Headlines

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2026; ಜುಲೈ 31ರೊಳಗೆ ಅರ್ಜಿ ಸಲ್ಲಿಸಲು ಅವಕಾಶ – Kannada News | Pradhan Mantri Rashtriya Bal Puraskar 2026 Celebrating Indias young heroes how to apply

ನವದೆಹಲಿ, ಜೂನ್ 23: ದೇಶದ ಮಕ್ಕಳಲ್ಲಿರುವ ಅಸಾಧಾರಣ ಧೈರ್ಯ, ಸೃಜನಶೀಲತೆ, ನಾವೀನ್ಯತೆ ಮತ್ತು ಅದಮ್ಯ ಚೇತನವನ್ನು ಗೌರವಿಸುವ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಮಕ್ಕಳ ಪ್ರಶಸ್ತಿಯಾದ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (PMRBP) 2026’ಕ್ಕೆ ಆನ್‌ಲೈನ್ ಮೂಲಕ ನಾಮನಿರ್ದೇಶನ ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. 5ರಿಂದ 18 ವರ್ಷದೊಳಗಿನ ಅಸಾಧಾರಣ ಸಾಧನೆ ಮಾಡಿದ ಮಕ್ಕಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಉಸ್ತುವಾರಿಯಲ್ಲಿ ನಡೆಯುವ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು 2026ರ ಜುಲೈ 31 ಕೊನೆಯ ದಿನವಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರತಿ ವರ್ಷ ಡಿಸೆಂಬರ್ 26 ರಂದು ‘ವೀರ ಬಾಲ ದಿವಸ್’ ದಿನಾಚರಣೆಯ ಸಂದರ್ಭದಲ್ಲಿ ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ.

ಸಿಖ್ ಧರ್ಮದ 10ನೇ ಗುರುಗಳಾದ ಗುರು ಗೋಬಿಂದ್ ಸಿಂಗ್ ಅವರ ಕಿರಿಯ ಪುತ್ರರಾದ ಸಾಹಿಬ್‌ಜಾದಾ ಜೊರಾವರ್ ಸಿಂಗ್ (9 ವರ್ಷ) ಮತ್ತು ಸಾಹಿಬ್‌ಜಾದಾ ಫತೇಹ್ ಸಿಂಗ್ (7 ವರ್ಷ) ಅವರು ಧರ್ಮ ರಕ್ಷಣೆಗಾಗಿ ನೀಡಿದ ಬಲಿದಾನದ ನೆನಪಿಗಾಗಿ ಡಿಸೆಂಬರ್ 26 ಅನ್ನು ವೀರ ಬಾಲ ದಿವಸ್ ಎಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕದ ಇಬ್ಬರು ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಗರಿ

ಈ ಪ್ರಶಸ್ತಿ ವಿಜೇತ ಮಕ್ಕಳಿಗೆ ಒಂದು ವಿಶೇಷ ಪದಕ, ಪ್ರಮಾಣಪತ್ರ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ. 2019ರಲ್ಲಿ ಈ ಪ್ರಶಸ್ತಿ ಆರಂಭವಾದಾಗಿನಿಂದ ಇದುವರೆಗೆ ದೇಶದ ಒಟ್ಟು 203 ಮಕ್ಕಳು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರತಿ ವರ್ಷ ದೇಶಾದ್ಯಂತ ಸುಮಾರು 25 ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಯಾವ 6 ಕ್ಷೇತ್ರಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ?:

ಶೌರ್ಯ: ತಮ್ಮ ಜೀವದ ಹಂಗು ತೊರೆದು ಇತರರ ಪ್ರಾಣ ಉಳಿಸಿದ ಅಥವಾ ಪ್ರಕೃತಿ ವಿಕೋಪ/ಮಾನವ ನಿರ್ಮಿತ ಆಪತ್ತಿನ ಸಮಯದಲ್ಲಿ ಅಸಾಧಾರಣ ಧೈರ್ಯ, ಸಮಯಪ್ರಜ್ಞೆ ಮೆರೆದ ಮಕ್ಕಳಿಗೆ.

ಸಾಮಾಜಿಕ ಸೇವೆ: ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ಸಮುದಾಯವನ್ನು ಒಟ್ಟುಗೂಡಿಸುವ ನಾಯಕತ್ವ ಗುಣ ಹೊಂದಿರುವ ಮಕ್ಕಳಿಗೆ.

ಪರಿಸರ: ಪರಿಸರ ಸಂರಕ್ಷಣೆಗಾಗಿ ವಿವಿಧ ಹಂತಗಳಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಮಕ್ಕಳಿಗೆ.

ಕ್ರೀಡೆ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ನಿರಂತರ ಸಾಧನೆ ಮಾಡುತ್ತಿರುವವರಿಗೆ.

ಕಲೆ ಮತ್ತು ಸಂಸ್ಕೃತಿ: ಸಂಗೀತ (ಗಾಯನ ಮತ್ತು ವಾದನ), ನೃತ್ಯ, ಚಿತ್ರಕಲೆ, ಸಾಹಿತ್ಯ ಅಥವಾ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವಲ್ಲಿ ಅತ್ಯುತ್ತಮ ಪ್ರತಿಭೆ ಹೊಂದಿರುವ ಮಕ್ಕಳಿಗೆ.

ವಿಜ್ಞಾನ ಮತ್ತು ತಂತ್ರಜ್ಞಾನ: ಸಮಾಜದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಂತಹ, ಜನರ ಜೀವನಮಟ್ಟ ಸುಧಾರಿಸುವಂತಹ ಹೊಸ ಆವಿಷ್ಕಾರ ಮಾಡಿದ ಯುವ ವಿಜ್ಞಾನಿಗಳಿಗೆ.

ಪ್ರಶಸ್ತಿಗೆ ಇರುವ ಅರ್ಹತೆಗಳು ಮತ್ತು ನಿಯಮಗಳು:

ಮಗು ಕಡ್ಡಾಯವಾಗಿ ಭಾರತೀಯ ನಾಗರಿಕನಾಗಿರಬೇಕು ಮತ್ತು ಭಾರತದಲ್ಲೇ ವಾಸಿಸುತ್ತಿರಬೇಕು.

ಇದನ್ನೂ ಓದಿ: ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ ಮಂಗಳೂರಿನ ರೆಮೊನಾ; ಬಾಲಕಿಯ ಸಾಧನೆ ಏನು? ಇಲ್ಲಿದೆ ವಿವರ

ವಯೋಮಿತಿ:

2026ರ ಜುಲೈ 31ಕ್ಕೆ ಅನ್ವಯವಾಗುವಂತೆ ಮಗುವಿಗೆ 5 ವರ್ಷ ತುಂಬಿರಬೇಕು ಮತ್ತು 18 ವರ್ಷ ದಾಟಿರಬಾರದು.

ಮಗುವಿನ ಸಾಧನೆ ಅಥವಾ ಶೌರ್ಯದ ಘಟನೆಯು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ (ಜುಲೈ 31, 2026) ಹಿಂದಿನ 2 ವರ್ಷಗಳ ಒಳಗಾಗಿ ನಡೆದಿರಬೇಕು. ಈ ಹಿಂದೆ ಯಾವುದೇ ವಿಭಾಗದಲ್ಲಿ ಈ ಪ್ರಶಸ್ತಿ ಪಡೆದಿದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಸಾಮಾನ್ಯವಾಗಿ ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವುದಿಲ್ಲ, ಆದರೆ ತೀರಾ ಅಪರೂಪದ ಸಂದರ್ಭಗಳಲ್ಲಿ ಮಾತ್ರ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?:

ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಅರ್ಹ ಮಕ್ಕಳ ಹೆಸರನ್ನು ನಾಮನಿರ್ದೇಶನ ಮಾಡಬಹುದು. ಮಕ್ಕಳು ಸ್ವಯಂ-ನಾಮನಿರ್ದೇಶನಕ್ಕೂ ಅವಕಾಶವಿದೆ. ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯಪಾಲರು, ಸಂಸದರು, ಜಿಲ್ಲಾಧಿಕಾರಿಗಳು ಹಾಗೂ ಕೇಂದ್ರೀಯ ಮತ್ತು ನವೋದಯ ವಿದ್ಯಾಲಯಗಳ ಮೂಲಕವೂ ಶಿಫಾರಸು ಮಾಡಬಹುದು.

ಅರ್ಜಿದಾರರು ಅಧಿಕೃತ ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್ https://awards.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಫಾರ್ಮ್ ಭರ್ತಿ ಮಾಡಬೇಕು. ಮಗುವಿನ ಇತ್ತೀಚಿನ ಫೋಟೋ, ಸಾಧನೆಯ ಪೂರಕ ದಾಖಲೆಗಳು ಮತ್ತು ಗರಿಷ್ಠ 1,000 ಪದಗಳ ಒಳಗಿನ ಸಾಧನೆಯ ವಿವರಣೆಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *