ಭಾರತದ ಸ್ಟಾರ್ ಆಲ್-ರೌಂಡರ್ ದೀಪ್ತಿ ಶರ್ಮಾ ಅಂತಾರಾಷ್ಟ್ರೀಯ ಮಹಿಳಾ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಜೂನ್ 14, 2026 ರಂದು ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ನ ಆರನೇ ಪಂದ್ಯದಲ್ಲಿ ದೀಪ್ತಿ ಸ್ಪಿನ್ ಮೋಡಿ ಮಾಡಿದ್ದರು. ಈ ಸ್ಪಿನ್ ಮೋಡಿಯೊಂದಿಗೆ ಪಾಕ್ ಪಡೆಯನ್ನು ಮಕಾಡೆ ಮಲಗಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ದೀಪ್ತಿ ವಿಶ್ವ ದಾಖಲೆ:
- ಅತ್ಯಧಿಕ ವಿಕೆಟ್: ದೀಪ್ತಿ ಶರ್ಮಾ ಮಹಿಳಾ ಟಿ20 ಅಂತಾರಾಷ್ಟ್ರೀಯ (WT20I) ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
- 166 ವಿಕೆಟ್: 145ನೇ ಟಿ20 ಪಂದ್ಯವನ್ನಾಡಿದ ದೀಪ್ತಿ, ವೃತ್ತಿಜೀವನದ 166ನೇ ವಿಕೆಟ್ ಪಡೆಯುವ ಮೂಲಕ ಥಾಯ್ಲೆಂಡ್ನ ಸ್ಪಿನ್ನರ್ ಥಿಪಾಟ್ಚಾ ಪುತ್ತವಾಂಗ್ (165 ವಿಕೆಟ್) ಅವರ ಜಾಗತಿಕ ದಾಖಲೆಯನ್ನು ಮುರಿದಿದ್ದಾರೆ.
- ವಿಶೇಷ ಸಾಧನೆ: ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಬೌಲರ್ ಒಬ್ಬರು ದಾಖಲಿಸಿದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ (5/10) ಇದಾಗಿದೆ.
- ಶ್ರೇಷ್ಠ ಪ್ರದರ್ಶನ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕೇವಲ 10 ರನ್ ನೀಡಿ 5 ಪ್ರಮುಖ ವಿಕೆಟ್ ಕಸಿದುಕೊಂಡು ಭಾರತ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.
ಟೀಮ್ ಇಂಡಿಯಾಗೆ ಭರ್ಜರಿ ಜಯ:
ಇಂಗ್ಲೆಂಡ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 44 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 68 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಭಾರತ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿತು.
171 ರನ್ಗಳ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡಕ್ಕೆ ದೀಪ್ತಿ ಶರ್ಮಾ ಆಘಾತದ ಮೇಲೆ ಆಘಾತ ನೀಡಿದರು. ಪರಿಣಾಮ ಪಾಕ್ ಪಡೆ 17 ಓವರ್ಗಳಲ್ಲಿ 106 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 64 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಇದನ್ನೂ ಓದಿ: 100 ಓವರ್, 600 ಎಸೆತಗಳು: ವೈಭವ್ ಸೂರ್ಯವಂಶಿ ಸಿಕ್ರೇಟ್ ಬಹಿರಂಗ!
ಇನ್ನು ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದ ದೀಪ್ತಿ ಶರ್ಮಾ ಕೇವಲ 10 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಭರ್ಜರಿ ಪ್ರದರ್ಶನದ ಫಲದೊಂದಿಗೆ ದೀಪ್ತಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.