ಪರಪುರುಷನೊಂದಿಗಿರುವ ಫೋಟೋ ವಾಟ್ಸಾಪ್ ಸ್ಟೇಟಸ್ ಹಾಕಿದ ಪತ್ನಿ! ನೊಂದ ಪತಿ ಸಾವಿಗೆ ಶರಣು
ದಾಂಡೇಲಿ/ಬೆಂಗಳೂರು: ರಾಜ್ಯದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೌಟುಂಬಿಕ ಕಲಹ ಹಾಗೂ ಕಿರುಕುಳಕ್ಕೆ ಇಬ್ಬರು ಬಲಿಯಾಗಿದ್ದಾರೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ದಾಂಡೇಲಿಯಲ್ಲಿ ಪತ್ನಿಯ ಅನೈತಿಕ ಸಂಬಂಧ (Affair) ಹಾಗೂ ಮಾನಸಿಕ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇತ್ತ ರಾಜಧಾನಿ ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬರು ನೇಣಿಗೆ ಶರಣಾಗಿದ್ದಾರೆ.
ಪತ್ನಿಯ ಟಾರ್ಚರ್ಗೆ ಮಲೇಷ್ಯಾ ಉದ್ಯೋಗಿ ಸಾವು
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ರಾಘವೇಂದ್ರ ವಾಡಕರ ಎಂಬುವವರು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಒಂದು ವಾರದ ಹಿಂದಷ್ಟೇ ದಾಂಡೇಲಿಗೆ ಮರಳಿದ್ದರು. ಅವರು ಮರಳುತ್ತಿದ್ದಂತೆಯೇ ಪತ್ನಿ ಮೇಘಾ ಇಬ್ಬರು ಮಕ್ಕಳೊಂದಿಗೆ ಧಾರವಾಡದ ತವರು ಮನೆಗೆ ತೆರಳಿದ್ದರು.
ರಾಘವೇಂದ್ರ ಒಟ್ಟಿಗೆ ಸಂಸಾರ ಮಾಡೋಣ ಬಾ ಎಂದು ಕರೆದರೂ ಪತ್ನಿ ನಿರಾಕರಿಸಿದ್ದಳು. ನಿನ್ನ ಜೊತೆ ಸಂಸಾರ ಮಾಡಲು ಇಷ್ಟವಿಲ್ಲ, ಸತ್ತು ಹೋಗು ಎಂದು ಹೇಳಿದ್ದಲ್ಲದೆ, ಬೇರೊಬ್ಬ ಪುರುಷನ ಜೊತೆಗಿನ ಫೋಟೋಗಳನ್ನು ಸ್ಟೇಟಸ್ ಹಾಕಿಕೊಂಡು ಪತಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಳು ಎನ್ನಲಾಗಿದೆ. ತನ್ನ ಅನೈತಿಕ ಸಂಬಂಧದ ಬಗ್ಗೆ ಗಂಡನ ಬಳಿ ಬಹಿರಂಗವಾಗಿ ಹೇಳಿಕೊಂಡಿದ್ದ ಮೇಘಾ, ರಾಘವೇಂದ್ರ ಕೈ ಕೊಯ್ದುಕೊಂಡು ಫೋಟೋ ಕಳುಹಿಸಿದಾಗಲೂ ನೀನು ಸತ್ತರೂ ನನಗೆ ತೊಂದರೆಯಿಲ್ಲ ಎಂದು ಕ್ರೂರವಾಗಿ ಪ್ರತಿಕ್ರಿಯಿಸಿದ್ದಳು. ಈ ಎಲ್ಲಾ ಅವಮಾನ ಮತ್ತು ಕಿರುಕುಳದ ಬಗ್ಗೆ ಡೆತ್ ನೋಟ್ನಲ್ಲಿ ಉಲ್ಲೇಖಿಸಿ ರಾಘವೇಂದ್ರ ಸಾವನ್ನಪ್ಪಿದ್ದಾರೆ. ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ
ಬೆಂಗಳೂರಿನ ಹುಳಿಮಾವಿನ ಹಳೆಯ ಪೋಸ್ಟ್ ಆಫೀಸ್ ಬಳಿ ವಂದನಾ (23) ಎಂಬುವವರು ಪತಿ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ವಿಕ್ರಂ ಶೇಷ ಎಂಬುವವರ ಜೊತೆ ಇವರ ವಿವಾಹವಾಗಿತ್ತು. ಈ ದಂಪತಿಗೆ ಮೂರು ತಿಂಗಳ ಮಗುವಿದೆ. ಮದುವೆಯ ಸಮಯದಲ್ಲಿ 4 ಲಕ್ಷ ರೂಪಾಯಿ ಖರ್ಚು ಮಾಡಿ ಬೈಕ್ ಹಾಗೂ ಚಿನ್ನಾಭರಣಗಳನ್ನು ನೀಡಿದ್ದರೂ, ಪತಿ ಹಾಗೂ ಕುಟುಂಬಸ್ಥರು ಪದೇ ಪದೇ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ವಂದನಾ ಪೋಷಕರು ಆರೋಪಿಸಿದ್ದಾರೆ.
ಇದನ್ನೂ ಓದಿ ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಎಸ್ಕೇಪ್: ಮಕ್ಕಳಿಬ್ಬರನ್ನು ಸಾಯಿಸಿ ತಾನೂ ನೇಣಿಗೆ ಶರಣಾದ ಪತಿ!
ಹಲವು ಬಾರಿ ರಾಜಿ ಸಂಧಾನ ಮಾಡಿದ್ದರೂ ಆರೋಪಿಗಳು ಬುದ್ಧಿ ಕಲಿತಿರಲಿಲ್ಲ. ಇದೀಗ ಗಂಡನ ಮನೆಯವರೇ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೋಷಕರು ದೂರು ನೀಡಿದ್ದು, ಪತಿ ವಿಕ್ರಂ ಶೇಷ, ಮಾವ ಶ್ರೀನಿವಾಸ್ ಮತ್ತು ಮೈದುನ ವಿನಿಷ್ ವಿರುದ್ಧ ಹುಳಿಮಾವು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ