ಪುಣೆ, ಜೂನ್ 12: ಮಹಾರಾಷ್ಟ್ರದ ಪುಣೆಯಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಸಂಸ್ಥೆಯ 48 ವರ್ಷದ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಹೋದ್ಯೋಗಿಗಳ ಕಿರುಕುಳವೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಮಾಹಿತಿ ತಂತ್ರಜ್ಞಾನ ನೌಕರರ ಸಂಘಟನೆಯಾದ NITES ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಪತ್ರ ಬರೆದಿದೆ.
ಟಿಸಿಎಸ್ ಉದ್ಯೋಗಿಯಾದ ಪುಣೆಯ ಪಿಂಪ್ರಿ ಚಿಂಚಾವಡ್ ವ್ಯಾಪ್ತಿಯ ಭೋಸರಿ ನಿವಾಸಿಯಾದ ಅಮಿತ್ ಅಭಯ್ ಬ್ರಹ್ಮೆ ಎಂಬ 48 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಹಿಂಜೆವಾಡಿಯಲ್ಲಿರುವ ಟಿಸಿಎಸ್ (TCS) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜೂನ್ 2ರಂದು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅವರು ಬರೆದಿದ್ದ ‘ಡೆತ್ ನೋಟ್’ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತರ 19 ವರ್ಷದ ಮಗ ನೀಡಿದ ದೂರಿನ ಮೇರೆಗೆ ಜೂನ್ 9ರಂದು ಭೋಸರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರಿನ ಪ್ರಕಾರ, ಅಮಿತ್ ಬ್ರಹ್ಮೆ ಅವರ ಆತ್ಮಹತ್ಯೆಗೆ ಕುಟುಂಬದ ಪರಿಚಯಸ್ಥನೊಬ್ಬನ ಅಪಪ್ರಚಾರ ಮತ್ತು ಕಂಪನಿಯೊಳಗಿನ ಸಹೋದ್ಯೋಗಿಗಳ ಕಿರುಕುಳ ಕಾರಣ. ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಸಹೋದ್ಯೋಗಿಗಳು ಇತರ ಉದ್ಯೋಗಿಗಳ ಸಮ್ಮುಖದಲ್ಲೇ ಅಮಿತ್ ಅವರಿಗೆ ನಿರಂತರವಾಗಿ ಅವಮಾನ ಮಾಡುತ್ತಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಅಮಿತ್ ಅವರ ಕೈಯಲ್ಲಿದ್ದ ಒಂದು ಉತ್ತಮ ಪ್ರಾಜೆಕ್ಟ್ ಅನ್ನು ಬಲವಂತವಾಗಿ ಕಸಿದುಕೊಂಡು, ಅವರಿಗೆ ಯಾವುದೇ ಅನುಭವವಿಲ್ಲದ ಬೇರೆ ಕೆಲಸವನ್ನು ಮಾಡಲು ಒತ್ತಾಯಿಸಲಾಗಿತ್ತು. ಅಷ್ಟೇ ಅಲ್ಲದೆ, ಅವರ ವಿರುದ್ಧ ಕಂಪನಿಗೆ ನೆಗೆಟಿವ್ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಟಿಸಿಎಸ್ ಮತಾಂತರ ಪ್ರಕರಣ: ಪ್ರಮುಖ ಆರೋಪಿ ನಿದಾ ಖಾನ್ ಕೊನೆಗೂ ಅರೆಸ್ಟ್
ಅಮಿತ್ ಅವರ ಪತ್ನಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, 2024ರಲ್ಲಿ ಫೇಸ್ಬುಕ್ ಮೂಲಕ ಆರೋಪಿಯ ಪತ್ನಿಯೊಂದಿಗೆ ಗೆಳತನ ಹೊಂದಿದ್ದರು. ಅಂದಿನಿಂದ ಎರಡೂ ಕುಟುಂಬಗಳ ನಡುವೆ ಪರಿಚಯವಿತ್ತು. ಆದರೆ, ಆರೋಪಿ ವ್ಯಕ್ತಿಯು ತನ್ನ ಪತ್ನಿಯೊಂದಿಗೆ ನಿರಂತರವಾಗಿ ಜಗಳವಾಡುತ್ತಿದ್ದರಿಂದ, ಆಕೆ ಎನ್ಜಿಒ ಒಂದರ ಸಹಾಯದಿಂದ ಫಿಲಿಪೈನ್ಸ್ ದೇಶಕ್ಕೆ ತೆರಳಿದ್ದಳು. ತನ್ನ ಪತ್ನಿ ಮನೆ ಬಿಟ್ಟು ವಿದೇಶಕ್ಕೆ ಹೋಗಲು ಅಮಿತ್ ಬ್ರಹ್ಮೆ ಮತ್ತು ಅವರ ಪತ್ನಿಯೇ ಕಾರಣ ಎಂದು ಆ ವ್ಯಕ್ತಿ ತಪ್ಪು ತಿಳಿದುಕೊಂಡಿದ್ದರು. ಈ ದ್ವೇಷದಿಂದಾಗಿ ಆತ ಅಮಿತ್ ವಿರುದ್ಧ ಹಿಂಜೆವಾಡಿ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಕಳ್ಳತನದ ಸುಳ್ಳು ದೂರುಗಳನ್ನು ನೀಡಿದ್ದರು. ಜೊತೆಗೆ ವಕೀಲರ ಮೂಲಕ ಲೀಗಲ್ ನೋಟಿಸ್ ಕಳುಹಿಸಿ, ಟಿಸಿಎಸ್ ಕಂಪನಿಯ ಅಧಿಕೃತ ಇಮೇಲ್ಗೂ ಅಮಿತ್ ವಿರುದ್ಧ ಸುಳ್ಳು ದೂರುಗಳನ್ನು ರವಾನಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದರು.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಟಿಸಿಎಸ್ನ ಇಬ್ಬರು ಮಹಿಳಾ ಸಿಬ್ಬಂದಿಯ ಬಗ್ಗೆ ಆಂತರಿಕ ತನಿಖೆ ನಡೆಸುವಂತೆ ಟಿಸಿಎಸ್ (TCS) ಕಂಪನಿಯ ಅಧಿಕಾರಿಗಳಿಗೆ ಪೊಲೀಸರು ಅಧಿಕೃತ ನೋಟಿಸ್ ಜಾರಿ ಮಾಡಿದ್ದಾರೆ. ಕೌಟುಂಬಿಕ ದ್ವೇಷ ಸಾಧಿಸಿ ಸುಳ್ಳು ದೂರು ನೀಡಿದ್ದ ಮೂರನೇ ಆರೋಪಿ ವ್ಯಕ್ತಿಯ ಬಂಧನಕ್ಕಾಗಿ ಪೊಲೀಸರು ಸದ್ಯ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಟಿಸಿಎಸ್ ಮತಾಂತರ ಪ್ರಕರಣ: ತಾನು ಗರ್ಭಿಣಿ ಎಂದು ನ್ಯಾಯಾಲಯದ ಮೊರೆ ಹೋದ ಆರೋಪಿ ನಿದಾ ಖಾನ್
ಈ ಘಟನೆಯನ್ನು ಐಟಿ ನೌಕರರ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಯಾದ NITES ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಕಾರ್ಪೊರೇಟ್ ವಲಯದಲ್ಲಿ ಹೆಚ್ಚುತ್ತಿರುವ ಇಂತಹ ಮಾನಸಿಕ ಕಿರುಕುಳ ಮತ್ತು ಕೆಲಸದ ಒತ್ತಡದ ಸಂಸ್ಕೃತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಂಘಟನೆಯು ಈ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಮಹಾರಾಷ್ಟ್ರ ಮುಖ್ಯಮಂತ್ರಿಯವರು ತಕ್ಷಣವೇ ಮಧ್ಯಪ್ರವೇಶಿಸಿ ಉನ್ನತ ಮಟ್ಟದ ಸ್ವತಂತ್ರ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ