ಪತ್ನಿಯಿಂದಲೇ ವೈದ್ಯನ ಕೊಲೆ Image Credit source: Tv9 Kannada
ಧಾರವಾಡ, ಜುಲೈ 16: ಪತ್ನಿಯಿಂದಲೇ ಅರವಳಿಕೆ ತಜ್ಞ ಡಾ. ಕಿರಣ ಕೊಲೆ ಪ್ರಕರಣ ಸಂಬಂಧ ಬಗೆದಷ್ಟೂ ಅಚ್ಚರಿಯ ವಿಚಾರಗಳು ಬಯಲಾಗುತ್ತಿವೆ. ಬೆಳಗಾವಿ ಜಿಲ್ಲೆಯ ಸಂಕೇಶ್ವರ ತಾಲೂಕಿನ ಹೆಬ್ಬಾಳದ ಕಿರಣ್ ಅವರಿಗೆ 9 ವರ್ಷಗಳ ಹಿಂದೆ ವಿಜಯಪುರದ ನೇತ್ರ ತಜ್ಞೆ ಡಾ. ಪ್ರಿಯಾಂಕಾ ಜೊತೆಗೆ ಮದುವೆ ಆಗಿತ್ತು. ವೈದ್ಯೆಯಾಗಿದ್ದರೂ ಆಕೆ ಪ್ರ್ಯಾಕ್ಟೀಸ್ಗೆ ತೆರಳದೆ ಮನೆಯಲ್ಲಿಯೇ ಇರುತ್ತಿದ್ದರು. ಜೊತೆಗೆ ಪತಿಯ ಕುಟುಂಬಸ್ಥರಿಂದಲೂ ಪ್ರಿಯಾಂಕಾ ದೂರವೇ ಉಳಿದಿದ್ದರು. ಕಿರಣ್ ಕಡೆಯವರು ಬಂದರೆ ಗಲಾಟೆ ಕೂಡ ಮಾಡುತ್ತಿದ್ದರು ಎನ್ನಲಾಗಿದೆ.
ಕೌಟುಂಬಿಕ ಕಲಹಕ್ಕೆ ಬೇಸತ್ತಿದ್ದ ಡಾ. ಕಿರಣ್
ಪ್ರಿಯಾಂಕಾ ಉತ್ತಮ ಆರ್ಥಿಕ ಸ್ಥಿತಿಯ ಹಿನ್ನೆಲೆ ಹೊಂದಿದ್ದರೆ ಕಿರಣ್ ಸಾಮಾನ್ಯ ವರ್ಗದಿಂದ ಬಂದವರು. ಹೀಗಾಗಿ ಅರವಳಿಕೆ ತಜ್ಞರಾಗಿದ್ದ ಇವರಿಗೆ ಬಡ ರೋಗಿಗಳ ಮೇಲೆ ವಿಶೇಷ ಕಾಳಜಿ ಇತ್ತು. ಅವರ ನಡವಳಿಕೆಯಿಂದ ಒಳ್ಳೆಯ ಹೆಸರು ಕೂಡ ಮಾಡಿದ್ದರು. ಆದರೆ ಮನೆಗೆ ತೆರಳಿದ ಕೂಡಲೇ ಪತ್ನಿ ಪ್ರಿಯಾಂಕಾ ಜಗಳ ತೆಗೆಯುತ್ತಿದ್ದ ಕಾರಣ ರೋಸಿದ್ದ ಅವರು ಇತ್ತೀಚಿನ ದಿನಗಳಲ್ಲಿ ಮೌನಕ್ಕೆ ಜಾರಿದ್ದರು. ಹೀಗಿದ್ದರೂ ಯಾರೊಂದಿಗೂ ತಮ್ಮ ಕೌಟುಂಬಿಕ ಸಮಸ್ಯೆಯನ್ನು ಹೇಳಿಕೊಂಡಿರಲಿಲ್ಲ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಮನೆಯಲ್ಲೇ ಅನಸ್ತೇಶಿಯಾ ತಜ್ಞನ ಭೀಕರ ಕೊಲೆ; ಪತ್ನಿಯಿಂದಲೇ ದುರಂತ ಅಂತ್ಯ ಕಂಡ ವೈದ್ಯ?
ಎರಡನೇ ಮದುವೆಯಾಗಿದ್ದ ಕಿರಣ್
ಡಾ.ಕಿರಣ್ ಹೊನ್ನಣ್ಣನವರ್ ಮತ್ತು ಪ್ರಿಯಾಂಕಾ ಪ್ರೀತಿಸಿ ಮದುವೆಯಾಗಿದ್ದರು. ತಮ್ಮ ಮೊದಲ ಪತ್ನಿ ಮತ್ತು ಪತಿಯಿಂದ ವಿಚ್ಛೇದನ ಪಡೆದಿದ್ದ ಇವರಿಗೆ ಮ್ಯಾಟ್ರಿಮೋನಿ ಮೂಲಕ ಪರಿಚಯ ಆಗಿತ್ತು. ಬಳಿಕ ಇಬ್ಬರೂ ಎರಡನೇ ವಿವಾಹ ಆಗಿದ್ದರು. ಆದರೆ ಪತಿ ಮೇಲೆ ಪ್ರಿಯಾಂಕಾ ನಿರಂತರವಾಗಿ ಅನುಮಾನಪಡುತ್ತಿದ್ದ ಕಾರಣ, ದಂಪತಿ ನಡುವೆ ಆಗಾಗ ಜಗಳ ಆಗುತ್ತಿತ್ತು. ಈ ನಡುವೆ ಕಿರಣ್ ಹೊನ್ನಣ್ಣನವರ್ ಅವರನ್ನು ನಿನ್ನೆ ಬೆಳಗ್ಗೆ ಚಾಕುವಿನಿಂದ ಇರಿದು ಪ್ರಿಯಾಂಕಾ ಕೊಲೆ ಮಾಡಿದ್ದಾರೆ. ಬಳಿಕ ಬಳಿಕ ಪುತ್ರ ನಿಹಿಲ್ಗೆ 2 ಕಡೆ ಚಾಕುವಿನಿಂದ ಇರಿದಿದ್ದಾರೆ. ಮನೆಗೆ ಹೋದಾಗ ಬಾಲಕ ಉಸಿರಾಡುವುದನ್ನು ಗಮನಿಸಿದ್ದ ಪೊಲೀಸರು, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಬಾಲಕ ನಿಹಿಲ್ಗೆ ಚಿಕಿತ್ಸೆ ಮುಂದುವರಿದಿದೆ.
ತಪ್ಪೊಪ್ಪಿಕೊಂಡಿರುವ ಆರೋಪಿ
ತಾನೇ ಕೊಲೆ ಮಾಡಿರುವುದಾಗಿ ಪ್ರಿಯಾಂಕಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಹುಬ್ಬಳ್ಳಿಯ ಕಿಮ್ಸ್ನಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗ್ತಿದೆ. ಕೊಲೆ ಬಳಿಕ ಆಕೆ ತಾನೂ ಇನ್ಸುಲಿನ್ ಚುಚ್ಚಿಕೊಂಡಿದ್ದ ಕಾರಣ ಲೋ ಶುಗರ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಪ್ರಿಯಾಂಕಾ ಆರೋಗ್ಯ ಸ್ಥಿರವಾಗಿದ್ದು, ಶುಗರ್ ಏರುಪೇರು ಬಿಟ್ಟರೆ ಬೇರೆ ಸಮಸ್ಯೆ ಇಲ್ಲ. ಮಾನಸಿಕ ಅಥವಾ ಇತರ ಯಾವುದೇ ಕಾಯಿಲೆ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂದು ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಈಶ್ವರ್ ಹಸಬಿ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.