ಪರೀಕ್ಷೆ ಮುಗಿದ ಹತ್ತೇ ನಿಮಿಷದಲ್ಲಿ ಫಲಿತಾಂಶ ಪ್ರಕಟ! ವಿದ್ಯಾರ್ಥಿಗಳ ವಾಟ್ಸಪ್‌ಗೇ ಬಂತು ರಿಸಲ್ಟ್ – Kannada News | VTU Exam Results in 10 Minutes: Visvesvaraya Technological University Creates History

ಪರೀಕ್ಷೆ ಮುಗಿದ ಹತ್ತೇ ನಿಮಿಷದಲ್ಲಿ ಫಲಿತಾಂಶ ಪ್ರಕಟ

ಬೆಳಗಾವಿ, ಮೇ 23: ದೇಶದ ಇಂಜಿನಿಯರಿಂಗ್ ಶಿಕ್ಷಣ ರಂಗದಲ್ಲಿ ಹಿಂದೆಂದೂ ಕೇಳರಿಯದ ಅಪರೂಪದ ಮತ್ತು ಐತಿಹಾಸಿಕ ದಾಖಲೆಯೊಂದಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಸಾಕ್ಷಿಯಾಗಿದೆ. ರಾಜ್ಯದ 200ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳನ್ನು ಒಳಗೊಂಡಿರುವ ವಿಟಿಯು, ಬಿಇ ಹಾಗೂ ಬಿ.ಟೆಕ್ ಅಂತಿಮ ಸೆಮಿಸ್ಟರ್ ಪರೀಕ್ಷೆ ಮುಗಿದ ಕೇವಲ ಹತ್ತೇ ನಿಮಿಷಗಳಲ್ಲಿ ಫಲಿತಾಂಶ ಪ್ರಕಟಿಸಿ ಇತಿಹಾಸ ನಿರ್ಮಿಸಿದೆ.

ಮುಖ್ಯಾಂಶಗಳು

  • ವಿಟಿಯು ಪರೀಕ್ಷೆ ಮುಗಿದ ಕೇವಲ ಹತ್ತೇ ನಿಮಿಷದಲ್ಲಿ ಫಲಿತಾಂಶ ಪ್ರಕಟಿಸಿದೆ.
  • ಅತ್ಯಾಧುನಿಕ ಡಿಜಿಟಲ್ ಸಾಫ್ಟ್‌ವೇರ್ ಬಳಸಿ ಆಟೋಮ್ಯಾಟಿಕ್ ಆಗಿ ಮೌಲ್ಯಮಾಪನ ಮಾಡಲಾಗಿದೆ.
  • ಇಂಜಿನಿಯರಿಂಗ್ ಅಂತಿಮ ವರ್ಷದ ಫಲಿತಾಂಶವನ್ನು ವಿದ್ಯಾರ್ಥಿಗಳ ವಾಟ್ಸಪ್‌ಗೆ ಕಳುಹಿಸಲಾಗಿದೆ.

ವಾಟ್ಸಪ್‌ಗೇ ಬಂತು ರಿಸಲ್ಟ್

ಶುಕ್ರವಾರ ಸಂಜೆ 5:30ಕ್ಕೆ ಬಿಇ ಮತ್ತು ಬಿ.ಟೆಕ್ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಮುಕ್ತಾಯಗೊಂಡಿದ್ದವು. ಸರಿಯಾಗಿ 10 ನಿಮಿಷಗಳ ಬಳಿಕ, ಅಂದರೆ ಸಂಜೆ 5:40ರ ವೇಳೆಗೆ ವಿಶ್ವವಿದ್ಯಾಲಯವು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿ ಕ್ರಾಂತಿಕಾರಿ ಡಿಜಿಟಲ್ ತಂತ್ರಜ್ಞಾನದ ನೆರವೇರಿಕೆಯಿಂದ ಫಲಿತಾಂಶದ ವಿವರಗಳನ್ನು ನೇರವಾಗಿ ವಿದ್ಯಾರ್ಥಿಗಳ ಮೊಬೈಲ್‌ನ ವಾಟ್ಸಪ್ ಸಂಖ್ಯೆಗೆ ರವಾನಿಸಲಾಗಿದೆ. ಈ ಬಾರಿ ಒಟ್ಟು 56,192 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇಕಡಾ 99.98 ರಷ್ಟು ಅಭೂತಪೂರ್ವ ತೇರ್ಗಡೆ ದಾಖಲಾಗಿದೆ.

ಸಾಫ್ಟ್‌ವೇರ್ ಮೂಲಕ ಆಟೋಮ್ಯಾಟಿಕ್ ಮೌಲ್ಯಮಾಪನ

ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ವಿಟಿಯು ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಉತ್ತರ ಪತ್ರಿಕೆಯನ್ನು ವಿಶ್ವವಿದ್ಯಾಲಯದ ವಿಶೇಷ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಂತೆ, ತಂತ್ರಜ್ಞಾನದ ಸಹಾಯದಿಂದ ಅದು ತಾನಾಗಿಯೇ ವ್ಯಾಲ್ಯೂವೇಷನ್ ಮಾಡಿ ನಿಖರ ಫಲಿತಾಂಶವನ್ನು ಸಿದ್ಧಪಡಿಸಿದೆ. ಥಿಯರಿ ಪರೀಕ್ಷೆಗಳು ಮೇ 19ಕ್ಕೇ ಮುಗಿದು ಫಲಿತಾಂಶ ಸಿದ್ಧವಾಗಿತ್ತು. ಶುಕ್ರವಾರ ನಡೆದ ಕೊನೆಯ ಇಂಟರ್ನ್‌ಶಿಪ್ ಪ್ರಾಯೋಗಿಕ ಪರೀಕ್ಷೆಯ ಅಂಕಗಳು ಸರ್ವರ್‌ಗೆ ಅಪ್‌ಲೋಡ್ ಆಗುತ್ತಿದ್ದಂತೆ ಕೇವಲ 10 ನಿಮಿಷದಲ್ಲಿ ಅಂತಿಮ ರಿಸಲ್ಟ್ ಹೊರಬಿದ್ದಿದೆ.

ಇದನ್ನೂ ಓದಿ ಪುಷ್ಪ ಸಿನಿಮಾ ಶೈಲಿಯಲ್ಲಿ ಅಕ್ರಮ ಸ್ಪಿರಿಟ್ ಸಾಗಾಟ: 35 ಲಕ್ಷ ಮೌಲ್ಯದ ಟ್ಯಾಂಕರ್ ಜಪ್ತಿ, ಓರ್ವನ ಬಂಧನ!

ತ್ವರಿತವಾಗಿ ಮತ್ತು ಅತ್ಯಂತ ಯಶಸ್ವಿಯಾಗಿ ಫಲಿತಾಂಶ ಪ್ರಕಟಿಸಲು ಹಗಲಿರುಳು ಶ್ರಮಿಸಿದ ವಿಶ್ವವಿದ್ಯಾಲಯದ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಕುಲಪತಿ (ವಿಸಿ) ಪ್ರೊ. ಎಸ್. ವಿದ್ಯಾಶಂಕರ್ ಹಾಗೂ ಕುಲಸಚಿವರಾದ ಯು.ಜೆ. ಉಜ್ವಲ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವಿಟಿಯುನ ಈ ಮಾದರಿಯ ವಿದ್ಯಾರ್ಥಿ ಸ್ನೇಹಿ ವ್ಯವಸ್ಥೆ ಭಾರಿ ಸಂತಸ ತಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *