ಕೆಲವೊಂದು ವಸ್ತುಗಳು ದೈನಂದಿನ ಜೀವನದ ಭಾಗವಾಗಿದ್ದು, ಅವುಗಳನ್ನು ನಿತ್ಯ ಬಳಕೆ ಮಾಡೇ ಮಾಡುತ್ತೇವೆ. ಹೌದು ಹಲ್ಲುಜ್ಜುವ ಬ್ರಷ್ (Toothbrush), ಟವೆಲ್, ತಲೆ ದಿಂಬು, ನೀರಿನ ಬಾಟಲಿ ಹೀಗೆ ಕೆಲವೊಂದು ವಸ್ತುಗಳನ್ನು ಪ್ರತಿನಿತ್ಯ ಬಳಕೆ ಮಾಡುತ್ತೇವೆ. ನೈರ್ಮಲ್ಯದ ದೃಷ್ಟಿಯಿಂದ ಮನೆಯಲ್ಲಿ ಬಳಸುವಂತ ಈ ಪ್ರತಿಯೊಂದು ವಸ್ತುವನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸಬೇಕು. ಹೌದು ಅನೇಕ ಗೃಹೋಪಯೋಗಿ ವಸ್ತುಗಳನ್ನು ದೀರ್ಘಕಾಲದವರೆಗೆ ಬಳಸಿದಾಗ, ಅವುಗಳಲ್ಲಿ ಕೊಳಕು ಮತ್ತು ಬ್ಯಾಕ್ಟೀರಿಯಾಗಳು ಸಂಗ್ರಹವಾಗಬಹುದು. ಸಮಯಕ್ಕೆ ಸರಿಯಾಗಿ ಬದಲಾಯಿಸದಿದ್ದರೆ, ಅವು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಗೃಹಪಯೋಗಿವ ವಸ್ತುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮಾತ್ರವಲ್ಲ ಅವುಗಳನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸುವುದು ಸಹ ನಿರ್ಣಾಯಕವಾಗಿದೆ. ಆದ್ದರಿಂದ, ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಈ ಕೆಲವು ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸಬೇಕು.
ಈ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸುತ್ತಿರಬೇಕು:
ಟೂತ್ ಬ್ರಷ್:
ಹಲ್ಲುಜ್ಜುವ ಬ್ರಷ್ಗಳನ್ನು 3 ರಿಂದ 4 ತಿಂಗಳಿಗೊಮ್ಮೆ ಬದಲಾಯಿಸುತ್ತಿರಬೇಕು. ಏಕೆಂದರೆ ಈ ಟೂತ್ಬ್ರಷ್ಗಳಲ್ಲಿ ನಿಧಾನಕ್ಕೆ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಇರುತ್ತದೆ. ಇದು ಬಾಯಿಯ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ ಟೂತ್ಬ್ರಷ್ಗಳನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸಿ.
ಪಾತ್ರೆ ತೊಳೆಯುವ ಸ್ಪಂಜುಗಳು ಮತ್ತು ಸ್ಕ್ರಬ್ಗಳು:
ಪಾತ್ರೆ ತೊಳೆಯುವ ಸ್ಪಂಜುಗಳು ಮತ್ತು ಸ್ಕ್ರಬ್ಬರ್ಗಳ ತೇವಾಂಶದಿಂದಾಗಿ ಅವುಗಳಲ್ಲಿ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾಗಳು ಬೆಳೆಯುತ್ತದೆ. ಇದು ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಆದ್ದರಿಂದ, ಪ್ರತಿ 1-2 ವಾರಗಳಿಗೊಮ್ಮೆ ಅಡುಗೆಮನೆಯ ಸ್ಪಂಜುಗಳು ಮತ್ತು ಸ್ಕ್ರಬ್ಬರ್ಗಳನ್ನು ಬದಲಾಯಿಸುವುದು ಉತ್ತಮ.
ಪ್ಲಾಸ್ಟಿಕ್ ಐಸ್ ಕ್ಯೂಬ್ ಟ್ರೇಗಳು:
ಪ್ಲಾಸ್ಟಿಕ್ ಐಸ್ ಕ್ಯೂಬ್ ಟ್ರೇಗಳು ಫ್ರೀಜರ್ನಲ್ಲಿದ್ದರೂ ಸಹ, ಅವು ಕಾಲಾನಂತರದಲ್ಲಿ ಕೊಳಕಾಗಬಹುದು. ಪ್ಲಾಸ್ಟಿಕ್ನಲ್ಲಿರುವ ಸಣ್ಣ, ಅಗೋಚರ ಬಿರುಕುಗಳು ಮತ್ತು ಗೀರುಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಬೆಳೆಯಬಹುದು. ಇದು ಫ್ರಿಡ್ಜ್ನಲ್ಲಿ ಕೆಟ್ಟ ವಾಸನೆ ಬರಲು ಸಹ ಕಾರಣವಾಗಬಹುದು. ಆದ್ದರಿಂದ ಇವುಗಳನ್ನು ಪ್ರತಿ 2 ವರ್ಷಗಳಿಗೊಮ್ಮೆ ಬದಲಾಯಿಸಬೇಕು.
ನೀರಿನ ಬಾಟಲಿಗಳು :
ಮರುಬಳಕೆ ಮಾಡಬಹುದಾದ ಬಾಟಲಿಗಳಾಗಿದ್ದರೂ ಸಹ, ನೀವು ಅವುಗಳನ್ನು ಪ್ರತಿದಿನ ತೊಳೆದರೂ ಸಹ, ಬಾಟಲ್ ಮುಚ್ಚಳಗಳು ಅಥವಾ ಸ್ಟ್ರಾಗಳಲ್ಲಿ ಸಿಲುಕಿರುವ ತೇವಾಂಶವು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗಬಹುದು. ಆದ್ದರಿಂದ ಆರು ತಿಂಗಳಿಗೊಮ್ಮೆ ನೀರಿನ ಬಾಟಲಿಗಳನ್ನು ಬದಲಾಯಿಸುತ್ತಿರಬೇಕು. ಪ್ಲಾಸ್ಟಿಕ್ ಬಾಟಲಿಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುವ ಸ್ಟೇನ್ಲೆಸ್ ಸ್ಟೀಲ್ ಬಾಟಲಿಗಳನ್ನು ಬಳಸುವುದು ಉತ್ತಮ.
ಸ್ನಾನದ ಟವೆಲ್ಗಳು:
ಬಾತ್ ಟವೆಲ್ಗಳನ್ನು ಪ್ರತಿನಿತ್ಯ ಬಳಕೆ ಮಾಡುತ್ತೇವೆ. ಇದನ್ನು ಕೂಡ ಕಾಲ ಕಾಲಕ್ಕೆ ಬದಲಾಯಿಸುತ್ತಿರಬೇಕು. ನೀವು ಆಗಾಗ್ಗೆ ನಿಮ್ಮ ಟವೆಲ್ಗಳನ್ನು ತೊಳೆಯುತ್ತಿದ್ದರೂ ಸಹ, ಪ್ರತಿ ಎರಡು ವರ್ಷಗಳಿಗೊಮ್ಮೆ ಹಳೆ ಟವೆಲ್ ಬಿಸಾಕಿ ಹೊಸ ಟವಲ್ ಬಳಸುವುದು ಒಳ್ಳೆಯದು. ಟವೆಲ್ಗಳು ಹೆಚ್ಚಾಗಿ ತೇವವಾಗಿರುವುದರಿಂದ ಬ್ಯಾಕ್ಟೀರಿಯಾಗಳು ಅವುಗಳ ಮೇಲೆ ಸುಲಭವಾಗಿ ಬೆಳೆಯಬಹುದು. ಇದು ನಿಮ್ಮ ಚರ್ಮಕ್ಕೆ ಹಾನಿಯನ್ನುಂಟುಮಾಡಬಹುದು. ಆದ್ದರಿಂದ ಟವೆಲ್ಗಳನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸಿ.
ಸಾಕ್ಸ್ ಮತ್ತು ಒಳ ಉಡುಪು:
ದಿನನಿತ್ಯ ಬಳಸುವ ಸಾಕ್ಸ್ ಮತ್ತು ಒಳ ಉಡುಪುಗಳು ಪದೇ ಪದೇ ತೊಳೆಯುವುದರಿಂದ ಕ್ರಮೇಣ ಅವು ಸವೆಯಬಹುದು. ಬಟ್ಟೆ ಸವೆಯಲು ಪ್ರಾರಂಭಿಸಿದರೆ ಅಥವಾ ಫಿಟ್ ಬದಲಾದರೆ ಅವುಗಳನ್ನು ಬದಲಾಯಿಸಬೇಕು. ಸಾಮಾನ್ಯವಾಗಿ, ಪ್ರತಿ 6-12 ತಿಂಗಳಿಗೊಮ್ಮೆ ಅವುಗಳನ್ನು ಬದಲಾಯಿಸುವುದು ಉತ್ತಮ.
ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೂ ಮುನ್ನ ಮನೆಯನ್ನು ಈ ರೀತಿ ಸ್ವಚ್ಛಗೊಳಿಸಿ
ರೇಜರ್ ಬ್ಲೇಡ್:
ಹಳೆಯ ರೇಜರ್ ಬ್ಲೇಡ್ಗಳಿಂದ ಶೇವಿಂಗ್ ಮಾಡುವುದರಿಂದ ಕಡಿತ ಮತ್ತು ಕಿರಿಕಿರಿಯ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ, ಉತ್ತಮ ಶೇವಿಂಗ್ ಮತ್ತು ಚರ್ಮದ ರಕ್ಷಣೆಗಾಗಿ, ಪ್ರತಿ 3 ರಿಂದ 6 ಶೇವ್ ಬಳಿಕ ರೇಜರ್ ಬ್ಲೇಡ್ಗಳನ್ನು ಬದಲಾಯಿಸಬೇಕು.
ಬಟ್ಟೆಯ ದಿನಸಿ ಚೀಲಗಳು:
ಅನೇಕರು ಪ್ಲಾಸ್ಟಿಕ್ ಚೀಲಗಳ ಬದಲಿಗೆ ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ಬಟ್ಟೆ ಚೀಲಗಳನ್ನು ಕೊಂಡೊಯ್ಯುತ್ತಾರೆ. ಈ ಬಟ್ಟೆ ಚೀಲದಲ್ಲಿ ಕೋಳಿ, ಮೀನು, ತರಕಾರಿಗಳನ್ನು ಹಾಕಿದಾಗ, ಅವುಗಳಲ್ಲಿರುವ ಸೂಕ್ಷ್ಮಜೀವಿಗಳು ಚೀಲಕ್ಕೆ ಅಂಟಿಕೊಳ್ಳುತ್ತವೆ. ಆದ್ದರಿಂದ ದಿನಸಿ ತಂದ ಬಳಿಕ ಚೀಲವನ್ನು ಸ್ವಚ್ಛಗೊಳಿಸಬೇಕು ಮತ್ತು ಅವುಗಳನ್ನು ಪ್ರತಿ 2 ವರ್ಷಗಳಿಗೊಮ್ಮೆ ಬದಲಾಯಿಸಬೇಕು.
ಬೆಡ್ ಶೀಟ್ಗಳು:
ಕಾಲ ಕಾಲಕ್ಕೆ ಬೆಡ್ಶೀಟ್ಗಳನ್ನು ತೊಳೆದರೂ ಸಹ ಅವುಗಳಲ್ಲಿ ಬೆವರು, ಸತ್ತ ಚರ್ಮದ ಕೋಶಗಳು, ದೇಹದ ಎಣ್ಣೆಗಳು ಮತ್ತು ಅದೃಶ್ಯ ಕೀಟಗಳು ಹಾಗೆಯೇ ಉಳಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ 2 ರಿಂದ 3 ವರ್ಷಗಳ ನಂತರ ಅವುಗಳನ್ನು ಬಿಸಾಗಿ ಹೊಸ ಬೆಡ್ಶೀಟ್ ಬಳಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ