ಪಾದಚಾರಿ ಅಲ್ಲ,ಸಾವಿನ ಮಾರ್ಗ: ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಏರುತ್ತಿದೆ ಪಾದಚಾರಿಗಳ ಸಾವಿನ ಸಂಖ್ಯೆ – Kannada News

ಬೆಂಗಳೂರು, (ಜೂನ್ 09): ಜನಸಂದಣಿ ಹೆಚ್ಚಿರುವ ಬೆಂಗಳೂರಿನ (Bengaluru)  ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮಳಿಗೆಗಳು ಫುಟ್‌ಪಾತ್‌ (footpaths) ಅತಿಕ್ರಮಿಸಿವೆ. ಬಹುತೇಕ ಅಂಗಡಿಗಳ ಮಾಲೀಕರು ಫುಟ್‌ಪಾತ್‌ಗಳಲ್ಲೂ ತಮ್ಮ ವ್ಯಾಪರ ವಿಸ್ತರಣೆ ಮಾಡಿದ್ದು, ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲೇ ಪ್ರದರ್ಶನಕ್ಕಿಡಲಾಗುತ್ತಿದೆ. ಇದೇ ರೀತಿ ನಗರದ ಇತರೆ ರಸ್ತೆಗಳಲ್ಲಿನ ಫುಟ್‌ಪಾತ್‌ಗಳು ಸಾರ್ವಜನಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಹೋಟೆಲ್‌ಗಳ ಟೇಬಲ್‌, ಅಂಗಡಿಗಳ ಸಾಮಗ್ರಿಗಳು, ನಾಮಫಲಕ, ಕಟ್ಟಡ ಕಾಮಗಾರಿ ವಸ್ತುಗಳು, ಹಣ್ಣು, ತರಕಾರಿ, ಬೋಂಡಾ-ಬಜ್ಜಿ ಕೈಗಾಡಿಗಳು ಸೇರಿದಂತೆ ಫಾಸ್ಟ್‌ಫುಡ್‌ ಅಂಗಡಿಗಳ ವ್ಯಾಪಾರಕ್ಕೆ ಫುಟ್‌ಪಾತ್‌ಗಳು ಬಳಕೆಯಾಗುತ್ತಿವೆ. ಇದರಿಂದ ಪಾದಾಚಾರಿಗಳ ಸಾವಿನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಹೌದು….ಪಾದಚಾರಿಗಳ ಸಾವಿನ ಸಂಖ್ಯೆ ನೋಡೋದಾದರೆ, 2023ರಲ್ಲಿ-232 ಸಾವು, 2024- 246, 2025-260, 2026(ಏಪ್ರಿಲ್ ತಿಂಗಳವರೆಗೆ) 90 ಜನರು ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದಾರೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಪಾದಾಚಾರಿಗಳ ಸಾವಿನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆ
  • ವ್ಯಾಪಾರಿಗಳ ಅಡ್ಡವಾದ ಪಾದಚಾರಿಗಳಿಗೆ ನಿರ್ಮಿಸಿದ ಬೆಂಗಳೂರಿನ ಅಂಡರ್‌ಪಾಸ್‌ಗಳು
  • ರಸ್ತೆ ದಾಟಲು ಪ್ರಾಣ ಕೈನಲ್ಲಿಟ್ಟುಕೊಂಡು ಓಡಾಡುತಿರೋ ಪಾದಚಾರಿಗಳು
  • ಎರಡು ವರ್ಷಾವಾದ್ರೂ ಜನರು ಓಡಾಡುವ ಸ್ಕೈವಾಕ್ ಗಿಲ್ಲ ಮುಕ್ತಿ

ಈ ಸಾವುಗಳನ್ನು ತಡೆಯಲು ನಿರ್ಮಿಸಲಾದ ಅಂಡರ್ ಪಾಸ್, ಸ್ಕೈವಾಕ್ ಗಳು ಮಾತ್ರ ಸಾರ್ವಜನಿಕರಿಗೆ ಬಳಕೆಯಾಗುತ್ತಿಲ್ಲ. ನಗರದ ಬಹುತೇಕ ಪಾದಚಾರಿ ಮಾರ್ಗಗಳು ವಿವಿಧ ಕಾರಣಗಳಿಂದ ಒತ್ತುವರಿಯಾಗಿರುತ್ತವೆ. ಹೀಗಾಗಿ ಸಾರ್ವಜನಿಕರು ಓಡಾಡಲು ಅನಿವಾರ್ಯವಾಗಿ ರಸ್ತೆಗೆ ಇಳಿದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಪಾದಚಾರಿಗಳು ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಿತಿಮೀರಿದ ಕಸದ ಬಿಕ್ಕಟ್ಟು: 5,445ಕ್ಕೆ ಏರಿಕೆಯಾದ ‘ಬ್ಲ್ಯಾಕ್ ಸ್ಪಾಟ್‌’ಗಳ ಸಂಖ್ಯೆ

ವ್ಯಾಪಾರಿಗಳ ಅಡ್ಡವಾದ ಅಂಡರ್ ಪಾಸ್, ಸ್ಕೈವಾಕ್

ಬೆಂಗಳೂರಿನ ಹೃದಯ ಭಾಗದಲ್ಲಿರೋ ಮೆಜೆಸ್ಟಿಕ್ ಅಂಡರ್‌ಪಾಸ್ ಒಳಗೆ ಕಾಲಿಟ್ಟರೆ ಇದು ಪಾದಚಾರಿಗಳ ಮಾರ್ಗವೋ ಅಥವಾ ಸಂತೆ ಮಾರುಕಟ್ಟೆಯೋ ಎನ್ನುವ ಆಗಿದೆ. ಪಾದರಕ್ಷೆಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್ ವರೆಗೆ ಎಲ್ಲವೂ ಇಲ್ಲಿ ಸಿಗುತ್ತದೆ. ವ್ಯಾಪಾರಿಗಳು ಇಡೀ ಅಂಡರ್‌ಪಾಸ್ ಅನ್ನು ಅತಿಕ್ರಮಣ ಮಾಡಿದ್ದಾರೆ. ಇನ್ನು ಮೆಟ್ರೋ ನಿಲ್ದಾಣದಿಂದ ಕೆಎಸ್ಆರ್ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಎಲ್ಲಾ ಭಾಗದಲ್ಲೂ ಅಂಡರ್‌ಪಾಸ್‌ನಲ್ಲಿ ವ್ಯಾಪಾರಿಗದೇ ಹಾವಳಿ.

ಮುಗಿಯದ ಓಕಳೀಪುರ ಸ್ಕೈವಾಕ್

ಮತ್ತೊಂದು ಕಡೆ ಓಕಳೀಪುರ ಮುಖ್ಯ ರಸ್ತೆ ದಾಟಲು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದು ಎಂದು ಕೋಟಿಗಟಲ್ಲೇ ಖರ್ಚು ಮಾಡಿ ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ. ಅದ್ರೆ ವಯಸ್ಸದವರು ಓಡಾಡಲು ಸರಿಯಾದ ಲಿಫ್ಟ್ ವ್ಯವಸ್ಥೆಯೇ ಇಲ್ಲ. ನಿರ್ಮಾಣವಾಗಿ ಎರಡು ವರ್ಷವಾದ್ರೂ ಸ್ಕೈವಾಕ್ ಕೆಲಸ ಮುಗಿಯುವ ಲಕ್ಷಣಗಲೇ ಕಾಣುತಿಲ್ಲ.. ಇದರಿಂದಾಗಿ ಜನರು ಮುಖ್ಯ ರಸ್ತೆಗಳಲ್ಲೇ ವಾಹನಗಳ ಮಧ್ಯೆ ನುಸುಳಿಕೊಂಡು ಪ್ರಾಣವನ್ನು ಕೈನಲ್ಲಿ ಇಟ್ಟುಕೊಂಡು ಓಡಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆ.ಆರ್. ಮಾರುಕಟ್ಟೆ ಅಂಡರ್‌ಪಾಸ್ ಈಗ ಕಳಪೆ

ಸ್ಮಾರ್ಟ್ ಸಿಟಿ ಯೋಜನೆಯಡಿ ಬರೋಬ್ಬರಿ 21 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾದ ಕೆ.ಆರ್. ಮಾರುಕಟ್ಟೆ ಅಂಡರ್‌ಪಾಸ್ ಈಗ ಕಳಪೆ ನಿರ್ವಹಣೆಗೆ ಸಾಕ್ಷಿಯಾಗಿದೆ. ವಿಕ್ಟೋರಿಯಾ ಆಸ್ಪತ್ರೆ, ಕಲಾಸಿಪಾಳ್ಯ ಸೇರಿದಂತೆ ಹಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಈ ಸುರಂಗ ಮಾರ್ಗದಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಎಸ್ಕಲೇಟರ್‌ಗಳನ್ನೇನೋ ಹಾಕಲಾಗಿದೆ. ಆದರೆ ಅವು ಸದ್ಯ ಕೈಕೊಟ್ಟಿವೆ. ಇದರಿಂದ ಹಿರಿಯ ನಾಗರಿಕರು ರಸ್ತೆಯ ಮೇಲೆಯೇ ಪ್ರಾಣದ ಹಂಗು ತೊರೆದು ಓಡಾಡುತ್ತಿದ್ದಾರೆ.

ಒಟ್ಟಿನಲ್ಲಿ ಕೋಟಿ ಕೋಟಿ ವೆಚ್ಚದ ಯೋಜನೆಗಳು ಕೇವಲ ಕಾಗದದ ಮೇಲಷ್ಟೇ ಇವೆಯೇ ಹೊರತು ಪಾದಚಾರಿಗಳ ಜೀವ ಉಳಿಸುವ ಕೆಲಸ ಮಾತ್ರ ಆಗುತ್ತಿಲ್ಲ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

Source link

Leave a Reply

Your email address will not be published. Required fields are marked *