ಟ್ರಸ್ಟಿ ಬಿ.ಸಿ ಉಮಾಪತಿ, ವಚನಾನಂದ ಶ್ರೀImage Credit source: tv9 kannada
ದಾವಣಗೆರೆ, ಏಪ್ರಿಲ್ 27: ಮಠದಲ್ಲಿ ಅನುದಾನ ಮತ್ತು ಭಕ್ತರ ದೇಣಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಹರಿಹರದ ಪಂಚಮಸಾಲಿ ಮಠದ (Harihara Panchamasali Peetha) ಆಡಳಿತ ಮಂಡಳಿ ಹಾಗೂ ವಚನಾನಂದ ಶ್ರೀ ಮಧ್ಯೆ ಬಹಿರಂಗ ಸಂಘರ್ಷಕ್ಕೆ ಕಾರಣವಾಗಿತ್ತು. ಈ ಬಗ್ಗೆ ಲೆಕ್ಕ ಕೊಡುವಂತೆ ವಚನಾನಂದ ಶ್ರೀ ಪಟ್ಟು ಹಿಡಿದಿದ್ದರು. ಈ ಬೆನ್ನಲ್ಲೇ ಇಂದು ಟ್ರಸ್ಟ್ ಸದಸ್ಯರು 2008 ರಿಂದ 2026ವರೆಗಿನ ಲೆಕ್ಕದ ಸಂಪೂರ್ಣ ವಿವರವನ್ನು ನೀಡಿದ್ದಾರೆ. ಈ ಲೆಕ್ಕವನ್ನ ನಾವು ಒಪ್ಪುವುದಿಲ್ಲ, ಇದು ಕಳ್ಳ ಲೆಕ್ಕ ಎಂದು ಸ್ವಾಮೀಜಿ ಹಾಗೂ ತಂಡ ಕಿಡಿಕಾರಿದ್ದಾರೆ. ಇನ್ನು ಇದೇ ವೇಳೆ ಮಠದ ಆವರಣ ಅಕ್ಷರಶಃ ರಣಾಂಗಣವಾಗಿತ್ತು. ವಚನಪಠಣ ಆಗಬೇಕಿದ್ದ ಜಾಗದಲ್ಲಿ ಬೈಗುಳ ಕೇಳಿಬಂದವು.
ಪಂಚಮಸಾಲಿ ಸಮುದಾಯ ನಾಡಿನ ದೊಡ್ಡ ಸಮುದಾಯಗಳಲ್ಲೊಂದು. ಇದೇ ಸಮುದಾಯದ ಬೆಳವಣಿಗೆಗೆ ಅಂತಾನೇ ಹರಿಹರದಲ್ಲಿ ಮಠ ಸ್ಥಾಪಿಸಲಾಗಿದೆ. ಆದರೆ ಇದೇ ಮಠದಲ್ಲಿ ಇಂದು ನಡೆದಿದ್ದು ಮಾತ್ರ ಬಿಗ್ ಹೈಡ್ರಾಮಾ.
ಇದನ್ನೂ ಓದಿ: ಕಳೆದ 18 ವರ್ಷದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತಾ?
ಹರಿಹರ ಪಂಚಮಸಾಲಿ ಪೀಠದ ಪೀಠಾಧಿಪತಿಯಾಗಿದ್ದ ವಚನಾನಂದ ಶ್ರೀಗಳನ್ನ ಹತ್ತಾರು ಕಾರಣ ನೀಡಿ ಮಠದಿಂದ ಉಚ್ಚಾಟನೆ ಮಾಡಲಾಗಿತ್ತು. ಪಂಚಮಸಾಲಿ ಟ್ರಸ್ಟ್ ತೆಗೆದುಕೊಂಡ ಇದೇ ನಿರ್ಧಾರ ಶ್ರೀಗಳ ಪರ ಇರುವ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನು ಉಚ್ಚಾಟನೆ ಮಾಡಿದ್ರೂ ಮಠ ತೊರೆಯದ ಶ್ರೀಗಳು, ಲೆಕ್ಕ ಕೊಡಿ ಅಂತಾ ಅಭಿಯಾನ ಆರಂಭಿಸಿದ್ದರು. ಇದೇ ಅಭಿಯಾನಕ್ಕೆ ಉತ್ತರ ಎಂಬಂತೆ ಮಠದ ಆವರಣದಲ್ಲೇ ಬಹಿರಂಗ ಸಭೆ ನಡೆಸಿದ ಟ್ರಸ್ಟ್ ಸದಸ್ಯರು 2008 ರಿಂದ 2026 ರವರೆಗಿನ ಲೆಕ್ಕ ಕೊಟ್ಟಿದ್ದಾರೆ.
18 ವರ್ಷಗಳಲ್ಲಿ 27,61,57,017 ರೂ. ದೇಣಿಗೆ ಸಂಗ್ರಹ
ಕಳೆದ 18 ವರ್ಷಗಳಲ್ಲಿ ಮಠದ ಭಕ್ತರಿಂದ 27 ಕೋಟಿ 61 ಲಕ್ಷದ57 ಸಾವಿರದ17 ರೂಪಾಯಿ ದೇಣಿಗೆ ಸಂಗ್ರಹ ಆಗಿದೆ. ರಾಜ್ಯ ಸರ್ಕಾರ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಅಂತಾ 12 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಇನ್ನು ಮರಳು ಮಾರಾಟದಿಂದ 10 ಲಕ್ಷ ರೂಪಾಯಿ ಸಂಗ್ರಹವಾದರೆ, ತುಲಾಭಾರದಿಂದ4.5 ಕೋಟಿ ರೂ ಮೌಲ್ಯದ 174 ಕೆಜಿ ಬೆಳ್ಳಿ ಸಂಗ್ರಹವಾಗಿದೆ. 174 ಕೆಜಿ ಬೆಳ್ಳಿಯನ್ನು ಬ್ಯಾಂಕ್ ಲಾಕರ್ ಸುರಕ್ಷಿತವಾಗಿ ಇಡಲಾಗಿದೆ ಅಂತಾ ಟ್ರಸ್ಟ್‌ನವರು ಲೆಕ್ಕ ಒಪ್ಪಿಸಿದ್ದಾರೆ.
ಈ ಲೆಕ್ಕವನ್ನ ನಾವು ಒಪುವುದಿಲ್ಲ: ವಚನಾನಂದ ಶ್ರೀಗಳು
ಇನ್ನು ಲೆಕ್ಕ ಕೊಡುತ್ತಿರುವ ವೇಳೆ ಅತ್ತ ಮಠಕ್ಕೆ ಮಾಜಿ ಶಾಸಕರಾದ ಹೆಚ್‌ಎಸ್ ಶಿವಶಂಕರ್, ಅರುಣ್ ಪೂಜಾರ್ ಎಂಟ್ರಿ ಆಗಿದ್ರು. ಇಬ್ಬರನ್ನ ಸ್ವಾಗತಿಸಿದ ಸ್ವಾಮೀಜಿ ಪರ ಭಕ್ತರು, ಇದು ಕಳ್ಳ ಲೆಕ್ಕ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದು, ವೇದಿಕೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ತಳ್ಳಾಟ ನೂಕಾಟ ಉಂಟಾಯಿತು. ಈ ಲೆಕ್ಕವನ್ನ ನಾವು ಒಪುವುದಿಲ್ಲ ಎಂದು ವಚನಾನಂದ ಶ್ರೀಗಳು ಹೇಳಿದ್ದಾರೆ.
ಗೌರವದಿಂದ ಮಠ ಬಿಟ್ಟು ಹೋಗಿ ಎಂದ ಟ್ರಸ್ಟ್: ನೀವೆ ಮಠ ಖಾಲಿ ಮಾಡಿ ಎಂದ ವಚನಾನಂದ ಶ್ರೀ
ಲೆಕ್ಕದ ಗಲಾಟೆ ಒಂದುಕಡೆಯಾದರೆ, ಟ್ರಸ್ಟ್‌ನವರು ಇಂದು ಮನಗೂಳಿ ಶ್ರೀಗಳನ್ನ ಕರೆಸಿ ಲೆಕ್ಕಪತ್ರದ ಕಾರ್ಯಕ್ರಮ ನಡೆಸಿದರು. ಹೀಗಾಗಿ ವಚನಾನಂದ ಶ್ರೀಗಳ ಬದಲಾಗಿ ಬೇರೆಯವರನ್ನ ಪಟ್ಟ ಕಟ್ಟುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ಈ ಬಗ್ಗೆಯೂ ಮಾತನಾಡಿರುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಬಿ.ಸಿ ಉಮಾಪತಿ, ಶ್ರೀಗಳಿಗೆ ಗೌರವದಿಂದ ಹೋಗು ಅಂತಾ ಹೇಳಿದ್ದೇವೆ. ಇಲ್ಲದಿದ್ದರೆ ಮುಂದೆ ನೋಡಿಕೊಳ್ತೇವೆ ಎಂದಿದ್ದಾರೆ. ಆದರೆ ವಚನಾನಂದ ಶ್ರೀಗಳು ಮಾತ್ರ ನೀವೆ ಮಠ ಖಾಲಿ ಮಾಡಿ ಅಂತಾ ತಿರುಗೇಟು ಕೊಟ್ಟಿದ್ದಾರೆ.
ಮನಗೂಳಿ ಶ್ರೀಗಳ ಎಂಟ್ರಿ ವೇಳೆ ಬಿಗ್ ಹೈಡ್ರಾಮಾ!
ಸಭೆ ಬಳಿಕ ಮಹಾಂತ ಶ್ರೀಗಳ ಗದ್ದುಗೆ ದರ್ಶನಕ್ಕೆ ಮನಗೂಳಿ ಶ್ರೀಗಳು ಬಂದಿದ್ದರು. ಆಗ ಶ್ರೀಗಳ ಮೇಲೆಯೇ ಭಕ್ತರು ಬಾಟಲ್ ಎಸಿದಿದ್ದಾರೆ. ಆಗ ಮತ್ತೊಂದು ಸುತ್ತಿನ ಗಲಾಟೆ ಆಯ್ತು. ಹೀಗೆ ಪಂಚಮಸಾಲಿ ಒಳಜಗಳ ಈಗ ಬೀದಿಗೆ ಬಂದಿದ್ದು, ಇದು ಮತ್ತೆಲ್ಲಿಗೆ ಹೋಗಿ ನಿಲ್ಲುತ್ತೋ ಕಾದು ನೋಡ್ಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.