ಪಂದ್ಯ ಬಹಿಷ್ಕಾರದ ಹಿಂದಿದೆ ಪಾಕಿಸ್ತಾನದ 200 ಕೋಟಿ ನಷ್ಟದ ಲೆಕ್ಕಾಚಾರ! – Kannada News | ICC may suffer loss upto 200 crores if India vs Pakistan match gets cancelled

ಭಾರತ ಮತ್ತು ಪಾಕಿಸ್ತಾನ್ ನಡುವಣ ಟಿ20 ವಿಶ್ವಕಪ್ ಪಂದ್ಯ ನಡೆಯಲಿದೆಯಾ? ಈ ಪ್ರಶ್ನೆಗೆ ಉತ್ತರ ಸಿಗಲು ಇನ್ನೊಂದಷ್ಟು ದಿನಗಳವರೆಗೆ ಕಾಯಲೇಬೇಕು. ಏಕೆಂದರೆ ಟಿ20 ವಿಶ್ವಕಪ್​ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಬೆದರಿಕೆಯೊಡ್ಡಿದೆ. ಇದಕ್ಕೆ ಪಾಕಿಸ್ತಾನ್ ಸರ್ಕಾರ ಕೂಡ ಸಂಪೂರ್ಣ ಬೆಂಬಲ ನೀಡಿದೆ. ಹೀಗಾಗಿ ಫೆಬ್ರವರಿ 15 ರಂದು ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯಲಿದೆಯಾ ಎಂಬುದೇ ಈಗ ದೊಡ್ಡ ಪ್ರಶ್ನೆ.

ಇತ್ತ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ ಪಾಕಿಸ್ತಾನಕ್ಕೇನು ಲಾಭ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ 200 ಕೋಟಿ ರೂ. ನಷ್ಟದ ಲೆಕ್ಕಾಚಾರವೊಂದು ಉತ್ತರವಾಗಿ ಸಿಗುತ್ತದೆ. ಅಂದರೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಐಸಿಸಿ ಹಾಗೂ ಬಿಸಿಸಿಐ ಅನ್ನು ಇಕ್ಕಟಿಗೆ ಸಿಲುಕಿಸಲೆಂದೇ ಪಂದ್ಯ ಬಹಿಷ್ಕಾರದ ಬೆದರಿಕೆಯೊಡ್ಡಿದೆ.

200 ಕೋಟಿ ರೂ. ನಷ್ಟದ ಲೆಕ್ಕಾಚಾರ!

ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯದೇ ಇದ್ದರೆ ಐಸಿಸಿ ಆದಾಯಕ್ಕೆ ಹೊಡೆತ ಬೀಳುವುದು ಖಚಿತ. ಇತ್ತ ಈ ಬಾರಿ ಟಿ20 ವಿಶ್ವಕಪ್ ಅನ್ನು ಶ್ರೀಲಂಕಾ ಜೊತೆಗೂಡಿ ಬಿಸಿಸಿಐ ಆಯೋಜಿಸುತ್ತಿದೆ. ಹೀಗಾಗಿ ಬಿಸಿಸಿಐ ಕೂಡ ಈ ನಷ್ಟದ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಯಾವುದೇ ಐಸಿಸಿ ಪಂದ್ಯಾವಳಿಯಲ್ಲಿ ಭಾರತದ ಪಂದ್ಯಗಳು ಸುಮಾರು 100 ಕೋಟಿ ರೂ. ಗಳಿಸುತ್ತವೆ. ಇದೇ ವೇಳೆ ಭಾರತ-ಪಾಕಿಸ್ತಾನ್​ ನಡುವಣ ಪಂದ್ಯಗಳಲ್ಲಿ ಈ ಆದಾಯವು ಬಹುತೇಕ ದ್ವಿಗುಣಗೊಳ್ಳುತ್ತದೆ. ಅಂದರೆ ಕನಿಷ್ಠ 200 ಕೋಟಿ ರೂ. ಆದಾಯ ಸೃಷ್ಟಿಯಾಗುತ್ತದೆ.

ಈ ಆದಾಯದ ಮುಖ್ಯ ಮೂಲ ಜಾಹೀರಾತು. ಅದರಲ್ಲೂ ಪಂದ್ಯದ ನೇರ ಪ್ರಸಾರಕರು  ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ಪ್ರತಿ 10-ಸೆಕೆಂಡ್ ಜಾಹೀರಾತಿಗೆ ಸಾಮಾನ್ಯವಾಗಿ 25 ಲಕ್ಷದಿಂದ 40 ಲಕ್ಷ ರೂ.ಗಳನ್ನು ನಿಗದಿ ಮಾಡುತ್ತಾರೆ.

ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ರದ್ದಾದರೆ, ಜಾಹೀರಾತಿನ ಆದಾಯದ ಮೇಲೆ ನೇರ ಪರಿಣಾಮ ಬೀರಲಿದೆ. ಇದಲ್ಲದೆ ಟಿಕೆಟ್ ಮಾರಾಟ, ಇತರೆ ಮೂಲಗಳಿಂದ ಬರುವ ಆದಾಯಕ್ಕೂ ಹೊಡೆತ ಬೀಳಲಿದೆ.

ಇತ್ತ ಬಿಸಿಸಿಐ ಹಾಗೂ ಐಸಿಸಿ ಗಳಿಸಲಿರುವ ಆದಾಯಕ್ಕೆ ಹೊಡೆತ ನೀಡುವ ಸಲುವಾಗಿಯೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಇದೀಗ ಭಾರತದ ವಿರುದ್ಧದ ಪಂದ್ಯದ ಬಹಿಷ್ಕಾರಕ್ಕೆ ಪ್ಲ್ಯಾನ್ ರೂಪಿಸಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾಗೆ ಆಘಾತ

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ಈ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ತುರ್ತು ಸಭೆ ಕರೆದಿದೆ. ಅಲ್ಲದೆ ಪಿಸಿಬಿಗೆ ತನ್ನ ನಿಲುವನ್ನು ಬದಲಿಸುವಂತೆ ಮನವಿ ಮಾಡಿದೆ. ಇದಾಗ್ಯೂ ಪಾಕ್ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರವನ್ನು ಬದಲಿಸದೇ ಇದ್ದರೆ ಐಸಿಸಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

Published On – 1:54 pm, Mon, 2 February 26

Source link

Leave a Reply

Your email address will not be published. Required fields are marked *