ಫಿಫಾ ವಿಶ್ವಕಪ್ 2026ರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ವಿಟ್ಜರ್‌ಲ್ಯಾಂಡ್ ತಂಡದ ಫಾರ್ವರ್ಡ್ ಆಟಗಾರ ಬ್ರೀಲ್ ಎಂಬೊಲೊ ಅವರಿಗೆ ನೀಡಲಾದ ರೆಡ್ ಕಾರ್ಡ್ ಹಾಗೂ ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ನಿರ್ಧಾರವು ಜಾಗತಿಕ ಫುಟ್‌ಬಾಲ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾನ್ಸಾಸ್ ಸಿಟಿಯಲ್ಲಿರುವ ‘ಆ್ಯರೋಹೆಡ್ ಸ್ಟೇಡಿಯಂ’ನಲ್ಲಿ ನಡೆದ ಈ ಪಂದ್ಯದಲ್ಲಿ ಅರ್ಜೆಂಟೀನಾ ಹಾಗೂ ಸ್ವಿಟ್ಜರ್‌ಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ದವು.
ಜಿದ್ದಾಜಿದ್ದಿನ ಪೈಪೋಟಿಗೆ ಕಾರಣವಾಗಿದ್ದ ಈ ಪಂದ್ಯದ 10ನೇ ನಿಮಿಷದಲ್ಲಿ ಲಿಯೋನೆಲ್ ಮೆಸ್ಸಿ ನೀಡಿದ ಅದ್ಭುತ ಕಾರ್ನರ್ ಪಾಸ್ ಅನ್ನು ಬಳಸಿಕೊಂಡ ಅಲೆಕ್ಸಿಸ್ ಮ್ಯಾಕ್ ಆಲಿಸ್ಟರ್, ಹೆಡರ್ ಮೂಲಕ ಗೋಲು ಬಾರಿಸಿ ಅರ್ಜೆಂಟೀನಾಗೆ 1-0 ಮುನ್ನಡೆ ತಂದುಕೊಟ್ಟರು.
ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಸ್ವಿಟ್ಜರ್‌ಲ್ಯಾಂಡ್ ಪರ ಡಾನ್ ನ್ಡೋಯ್ ಆಕರ್ಷಕ ಗೋಲು ಹೊಡೆದು ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದರು.
ನಾಟಕೀಯ ತಿರುವು:
ಸ್ವಿಟ್ಜರ್‌ಲ್ಯಾಂಡ್ ತಂಡವು ಸಮಬಲ ಸಾಧಿಸುತ್ತಿದ್ದಂತೆ ಪೈಪೋಟಿ ಮತ್ತಷ್ಟು ತೀವ್ರಗೊಂಡಿತು. ಇದರ ನಡುವೆ ನಡೆದ ನಾಟಕೀಯ ತಿರುವುದು ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿತು ಎಂದರೆ ತಪ್ಪಾಗಲಾರದು.
- 72ನೇ ನಿಮಿಷದ ಹೈಡ್ರಾಮಾ: ಪಂದ್ಯದ 72ನೇ ನಿಮಿಷದಲ್ಲಿ ಅರ್ಜೆಂಟೀನಾದ ಲಿಯಾಂಡ್ರೊ ಪರೇಡೆಸ್ ಅವರು ಎಂಬೊಲೊ ಅವರನ್ನು ಕೆಳಗೆ ಬೀಳಿಸಿದರು ಎಂದು ರೆಫರಿ ಜೋವಾವೊ ಪಿನ್ಹೈರೊ ಮೊದಲು ಫೌಲ್ ಘೋಷಿಸಿ, ಪರೇಡೆಸ್ ಅವರಿಗೆ ಯೆಲ್ಲೋ ಕಾರ್ಡ್ ತೋರಿಸಿದ್ದರು.
- VAR ಹಸ್ತಕ್ಷೇಪ: ಕೂಡಲೇ ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ತಂಡವು ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮೈದಾನದ ರೆಫರಿಗೆ ಸೂಚಿಸಿತು. ರಿಪ್ಲೇಗಳನ್ನು ಪರಿಶೀಲಿಸಿದಾಗ, ಪರೇಡೆಸ್ ಅವರ ಸಂಪರ್ಕ ಸಿಗುವ ಮುನ್ನವೇ ಎಂಬೊಲೊ ಡೈವ್ ಹೊಡೆದು (ಅಭಿನಯಿಸಿ) ಬಿದ್ದಿರುವುದು ಸ್ಪಷ್ಟವಾಯಿತು.
- ರೆಡ್ ಕಾರ್ಡ್ ಶಿಕ್ಷೆ: ರೆಫರಿ ತಕ್ಷಣವೇ ಪರೇಡೆಸ್ ಅವರ ಯೆಲ್ಲೋ ಕಾರ್ಡ್ ಅನ್ನು ರದ್ದುಗೊಳಿಸಿ, ಡೈವಿಂಗ್ ಮಾಡಿದ್ದಕ್ಕಾಗಿ ಎಂಬೊಲೊ ಅವರಿಗೆ ಯೆಲ್ಲೋ ಕಾರ್ಡ್ ನೀಡಿದರು. ಎಂಬೊಲೊ ಈಗಾಗಲೇ 44ನೇ ನಿಮಿಷದಲ್ಲಿ ಒಂದು ಯೆಲ್ಲೋ ಕಾರ್ಡ್ ಪಡೆದಿದ್ದರಿಂದ, ಇದು ಎರಡನೇ ಯೆಲ್ಲೋ ಕಾರ್ಡ್ ಆಗಿ ಮಾರ್ಪಟ್ಟು, ನಿಯಮದಂತೆ ಅವರಿಗೆ ರೆಡ್ ಕಾರ್ಡ್ ನೀಡಿ ಮೈದಾನದಿಂದ ಹೊರಗಟ್ಟಲಾಯಿತು.
ನಿಯಮ ಏನು ಹೇಳುತ್ತದೆ?
ಸಾಮಾನ್ಯವಾಗಿ ಕೇವಲ ಯೆಲ್ಲೋ ಕಾರ್ಡ್ ಅಥವಾ ಡೈವಿಂಗ್‌ಗಾಗಿ VAR ಪರಿಶೀಲನೆ ನಡೆಸಲು ನಿಯಮಗಳಲ್ಲಿ ಅವಕಾಶವಿಲ್ಲ. ಆದರೆ 2026ರ ವಿಶ್ವಕಪ್‌ಗಾಗಿ ಅಂತರರಾಷ್ಟ್ರೀಯ ಫುಟ್‌ಬಾಲ್ ಅಸೋಸಿಯೇಷನ್ ಮಂಡಳಿ (IFAB) ಜಾರಿಗೆ ತಂದ ಹೊಸ ‘ಮಿಸ್ಟೇಕನ್ ಐಡೆಂಟಿಟಿ’ (ತಪ್ಪು ಗುರುತಿಸುವಿಕೆ) ನಿಯಮ ಇಲ್ಲಿ ಬಳಕೆಯಾಗಿದೆ.
ತಪ್ಪಾದ ಆಟಗಾರನಿಗೆ ಕಾರ್ಡ್ ನೀಡಿದಾಗ ಅಥವಾ ಎದುರಾಳಿ ಆಟಗಾರ ತಪ್ಪು ಮಾಡದಿದ್ದರೂ ಶಿಕ್ಷಿಸಿದಾಗ ಅದನ್ನು ಸರಿಪಡಿಸಲು VAR ಗೆ ಈ ನಿಯಮ ಅಧಿಕಾರ ನೀಡುತ್ತದೆ. ರೆಫರಿ ಮೊದಲು ಪರೇಡೆಸ್ ಅವರಿಗೆ ಕಾರ್ಡ್ ನೀಡಿದ್ದರಿಂದ, ಆ ತಪ್ಪನ್ನು ತಿದ್ದಲು ಹೋದಾಗ ನಿಜವಾದ ತಪ್ಪುಗಾರ ಎಂಬೊಲೊ ಸಿಕ್ಕಿಬಿದ್ದರು.
ವಿವಾದಕ್ಕೆ ಕಾರಣಗಳೇನು?
ಅರ್ಜೆಂಟೀನಾ ತಂಡಕ್ಕೆ VAR ನಿಯಮಗಳು ಪದೇ ಪದೇ ನೆರವಾಗುತ್ತಿವೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ. ಟೂರ್ನಿಯ ಆರಂಭದಲ್ಲಿ ಈಜಿಪ್ಟ್ ವಿರುದ್ಧದ ಪಂದ್ಯದಲ್ಲೂ ಇಂತಹದ್ದೇ ವಿವಾದಾತ್ಮಕ ತೀರ್ಪು ಅರ್ಜೆಂಟೀನಾ ಪರವಾಗಿ ಬಂದಿತ್ತು.
ಸ್ವಿಟ್ಜರ್‌ಲ್ಯಾಂಡ್ ತಂಡದ ಮುಖ್ಯ ತರಬೇತುದಾರ ಮುರಾತ್ ಯಾಕಿನ್ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದು, ಇದು ಪಂದ್ಯದ ಗತಿಯನ್ನೇ ಬದಲಿಸಿತು ಎಂದು ಆಸಮಾಧಾನ ವ್ಯಕ್ತಪಡಿಸಿದ್ದಾರೆ.
1-1 ಸಮಬಲ ಸಾಧಿಸಿದ ಕೇವಲ 5 ನಿಮಿಷಗಳಲ್ಲಿ ಸ್ವಿಟ್ಜರ್‌ಲ್ಯಾಂಡ್ 10 ಆಟಗಾರರಿಗೆ ಸೀಮಿತವಾಗಿದ್ದರಿಂದ, ಎಕ್ಸ್‌ಟ್ರಾ ಟೈಮ್‌ನಲ್ಲಿ ಅರ್ಜೆಂಟೀನಾ ಮೇಲುಗೈ ಸಾಧಿಸಲು ಸಾಧ್ಯವಾಯಿತು ಎಂದು ಮುರಾತ್ ಯಾಕಿನ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
Switzerland are down to 10 men after the red card and are now battling with just 10 players on the pitch… 🤦♀️⚽🇨🇭
Still don’t know how that was a foul worthy of a red card! 🤷♀️ pic.twitter.com/1DStJqajQx
— Archana Pawar 🇮🇳 (@SilentEyes0106) July 12, 2026
ರೆಡ್ ಕಾರ್ಡ್ ನೀಡಲೇಬೇಕಿತ್ತಾ?
ಫಿಫಾ ನಿಯಮಗಳ ಪ್ರಕಾರ ಇದು ರೆಡ್ ಕಾರ್ಡ್ ನೀಡಬಹುದಾದ ತಪ್ಪೇ ಆಗಿತ್ತು. ಆದರೆ, ಎಂಬೊಲೊ ಅವರಿಗೆ ನೇರವಾಗಿ ರೆಡ್ ಕಾರ್ಡ್ ನೀಡಲಾಗಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಬದಲಿಗೆ ಎರಡು ಯೆಲ್ಲೋ ಕಾರ್ಡ್‌ಗಳು ಸೇರಿದ ಪರಿಣಾಮವಾಗಿ ಅವರು ಮೈದಾನದಿಂದ ಹೊರಹೋಗಬೇಕಾಯಿತು.
- ಬ್ರೀಲ್ ಎಂಬೊಲೊ ಅವರು ಪಂದ್ಯದ 44ನೇ ನಿಮಿಷದಲ್ಲೇ ಒಂದು ಫೌಲ್ ಮಾಡಿದ್ದಕ್ಕಾಗಿ ಮೊದಲ ಯೆಲ್ಲೋ ಕಾರ್ಡ್ (ಎಚ್ಚರಿಕೆ) ಪಡೆದುಕೊಂಡಿದ್ದರು
- 72ನೇ ನಿಮಿಷದಲ್ಲಿ ಅವರು ಪೆನಾಲ್ಟಿ ಪಡೆಯುವ ಉದ್ದೇಶದಿಂದ ಮೈದಾನದಲ್ಲಿ ಡೈವ್ ಮಾಡಿದ್ದು (ಅಭಿನಯಿಸಿದ್ದು) ರಿಪ್ಲೇನಲ್ಲಿ ಸಾಬೀತಾಯಿತು.
ಫುಟ್‌ಬಾಲ್ ನಿಯಮ 12ರ ಪ್ರಕಾರ ಆಟಗಾರರನ್ನು ಹಾದಿ ತಪ್ಪಿಸಲು ಮೈದಾನದಲ್ಲಿ ನಟಿಸುವುದು ಕ್ರೀಡಾ ವಿರೋಧಿ ನಡವಳಿಕೆಯಾಗಿದ್ದು, ಇದಕ್ಕೆ ಕಡ್ಡಾಯವಾಗಿ ಯೆಲ್ಲೋ ಕಾರ್ಡ್ ನೀಡಲಾಗುತ್ತದೆ. ಒಂದೇ ಪಂದ್ಯದಲ್ಲಿ ಎರಡು ಯೆಲ್ಲೋ ಕಾರ್ಡ್ ಪಡೆದ ಆಟಗಾರನನ್ನು ನಿಯಮಾವಳಿಗಳ ಪ್ರಕಾರ ರೆಡ್ ಕಾರ್ಡ್ ನೀಡಿ ಹೊರಗಟ್ಟಲಾಗುತ್ತದೆ.
ಹೀಗಾಗಿ ಬ್ರೀಲ್ ಎಂಬೊಲೊ ಅವರನ್ನು ರೆಡ್ ಕಾರ್ಡ್ (ಡಬಲ್ ಯೆಲ್ಲೋ ಕಾರ್ಡ್) ಮೂಲಕ ಹೊರಗೆ ಕಳುಹಸಿದ್ದು, ಮ್ಯಾಚ್ ರೆಫರಿಯ ಸರಿಯಾದ ನಿರ್ಧಾರ. ಇದಾಗ್ಯೂ ರೆಫರಿಯ ಈ ನಿರ್ಧಾರ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!
ಮಾಜಿ ಪ್ರೀಮಿಯರ್ ಲೀಗ್ ರೆಫರಿ ಮಾರ್ಕ್ ಕ್ಲಾಟನ್‌ಬರ್ಗ್ ಸೇರಿದಂತೆ ಕೆಲವರು ಈ ತೀರ್ಪನ್ನು ಟೀಕಿಸಿದ್ದಾರೆ. ನಿಯಮದ ಪ್ರಕಾರ ಕಾರ್ಡ್ ಬದಲಾಯಿಸಿದ್ದು ಸರಿಯಾಗಿದ್ದರೂ, ಆಟಗಾರ ಈಗಾಗಲೇ ಮೊದಲ ಹಂತದಲ್ಲಿ ಒಂದು ಯೆಲ್ಲೋ ಕಾರ್ಡ್ ಪಡೆದಿದ್ದಾನೆ ಎಂಬುದನ್ನು ಗಮನಿಸಬೇಕಿತ್ತು.
ಕೇವಲ ಡೈವಿಂಗ್ ಮಾಡಿದ್ದಕ್ಕಾಗಿ ಪಂದ್ಯದ ಅಷ್ಟು ದೊಡ್ಡ ಹಂತದಲ್ಲಿ ಎರಡನೇ ಯೆಲ್ಲೋ ಕಾರ್ಡ್ (ಅಂದರೆ ರೆಡ್ ಕಾರ್ಡ್) ನೀಡಿದ್ದು ತುಂಬಾ ಕಠೋರವಾದ ನಿರ್ಧಾರ ಎಂದು ಮಾಜಿ ಪ್ರಸಿದ್ಧ ರೆಫರಿ ಹಾಗೂ ಫಾಕ್ಸ್ ಸ್ಪೋರ್ಟ್ಸ್ ವಿಶ್ಲೇಷಕ ಮಾರ್ಕ್ ಕ್ಲಾಟನ್‌ಬರ್ಗ್ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
Published On – 11:59 am, Sun, 12 July 26