ಬೆಂಗಳೂರು, ಮೇ 7: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್ಡಿಎಫ್ (LDF) ಪರಾಜಯಗೊಂಡ ಕಾರಣ 80 ವರ್ಷ ವಯಸ್ಸಿನ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಿಣರಾಯಿ ವಿಜಯನ್ ನಿರ್ಗಮನದೊಂದಿಗೆ, ಕರ್ನಾಟಕದ ಮುಖ್ಯಮಂತ್ರಿ, 78 ವರ್ಷ ವಯಸ್ಸಿನ ಸಿದ್ದರಾಮಯ್ಯ (Siddaramaiah) ಈಗ ದೇಶದ ಅತ್ಯಂತ ಹಿರಿಯ (Oldest CM) ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಸಿದ್ದರಾಮಯ್ಯ ಅವರ ಸುದೀರ್ಘ ರಾಜಕೀಯ ಜೀವನದ ಮತ್ತೊಂದು ಮೈಲಿಗಲ್ಲು ಎನ್ನಬಹುದು.
ಮುಖ್ಯಾಂಶಗಳು
- 78 ವರ್ಷ 9 ತಿಂಗಳ ಪ್ರಾಯದ ಸಿದ್ದರಾಮಯ್ಯ ಈಗ ಭಾರತದ ಅತ್ಯಂತ ಹಿರಿಯ ಮುಖ್ಯಮಂತ್ರಿ.
- ಡಿ. ದೇವರಾಜ ಅರಸು ದಾಖಲೆ ಮುರಿದು ಕರ್ನಾಟಕದ ಸುದೀರ್ಘ ಕಾಲದ ಸಿಎಂ ಎಂಬ ಕೀರ್ತಿಗೆ ಈಗಾಗಲೇ ಭಾಜನರಾಗಿರುವ ಸಿದ್ದರಾಮಯ್ಯ.
- 17 ಬಾರಿ ರಾಜ್ಯ ಬಜೆಟ್ ಮಂಡಿಸಿದ ಅಪರೂಪದ ದಾಖಲೆಯೂ ಸಿದ್ದರಾಮಯ್ಯ ಹೆಸರಿನಲ್ಲಿದೆ.
ವಯಸ್ಸಿನ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಮೊದಲಿಗ
ಪ್ರಸ್ತುತ ದೇಶದ ಮುಖ್ಯಮಂತ್ರಿಗಳ ಪಟ್ಟಿಯನ್ನು ಗಮನಿಸಿದರೆ, ಸಿದ್ದರಾಮಯ್ಯ (78) ಅವರ ನಂತರ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು (75), ಮಿಜೋರಾಂನ ಲಾಲ್ದುಹೊಮಾ (74) ಮತ್ತು ನಾಗಾಲ್ಯಾಂಡ್ನ ನೆಫಿಯು ರಿಯೊ (74) ಅವರು ಹಿರಿಯರ ಸಾಲಿನಲ್ಲಿ ನಿಲ್ಲುತ್ತಾರೆ. ಇನ್ನು ಅರುಣಾಚಲ ಪ್ರದೇಶದ ಪೆಮಾ ಖಂಡು (46) ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿದ್ದಾರೆ.
ಸಿದ್ದರಾಮಯ್ಯ ಅವರು 1983 ರಲ್ಲಿ ತಮ್ಮ 36 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಅಂದಿನಿಂದ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಮತ್ತು ಈಗ ಎರಡನೇ ಬಾರಿಗೆ ಸಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯಡಿಯೂರಪ್ಪ ದಾಖಲೆ ಬ್ರೇಕ್
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಅತಿ ಹಿರಿಯ ವಯಸ್ಸಿನಲ್ಲಿ ಸಿಎಂ ಹುದ್ದೆ ಅಲಂಕರಿಸಿದ ದಾಖಲೆಯೂ ಈಗ ಸಿದ್ದರಾಮಯ್ಯ ಅವರ ಪಾಲಾಗಿದೆ. ಈ ಹಿಂದೆ ಬಿಜೆಪಿ ಪ್ರಭಾವಿ ನಾಯಕ ಬಿಎಸ್ ಯಡಿಯೂರಪ್ಪ 2021 ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅವರಿಗೆ 78 ವರ್ಷ 5 ತಿಂಗಳು ವಯಸ್ಸಾಗಿತ್ತು. ಈಗ ಸಿದ್ದರಾಮಯ್ಯಗೆ ಅದಕ್ಕಿಂತಲೂ ಹೆಚ್ಚಿನ ವಯಸ್ಸು. ಆ ಮೂಲಕ ಕರ್ನಾಟಕದ ಅತ್ಯಂತ ಹಿರಿಯ ಸಿಎಂ ಎನಿಸಿಕೊಂಡಿದ್ದಾರೆ. ಹೋಲಿಕೆ ಮಾಡಿದರೆ, ಎಸ್.ಎಂ. ಕೃಷ್ಣ 72ನೇ ವಯಸ್ಸಿನಲ್ಲಿ ಮತ್ತು ಜೆ.ಎಚ್. ಪಟೇಲ್ 69ನೇ ವಯಸ್ಸಿನಲ್ಲಿ ಅಧಿಕಾರದಿಂದ ನಿರ್ಗಮಿಸಿದ್ದರು. ಆರ್. ಗುಂಡೂರಾವ್ ಅವರು 43 ನೇ ವಯಸ್ಸಿನಲ್ಲಿ ರಾಜ್ಯದ ಅತ್ಯಂತ ಕಿರಿಯ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಸುದೀರ್ಘ ಕಾಲದ ಮುಖ್ಯಮಂತ್ರಿ
ಸಿದ್ದರಾಮಯ್ಯ ಅವರು ಕೇವಲ ವಯಸ್ಸಿನಲ್ಲಿ ಮಾತ್ರವಲ್ಲದೆ, ಅಧಿಕಾರಾವಧಿಯಲ್ಲೂ ದಾಖಲೆ ಬರೆದಿದ್ದಾರೆ. ಡಿ. ದೇವರಾಜ ಅರಸು ಅವರು ಒಟ್ಟು 7 ವರ್ಷ 239 ದಿನಗಳ ಕಾಲ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ಸಿದ್ದರಾಮಯ್ಯ ಅವರು 2013 ರಿಂದ 2018 ರವರೆಗೆ ಪೂರ್ಣ ಅವಧಿ ಮುಗಿಸಿ, ಮೇ 2023 ರಿಂದ ಮತ್ತೆ ಅಧಿಕಾರದಲ್ಲಿದ್ದಾರೆ. ಈ ಮೂಲಕ ಅರಸು ಅವರ ಸುದೀರ್ಘ ಕಾಲದ ಅಧಿಕಾರಾವಧಿಯ ದಾಖಲೆಯನ್ನು ಸಿದ್ದರಾಮಯ್ಯ ಹಿಂದಿಕ್ಕಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ