Headlines

ಪರಿಷತ್ ಚುನಾವಣೆ ಅಡ್ಡಮತದಾನದ ಎಫೆಕ್ಟ್: ಬಿಜೆಪಿ ವರದಿ ಬೆನ್ನಲ್ಲೇ ಮೈತ್ರಿಕೂಟದಲ್ಲಿ ಮುನಿಸು! – Kannada News | BJP Fact Finding Report Sparks Rift in NDA Alliance Over Cross Voting Allegations

ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ, ಮೈತ್ರಿಯಲ್ಲಿ ಮುನಿಸು

ಬೆಂಗಳೂರು, ಜುಲೈ 01: ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ನಿರೀಕ್ಷಿತ ಮತಗಳು ಸಿಗದ ಹಿನ್ನೆಲೆಯಲ್ಲಿ ಅಡ್ಡ ಮತದಾನದ (Cross voting) ಆರೋಪ ಕೇಳಿಬಂದಿತ್ತು. ಈ ಕಾರಣಕ್ಕೆ ಎಮ್​ಎಲ್​ಸಿ ಸಿಟಿ ರವಿ ನೇತೃತ್ವದ ಸಮಿತಿ ಜೂನ್ 27ರಂದು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಆಂತರಿಕ ವರದಿ ನೀಡಿದ್ದು, ಎನ್‌ಡಿಎ ಮೈತ್ರಿಗೆ ಸೇರಿದ್ದ (ಬಿಜೆಪಿ, ಜೆಡಿಸ್) 12 ಮತಗಳಲ್ಲಿ ಒಂದು ಅಸಿಂಧುವಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಈ ವರದಿಗೂ ಮುನ್ನ ಬಿಜೆಪಿಯಲ್ಲಿದ್ದ ಆಂತರಿಕ ಅಸಮಾಧಾನ ಈಗ ಜೆಡಿಎಸ್ ಹೆಸರಿನ ಉಲ್ಲೇಖದೊಂದಿಗೆ ಮೈತ್ರಿಕೂಟದಲ್ಲಿ ದೊಡ್ಡ ಮಟ್ಟದ ಮುನಿಸಿಗೆ ಕಿಡಿ ಹೊತ್ತಿಸಿದೆ.

ಬಿಜೆಪಿ ಸಲ್ಲಿಸಿರುವ ಸತ್ಯಶೋಧನಾ ವರದಿಯಲ್ಲೇನಿದೆ?

ವಿಧಾನ ಪರಿಷತ್ ಚುನಾವಣೆಯ ಸೋಲಿನ ಪರಾಮರ್ಶೆ ನಡೆಸಲು ಬಿಜೆಪಿ ಹೈಕಮಾಂಡ್ ರಚಿಸಿದ್ದ ಸತ್ಯಶೋಧನಾ ಸಮಿತಿಯ ವರದಿ ಈಗ ಮೈತ್ರಿ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ವರದಿಯಲ್ಲಿ ಬಿಜೆಪಿಯಿಂದ 3 ಅಡ್ಡಮತ ಹಾಗೂ 1 ಅಸಿಂಧು ಮತ ಚಲಾವಣೆಯಾಗಿದೆ. ಜೊತೆಗೆ ಮೈತ್ರಿ ಪಕ್ಷವಾದ ಜೆಡಿಎಸ್‌ನಿಂದ ಬರೋಬ್ಬರಿ 8 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.  ಬಿಜೆಪಿ ನಾಯಕರ ಈ ಹೇಳಿಕೆಗಳು ಜೆಡಿಎಸ್ ಪಾಳಯವನ್ನು ಕೆರಳಿಸಿದೆ. ಯಾವುದೇ ಬಲವಾದ ದಾಖಲೆಗಳಿಲ್ಲದೆ ಜೆಡಿಎಸ್ ಶಾಸಕರ ಹೆಸರನ್ನು ಈ ವಿವಾದಕ್ಕೆ ಎಳೆದು ತಂದಿರುವುದಕ್ಕೆ ಪಕ್ಷದ ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಹೇಳಿಕೆಗೆ ಬ್ರೇಕ್ ಹಾಕಲು ಮನವಿ

ಬಿಜೆಪಿ ನಾಯಕರ ನಿರಂತರ ಆರೋಪಗಳಿಂದಾಗಿ ಜೆಡಿಎಸ್ ಶಾಸಕರ ಮೇಲೆ ಅನಗತ್ಯವಾಗಿ ಅನುಮಾನದ ನೆರಳು ಬೀಳುವಂತಾಗಿದೆ ಎಂದು ಶಾಸಕರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನ ಪ್ರಮುಖ ಶಾಸಕರು ತಮ್ಮ ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಬಳಿ ದೂರು ನೀಡಿದ್ದಾರೆ. ಮೈತ್ರಿ ಧರ್ಮಕ್ಕೆ ಧಕ್ಕೆ ತರುತ್ತಿರುವ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಕ್ಷಣವೇ ಬ್ರೇಕ್ ಹಾಕುವಂತೆ ವರಿಷ್ಠರ ಮೇಲೆ ಒತ್ತಡ ಹೇರಲಾಗಿದೆ.

ಇದನ್ನೂ ಓದಿ 12 ಶಾಸಕರು ಅಡ್ಡಮತದಾನ, ಕೋಡ್ ವರ್ಡ್ ಪಾಲಿಸದೇ ಎಡವಟ್ಟು: ಸತ್ಯಶೋಧನಾ ಸಮಿತಿ ವರದಿಯ ಸ್ಫೋಟಕ ಅಂಶ ಬಹಿರಂಗ

ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳಲ್ಲಿ ಅಡ್ಡ ಮತದಾನದ ಕುರಿತು ಅನಗತ್ಯ ಚರ್ಚೆಗಳನ್ನು ನಿಲ್ಲಿಸಲು ಉಭಯ ಪಕ್ಷಗಳ ಹಿರಿಯ ನಾಯಕರು ಸೂಚನೆ ನೀಡಬೇಕು ಎಂದು ಜೆಡಿಎಸ್ ಮನವಿ ಮಾಡಿದೆ. ಮೇಲ್ನೋಟಕ್ಕೆ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಯೇ ಇದೆಯೆಂಬಂತೆ ಕಂಡರೂ, ಬಿಜೆಪಿ ವರದಿಯ ಬಳಿಕ ಕಿಚ್ಚು ಹೆಚ್ಚಾಗಿರುವುದಂತೂ ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *