ಬಿ.ವೈ. ವಿಜಯೇಂದ್ರImage Credit source: PTI
ಬೆಂಗಳೂರು, ಜೂನ್ 21: ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕರಿಂದ ಅಡ್ಡಮತದಾನ ಹಿನ್ನೆಲೆ ದೇವರ ಮೇಲೆ ಆಣೆ ಪ್ರಮಾಣ ಮಾಡಿಸಲು ರಾಜ್ಯ ಬಿಜೆಪಿ ಮುಂದಾಗಿದೆ. ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನ ಮಾಡಲಾಗಿದ್ದು, ಮುಂದಿನ ವಾರದಲ್ಲಿ ಈ ಮೀಟಿಂಗ್ ಸಾಧ್ಯತೆ ಇದೆ. ಸಭೆಯಲ್ಲಿ ಅಡ್ಡ ಮತದಾನದ ಬಗ್ಗೆ ಶಾಸಕರಿಂದ ಆಣೆ ಮಾಡಿ ಮಾಹಿತಿ ಸಂಗ್ರಹ ನಡೆಯಲಿದೆ.
ಮುಖ್ಯಾಂಶಗಳು
- ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ವಿಚಾರ
- ಪಕ್ಷಕ್ಕೆ ದ್ರೋಹ ಬಗೆದವರ ಪತ್ತೆಗೆ ಮುಂದಾದ ರಾಜ್ಯ ಬಿಜೆಪಿ
- ಧರ್ಮಸ್ಥಳದಲ್ಲಿ ಶಾಸಕರಿಂದ ಆಣೆ ಪ್ರಮಾಣಕ್ಕೆ ನಿರ್ಧಾರ
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ, ಪರಿಷತ್ ಚುನಾವಣೆಯಲ್ಲಿ ನಮ್ಮಿಂದ 4 ಅಡ್ಡ ಮತದಾನ ಆಗಿದೆ ಎಂಬ ಚರ್ಚೆ ಮಾಧ್ಯಮಗಳಲ್ಲಿ ನಡೆಯುತ್ತಿದೆ. ನಮ್ಮ ಕಾರ್ಯಕರ್ತರು, ಶಾಸಕರ ನಡವಳಿಕೆ ಬಗ್ಗೆ ಬೇಸರ ಪಟ್ಟಿದ್ದಾರೆ. ಹೀಗಾಗಿ ಎಲ್ಲ 63 ಶಾಸಕರ ಮೇಲೂ ಅನುಮಾನ ಪಡುವಂತಾಗಿದೆ. ನಿನ್ನೆ ನಿತಿನ್ ನಬಿನ್ ಅವರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದೇನೆ. ದೆಹಲಿಗೆ ನಾನು ಹಾಗೂ ಅಶೋಕ್ ಅವರು ಹೋಗುತ್ತಿದ್ದು, ಈ ವಾರದಲ್ಲೇ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಅಶೋಕ್ ಅವರ ಜತೆ ಚರ್ಚೆ ಮಾಡುತ್ತೇನೆ. ತಾಯಿಗೆ ದ್ರೋಹ ಮಾಡಿದ ಶಾಸಕರು ಯಾರೆಂದು ಶ್ರೀಕ್ಷೇತ್ರದಲ್ಲೇ ಗೊತ್ತಾಗಲಿ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಸೀಕ್ರೆಟ್ ಆಗಿ ಮಾಡಿದ್ದೇವೆ ಅನ್ಕೊಂಡಿದ್ದಾರೆ; ಬಿಜೆಪಿ ಶಾಸಕರ ಅಡ್ಡಮತದಾನದ ಬಗ್ಗೆ ಜೋಶಿ ಸ್ಫೋಟಕ ಹೇಳಿಕೆ
ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ನಿಂದ ಒಟ್ಟು 11 ಮತಗಳು ಕ್ರಾಸ್ ವೋಟಿಂಗ್ ಆಗಿತ್ತು. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಸೋಲುಂಡಿದ್ದರೆ, ಬಿಜೆಪಿಯ ಎರಡು ಅಭ್ಯರ್ಥಿಗಳ ಪೈಕಿ ಓರ್ವ ಅಭ್ಯರ್ಥಿ ಪ್ರಯಾಸದಲ್ಲಿ ಗೆಲುವು ಪಡೆದಿದ್ದರು. ಓರ್ವ ಅಭ್ಯರ್ಥಿಗೆ 30 ಮತಗಳು ಎಂದು ಕೊನೇ ಕ್ಷಣದಲ್ಲಿ ರಾಜ್ಯ ಬಿಜೆಪಿಯ ನಾಯಕರು ನಿರ್ಧರಿಸಿದ್ದ ಪರಿಣಾಮ ಎಲೆಕ್ಷನ್ನಲ್ಲಿ ಭಾರೀ ಮುಖಭಂಗ ಬಿಜೆಪಿಗೆ ತಪ್ಪಿತ್ತು. ಹೀಗಾಗಿ ಪಕ್ಷಕ್ಕೆ ದ್ರೋಹ ಬಗೆದ ಶಾಸಕರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.