನ್ನು ಅವರು ಶ್ಲಾಘಿಸಿದ್ದಾರೆ.

ಕಮಲಾ ಪ್ರಸಾದ್-ಬಿಸ್ಸೆಸ್ಸರ್ (ಟ್ರಿನಿಡಾಡ್ ಮತ್ತು ಟೊಬೆಗೊ ಪ್ರಧಾನಿ): ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದಾಗಿ ಭಾರತವು ಜಾಗತಿಕ ವಿಷಯಗಳಲ್ಲಿ ಅತ್ಯಂತ ಪ್ರಮುಖ ಧ್ವನಿಯಾಗಿ ವಿಕಸನಗೊಂಡಿದೆ. ಅತ್ಯಂತ ಸಾಮಾನ್ಯ ಮೂಲದಿಂದ ಬಂದು 1.4 ಬಿಲಿಯನ್ ಜನಸಂಖ್ಯೆಯ ರಾಷ್ಟ್ರವನ್ನು ಮುನ್ನಡೆಸುತ್ತಿರುವ ಅವರ ಪ್ರಯಾಣ ಅದ್ಭುತ.

ಅಮೆರಿಕ ರಾಯಭಾರಿ ಶ್ಲಾಘನೆ
ರಾಯಭಾರಿ ಸೆರ್ಗಿಯೊ ಗೋರ್ (ಭಾರತದಲ್ಲಿನ ಯುಎಸ್ ರಾಯಭಾರಿ): ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತದ ಅತಿ ಹೆಚ್ಚು ಕಾಲ ಚುನಾಯಿತ ಪ್ರಧಾನಿಯಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ಈ ಸಾಧನೆಯು ಅವರ ದಶಕಗಳ ಸಮರ್ಪಿತ ಸಾರ್ವಜನಿಕ ಸೇವೆ ಮತ್ತು ಪ್ರಬಲ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಅವರಿಗೆ ಶುಭ ಹಾರೈಕೆಗಳು ಎಂದು ಬರೆದಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಒಟ್ಟು 14 ವರ್ಷ ಅಧಿಕಾರದಲ್ಲಿದ್ದರೂ ಅವರ ಅವಧಿ ಸತತವಾಗಿರಲಿಲ್ಲ. ಹೀಗಾಗಿ, 2014 ರಿಂದ ಆರಂಭಿಸಿ ಸತತ ಮೂರು ಬಾರಿ ಭರ್ಜರಿ ಜನಾದೇಶ ಪಡೆದು ಮುನ್ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಜಕೀಯ ಚರಿತ್ರೆಯಲ್ಲಿ ಅಪ್ರತಿಮ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದಾರೆ ಎಂದು ಜಾಗತಿಕ ರಾಜತಾಂತ್ರಿಕ ವಲಯ ಬಿಂಬಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *