ಪೂಜಾ ಹೆಗ್ಡೆ (Pooja Hegde) ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಬಾಲಿವುಡ್, ತೆಲುಗು, ತಮಿಳು ಸಿನಿಮಾಗಳಲ್ಲಿ ಬಲು ಬೇಡಿಕೆಯ ನಟಿಯಾಗಿರುವ ಪೂಜಾ ಹೆಗ್ಡೆ ಕನ್ನಡದ ಸಿನಿಮಾನಲ್ಲಿ ನಟಿಸಿಲ್ಲ ಆದರೆ ಅವರ ಮೂಲ ಕರ್ನಾಟಕವೇ. ಮಂಗಳೂರಿನ ಮೂಲದ ಈ ಚೆಲುವೆ ಬೆಳೆದಿದ್ದೆಲ್ಲ ಮುಂಬೈನಲ್ಲಿ ಆದರೆ ತಮ್ಮ ಮೂಲವನ್ನು ಮರೆತಿಲ್ಲ. ಇತ್ತೀಚೆಗಷ್ಟೆ ಮಂಗಳೂರಿಗೆ ಬಂದಿದ್ದ ಪೂಜಾ ಹೆಗ್ಡೆ, ದೈವ ಕಾರ್ಯದಲ್ಲಿ ಭಾಗಿ ಆಗಿದ್ದರು. ಜೊತೆಗೆ ತುಳು ನಾಡಿನ ಹಲವು ದೇವಾಲಯಗಳಿಗೆ ಸಹ ಭೇಟಿ ಕೊಟ್ಟು ದರ್ಶನ ಪಡೆದುಕೊಂಡರು.
ತುಳುವನ್ನು ಸುಲಲಿತವಾಗಿ ಮಾತನಾಡಬಲ್ಲ ಪೂಜಾ ಹೆಗ್ಡೆ, ತಮ್ಮ ಈ ಭೇಟಿಯ ಸಂದರ್ಭ ಸ್ಥಳೀಯ ಯೂಟ್ಯೂಬ್ ಚಾನೆಲ್ ಒಂದಕ್ಕೆ ಚುಟುಕು ಸಂದರ್ಶನ ನೀಡಿರುವ ನಟಿ ಪೂಜಾ ಹೆಗ್ಡೆ, ಕರ್ನಾಟಕದ ಬಗ್ಗೆ, ಕನ್ನಡ ಚಿತ್ರರಂಗದ ಬಗ್ಗೆ, ತಮ್ಮ ಹಾಗೂ ಕರ್ನಾಟಕದ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗದಲ್ಲಿ ಮೆಚ್ಚಿನ ಯಾರು ಎಂಬುದನ್ನು ಸಹ ನಟಿ ಪೂಜಾ ಹೆಗ್ಡೆ ಹೇಳಿಕೊಂಡಿದ್ದಾರೆ.
ಮೊದಲಿಗೆ ‘ಕಾಂತಾರ’ ಸಿನಿಮಾದ ಬಗ್ಗೆ ಮಾತನಾಡಿರುವ ನಟಿ ಪೂಜಾ ಹೆಗ್ಡೆ, ‘ಬಾಲ್ಯದಿಂದಲೂ ಭೂತ, ದೈವಗಳನ್ನು, ಆಚರಣೆಗಳನ್ನು ನೋಡುತ್ತಾ ಬೆಳೆದ ನನಗೆ ಅವುಗಳ ಮಹತ್ವ ಎಲ್ಲವೂ ತಿಳಿದಿತ್ತು. ಆದರೆ ‘ಕಾಂತಾರ’ ಸಿನಿಮಾ ಅದನ್ನು ಇಡೀ ದೇಶಕ್ಕೆ ಪರಿಚಯಿಸಿತು. ಉತ್ತರ ಭಾರತದ ಜನ ಸಹ ಆ ಕತೆಯೊಂದಿಗೆ ಕನೆಕ್ಟ್ ಆದರು. ಅಲ್ಲಿ ಹಲವಾರು ಮಂದಿ ನನ್ನನ್ನು ದೈವದ ಬಗ್ಗೆ ಭೂತದ ಬಗ್ಗೆ ಕೇಳಲು ಆರಂಭಿಸಿದ್ದರು’ ಎಂದಿದ್ದಾರೆ ಪೂಜಾ. ಕನ್ನಡ ಚಿತ್ರರಂಗದಲ್ಲಿ ತಮ್ಮ ನೆಚ್ಚಿನ ನಟ ರಾಜ್ ಬಿ ಶೆಟ್ಟಿ ಎಂದ ಪೂಜಾ, ‘ನನಗೆ ರಾಜ್ ಬಿ ಶೆಟ್ಟಿ ನಟನೆ ಇಷ್ಟವಾಗುತ್ತದೆ. ಅವರು ಬಹಳ ಚೆನ್ನಾಗಿ ನಟಿಸುತ್ತಾರೆ. ‘ಸು ಫ್ರಂ ಸೋ’ ಸಿನಿಮಾ ನೋಡಿದ್ದೇನೆ. ಆ ಸಿನಿಮಾನಲ್ಲಿ ಅವರು ತುಳುವಿನಲ್ಲಿ ಸಹ ಮಾತನಾಡಿದ್ದಾರೆ’ ಎಂದಿದ್ದಾರೆ ಪೂಜಾ ಹೆಗ್ಡೆ.
ಇದನ್ನೂ ಓದಿ:ಗ್ಲಾಮರಸ್ ಅವತಾರದಲ್ಲಿ ನಟಿ ಪೂಜಾ ಹೆಗ್ಡೆ: ವಿಡಿಯೋ ನೋಡಿ
ತುಳು ನಾಡಿನೊಂದಿಗೆ ತಮ್ಮ ನಂಟಿನ ಬಗ್ಗೆ ಮಾತನಾಡಿರುವ ಪೂಜಾ ಹೆಗ್ಡೆ, ‘ನಾನು ಪ್ರತಿ ಬಾರಿ ಬೇಸಿಗೆ ರಜೆ ಕಳೆಯಲು ಇಲ್ಲಿಗೆ ಬರುತ್ತಿದ್ದೆ. ನಮ್ಮ ಕಸಿನ್ಸ್ ಎಲ್ಲರೂ ಆ ಸಮಯದಲ್ಲಿ ಬರುತ್ತಿದ್ದರು. ನಾವೆಲ್ಲ ಆಟ ಆಡುತ್ತಿದ್ದೆವು. ಇಲ್ಲಿ ಬಂದು ನೇರಳೆ ಹಣ್ಣು ತಿನ್ನುತ್ತಿದ್ದ ನೆನಪು ನನಗೆ ಈಗಲೂ ಇದೆ. ಬಹಳ ಅದ್ಭುತ ದಿನಗಳನ್ನು ಇಲ್ಲಿ ಕಳೆದಿದ್ದೇನೆ’ ಎಂದು ಪೂಜಾ ಹೆಗ್ಡೆ ಹೇಳಿಕೊಂಡಿದ್ದಾರೆ.
ಪೂಜಾ ಹೆಗ್ಡೆ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ‘ಜನ ನಾಯಗನ್’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ದುಲ್ಕರ್ ಸಲ್ಮಾನ್ ಜೊತೆಗೆ ತೆಲುಗು ಸಿನಿಮಾ ಒಂದರಲ್ಲಿ ಪೂಜಾ ನಟಿಸುತ್ತಿದ್ದಾರೆ. ವರುಣ್ ಧವನ್ ಜೊತೆಗೆ ಹಿಂದಿ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸಹ ಶೀಘ್ರವೇ ಬಿಡುಗಡೆ ಆಗಲಿದೆ. ತಮಿಳಿನಲ್ಲಿ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಒಟ್ಟಾರೆಯಾಗಿ ಪೂಜಾ ಸಖತ್ ಬ್ಯುಸಿ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ