‘ಪೆದ್ದಿ’ ಹೊಸ ಪೋಸ್ಟರ್‌ನಲ್ಲಿ ಕಾಣಿಸಿಲ್ಲ ರಿಲೀಸ್ ದಿನಾಂಕ: ರಾಮ್ ಚರಣ್ ಫ್ಯಾನ್ಸ್ಗೆ ಚಿಂತೆ

‘ಪೆದ್ದಿ’ ಹೊಸ ಪೋಸ್ಟರ್‌ನಲ್ಲಿ ಕಾಣಿಸಿಲ್ಲ ರಿಲೀಸ್ ದಿನಾಂಕ: ರಾಮ್ ಚರಣ್ ಫ್ಯಾನ್ಸ್ಗೆ ಚಿಂತೆ

ಟಾಲಿವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಪೆದ್ದಿ’ (Peddi) ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈಗ ದೊಡ್ಡ ಚರ್ಚೆ ನಡೆಯುತ್ತಿದೆ. ಚಿತ್ರದ ಬಿಡುಗಡೆ ವಿಳಂಬವಾಗಲಿದೆ ಎಂಬ ಗಾಳಿಸುದ್ದಿಗಳು ಹಬ್ಬಿವೆ. ಇವುಗಳ ನಡುವೆ ಚಿತ್ರತಂಡ ಹನುಮ ಜಯಂತಿಯ ಅಂಗವಾಗಿ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್​ನಲ್ಲಿ ರಾಮ್ ಚರಣ್ (Ram Charan) ಅವರ ಲುಕ್ ಗಮನ ಸೆಳೆದಿದೆ. ಆದರೆ ರಿಲೀಸ್ ಡೇಟ್ (Peddi Release Date) ಬಗ್ಗೆ ಪ್ರಸ್ತಾಪ ಇಲ್ಲ! ಇದು ಅಭಿಮಾನಿಗಳ ಗೊಂದಲಕ್ಕೆ ಕಾರಣ ಆಗಿದೆ.

ಇತ್ತೀಚೆಗೆ ಬಿಡುಗಡೆಯಾದ ‘ಪೆದ್ದಿ ಪೈಲ್ವಾನ್’ ಗ್ಲಿಂಪ್ಸ್‌ನಿಂದ ಸಿದ್ಧಪಡಿಸಲಾದ ಈ ಪೋಸ್ಟರ್‌ನಲ್ಲಿ ರಾಮ್ ಚರಣ್ ಅತ್ಯಂತ ಪವರ್​ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಬಲಿಷ್ಠ ಮೈಕಟ್ಟು ಮತ್ತು ಗಂಭೀರ ನೋಟವು ಹನುಮಂತನ ಶೌರ್ಯವನ್ನು ನೆನಪಿಸುವಂತಿದೆ. ಈ ಲುಕ್ ಕಂಡ ಅಭಿಮಾನಿಗಳು ‘ಇದು ಪಕ್ಕಾ ಮಾಸ್ ಸಿನಿಮಾ’ ಎಂದು ಜೈಕಾರ ಹಾಕುತ್ತಿದ್ದಾರೆ.

ಸಿನಿಮಾ ಮುಂದೂಡಿಕೆಯಾಗಬಹುದು ಎಂಬ ಆತಂಕ ಅಭಿಮಾನಿಗಳಿಗೆ ಇದೆ. ಆದರೆ ರಾಮ್ ಚರಣ್ ಅವರೇ ಸ್ಪಷ್ಟಪಡಿಸಿರುವಂತೆ, ಸಿನಿಮಾ ನಿಗದಿತ ಸಮಯಕ್ಕೇ ಅಂದರೆ ಏಪ್ರಿಲ್ 30ರಂದು ತೆರೆಗೆ ಬರಲಿದೆ. ಆದರೂ, ಅಧಿಕೃತವಾಗಿ ಚಿತ್ರತಂಡ ಮತ್ತೊಮ್ಮೆ ಈ ದಿನಾಂಕವನ್ನು ಘೋಷಿಸಲಿ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪೋಸ್ಟರ್​ನಲ್ಲಿ ರಿಲೀಸ್ ಡೇಟ್ ಯಾಕೆ ಕಾಣಿಸುತ್ತಿಲ್ಲ ಎಂಬ ಪ್ರಶ್ನೆ ಮೂಡಿದೆ.

 

View this post on Instagram

 

A post shared by Ram Charan (@alwaysramcharan)

ಬುಚ್ಚಿ ಬಾಬು ಸಾನಾ ನಿರ್ದೇಶನದ ಈ ಚಿತ್ರವು ಗ್ರಾಮೀಣ ಹಿನ್ನೆಲೆಯ ಸ್ಪೋರ್ಟ್ಸ್ ಡ್ರಾಮಾ ಆಗಿದೆ. ಚಿತ್ರದ ಹೈಲೈಟ್ ಎಂದರೆ ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಅವರು ಇಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಜಾನ್ವಿ ಕಪೂರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ದಿವ್ಯೇಂದು ಶರ್ಮಾ ಮತ್ತು ಜಗಪತಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರಕ್ಕೆ ಜಾನ್ವಿ, ಮೃಣಾಲ್ ಮೆರುಗು: ಶೀಘ್ರವೇ ಸಾಂಗ್ ಶೂಟಿಂಗ್ ಶುರು

‘ವೃದ್ಧಿ ಸಿನಿಮಾಸ್’ ಸಂಸ್ಥೆಯು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದೆ. ಎ.ಆರ್. ರೆಹಮಾನ್ ಅವರು ಸಂಗೀತ ನೀಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ರಿಲೀಸ್ ಡೇಟ್ ಬಗ್ಗೆ ಚಿತ್ರತಂಡದಿಂದ ಅಧಿಕೃತ ಹೇಳಿಕೆ ಹೊರಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *