ಬೆಂಗಳೂರು, ಮೇ 14: ಆನೇಕಲ್ನಿಂದ ಪುದುಚೆರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತನ್ನ ಸಾಕು ಗಿಳಿಯನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ 48 ವರ್ಷದ ಮಹಿಳೆ ಪೊಲೀಸರ ಮೊರೆ ಹೋಗಿರುವ ಘಟನೆ ನಡೆದಿದೆ. ಚಂದಾಪುರದ VBHC ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಖಾಸಗಿ ಕಂಪನಿಯ ಉದ್ಯೋಗಿ ಎಂ. ಲಿಜಿ ಅವರು ತಮ್ಮ ಅಸ್ವಸ್ಥ ತಂದೆಯನ್ನು ಭೇಟಿಯಾಗಲುಪುದುಚೆರಿಗೆ ತೆರಳುತ್ತಿದ್ದ ವೇಳೆ ಅವರ ಸಾಕು ಗಿಳಿ ಕಳುವಾಗಿದ್ದು, ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಮಾಹಿತಿಯ ಪ್ರಕಾರ ಆನೇಕಲ್ ರಸ್ತೆಯಲ್ಲಿ ಅವರು ಬಸ್ ಹತ್ತಿದ್ದು, ತಮ್ಮ ಸಾಕು ಗಿಳಿಯನ್ನು ಚಾಲಕನ ಕ್ಯಾಬಿನ್ ಸಮೀಪ ಪಂಜರದಲ್ಲಿ ಇಟ್ಟಿದ್ದರು. ಆದರೆ ಆನೇಕಲ್ ಮತ್ತು ಅತ್ತಿಬೆಲೆ ಟೋಲ್ ಪ್ಲಾಜಾಗಳ ನಡುವೆ ಯಾರೋ ಪಂಜರದ ಸಮೇತ ಗಿಳಿಯನ್ನು ಕದ್ದು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಅತ್ತಿಬೆಲೆ ಟೋಲ್ ಬಳಿ ಬಸ್ ತಲುಪಿದಾಗ ಗಿಳಿಯನ್ನು ನೋಡಲು ಲಿಜಿ ಅವರು ತೆರಳಿದ್ದ ವೇಳೆ ಘಟನೆ ಬೆಳಕಿಗೆ ಬಂದಿದೆ. ಕ್ಷಣ ಚಾಲಕ ಮತ್ತು ಬಸ್ ಸಿಬ್ಬಂದಿಗೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಬಸ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿದರೂ ಗಿಳಿ ಪತ್ತೆಯಾಗಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು, ಸಿಸಿಟಿವಿಲಿ ಸೆರೆಯಾಯ್ತು ಖದೀಮರ ಕೈಚಳಕ
ತುರ್ತು ಪರಿಸ್ಥಿತಿಯಿಂದ ಪ್ರಯಾಣ ಮುಂದುವರಿಸಿದ್ದ ಮಹಿಳೆ, ಬಸ್ ಸಿಬ್ಬಂದಿಯಿಂದ ಠಾಣೆಯ ಸಂಪರ್ಕ ಸಂಖ್ಯೆ ಪಡೆದು ಬಳಿಕ ವಾಟ್ಸಾಪ್ ಮೂಲಕ ಅತ್ತಿಬೆಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಸ್‌ನಲ್ಲಿದ್ದ ಸಹ ಪ್ರಯಾಣಿಕರು ಗಿಳಿಯನ್ನು ಕದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಶಂಕಿತನ ಬಗ್ಗೆ ಕೆಲವು ಮಹತ್ವದ ಸುಳಿವುಗಳು ಲಭ್ಯವಾಗಿವೆ. ಆದರೆ ಆರೋಪಿಯು ಯಾವ ಸ್ಥಳದಲ್ಲಿ ಬಸ್‌ನಿಂದ ಇಳಿದಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆನೇಕಲ್ ಮತ್ತು ಅತ್ತಿಬೆಲೆ ನಡುವೆ ಹಲವು ಕಡೆ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗಿದೆ. ಹೀಗಾಗಿ ಬಸ್ ನಿರ್ವಹಣಾ ಸಂಸ್ಥೆ ನೀಡಿದ ಪ್ರಯಾಣಿಕರ ವಿವರಗಳನ್ನು ಪರಿಶೀಲಿಸಲಾಗುತ್ತಿದ್ದು, ಬಸ್‌ನ ಸಿಸಿಟಿವಿ ದೃಶ್ಯಾವಳಿಯನ್ನೂ ವೀಕ್ಷಿಸಲಾಗುತ್ತಿದೆ. ಮನೆಯಲ್ಲಿ ಗಿಳಿಯನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಅದನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾಗಿ ಲಿಜಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿಳೋದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.