ಕೆಂಪೇಗೌಡ ಏರ್ಪೋರ್ಟ್Image Credit source: Airport Technology
ದೇವನಹಳ್ಳಿ, ಫೆಬ್ರವರಿ 28: ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ದಾಳಿ (Israel-Iran Conflict) ಶುರು ಮಾಡಿವೆ. ಇರಾನ್ ಸಹ ಅಮೆರಿಕ, ಇಸ್ರೇಲ್ ದಾಳಿಗೆ ಪ್ರತ್ಯುತ್ತರ ಕೊಡುತ್ತಿದೆ. ಅಮೆರಿಕ ಸೇನಾ ನೆಲೆಗಳಿದ್ದ ಅರಬ್ ರಾಷ್ಟ್ರಗಳ ಮೇಲೆ ಮಿಸೈಲ್ ದಾಳಿ ನಡೆಸಿದೆ. ಅಲ್ಲಿಗೆ ಮಧ್ಯ ಪ್ರಾಚ್ಯದಲ್ಲಿ ಯುದ್ಧ ಶುರುವಾಗಿದೆ. ಸದ್ಯ ಈ ಯುದ್ಧ ಆತಂಕಕ್ಕೆ ಕಾರಣವಾಗಿದೆ. ಎಲ್ಲೆಡೆ ವಿಮಾನಗಳ ಹಾರಾಟ ರದ್ದು (Flight Cancel) ಮಾಡಲಾಗಿದೆ. ಇತ್ತ ಕೆಂಪೇಗೌಡ ಏರ್ಪೋರ್ಟ್ನಿಂದ ತೆರಳಬೇಕಿದ್ದ ಕೆಲ ವಿಮಾನಗಳು ರದ್ದಾಗಿವೆ.
ವಿಮಾನಗಳ ಹಾರಾಟ ರದ್ದು
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಅಕ್ಷರಶಃ ಯುದ್ಧವನ್ನೇ ಶುರುಮಾಡಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ಕೆಂಪೇಗೌಡ ಏರ್ಪೋರ್ಟ್ನಿಂದ ತೆರಳಬೇಕಿದ್ದ ವಿಮಾನಗಳು ಸೇರಿದಂತೆ ವಿದೇಶದಿಂದ ಬೆಂಗಳೂರಿಗೆ ಬರಬೇಕಿದ್ದ ಕೆಲ ವಿಮಾನಗಳನ್ನು ಸಹ ಕ್ಯಾನ್ಸಲ್ ಮಾಡಲಾಗಿದೆ.
ಇದನ್ನೂ ಓದಿ: ಇರಾನ್-ಇಸ್ರೇಲ್ ಯುದ್ಧ: ಯುದ್ಧಭೂಮಿಯಿಂದ ಕನ್ನಡಿಗ ಹೇಳಿದ್ದಿಷ್ಟು
ದುಬೈ, ಅಬುಧಾಬಿ, ಜಿದ್ದಾಗೆ ತೆರಳಬೇಕಿದ್ದ ವಿಮಾನಗಳು ರದ್ದು ಮಾಡಲಾಗಿದೆ. ಏರ್ಲೈನ್ಸ್ ಸಿಬ್ಬಂದಿ ಈಗಾಗಲೇ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ. ಇರಾನ್ ಮೇಲೆ ದಾಳಿ ಹಿನ್ನೆಲೆ ಮತ್ತಷ್ಟು ವಿಮಾನಗಳು ರದ್ದಾಗುವ ಕೂಡ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಯಾವೆಲ್ಲಾ ವಿಮಾನಗಳ ಹಾರಾಟ ರದ್ದು
ರಾತ್ರಿ 8.20ಕ್ಕೆ ದುಬೈಗೆ ತೆರಳಬೇಕಿದ್ದ ಎಮಿರೇಟ್ಸ್ ವಿಮಾನ ಹಾಗೂ ರಾತ್ರಿ 10.10ಕ್ಕೆ ರಿಯಾದ್ ನಗರಕ್ಕೆ, ರಾತ್ರಿ 12.10ಕ್ಕೆ ಅಬುಧಾಬಿಗೆ ಮತ್ತು ರಾತ್ರಿ 12.35ಕ್ಕೆ ಜಿದ್ದಾಗೆ ತೆರಳಬೇಕಿದ್ದ ಇಂಡಿಗೋ ವಿಮಾನಗಳ ಹಾರಾಟ ರದ್ಧು ಮಾಡಲಾಗಿದೆ.
ಇದನ್ನೂ ಓದಿ: ಇಸ್ರೇಲ್-ಇರಾನ್ ಮಧ್ಯೆ ಯುದ್ಧ: ದುಬೈ ಏರ್ಪೋರ್ಟ್ನಲ್ಲಿ ಕುಟುಂಬ ಸಮೇತ ಸಿಲುಕಿದ ಭೋಜೇಗೌಡ
ಇನ್ನು ಕೆಂಪೇಗೌಡ ಏರ್ಪೋರ್ಟ್ನಿಂದ ವಿದೇಶಕ್ಕೆ ತೆರಳಬೇಕಿದ್ದ ಕೆಲ ವಿಮಾನಗಳು ಕ್ಯಾನ್ಸಲ್ ಮಾಡಲಾಗಿದೆ. ದುಬೈನಿಂದ ಕೆಐಎಬಿಗೆ ರಾತ್ರಿ 2.40ಕ್ಕೆ ಬರಬೇಕಿದ್ದ ಎಮಿರೇಟ್ಸ್ ವಿಮಾನ, ದೋಹಾದಿಂದ ರಾತ್ರಿ 2.50ಕ್ಕೆ ಮತ್ತು ದುಬೈನಿಂದ ರಾತ್ರಿ 3.40ಕ್ಕೆ ಆಗಮಿಸಬೇಕಿದ್ದ ಇಂಡಿಗೋ ವಿಮಾನ ರದ್ದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 7:45 pm, Sat, 28 February 26