ಬೆಳಗಾವಿ, ಜುಲೈ 6: ಪಶ್ಚಿಮಘಟ್ಟದ ಭಾಗದಲ್ಲಿ ಮಳೆ ಚುರುಕು ಪಡೆದುಕೊಂಡಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ, ಜಾಂಬೋಟಿ ಮತ್ತು ಕಣಕುಂಬಿ ಪ್ರದೇಶದಲ್ಲಿ ಅಧಿಕ ಮಳೆಯಾಗುತ್ತಿದೆ. ಇದರಿಂದ ಜಲಪಾತಗಳು ಮೈದುಂಬಿಕೊಂಡಿದ್ದು ಧುಮ್ಮಿಕ್ಕಿ ಹರಿಯುತ್ತಿವೆ. ಇದನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಲಪಾತಗಳತ್ತ ಮುಖ ಮಾಡುತ್ತಿದ್ದು, ಅನಾಹುತಗಳನ್ನು ತಡೆಯಲು ಅರಣ್ಯ ಇಲಾಖೆಯು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಖಾನಾಪುರ ತಾಲೂಕಿನ ಬೆಟಣೆ, ಚಿಕಲೆ, ಚೋರ್ಲಾ, ಬಟವಾಡೆ ಫಾಲ್ಸ್ ಸೇರಿದಂತೆ ಒಟ್ಟು 9 ಜಲಪಾತಗಳಿಗೆ ಅರಣ್ಯ ಇಲಾಖೆ ಪ್ರವೇಶ ನಿರ್ಬಂಧ ಹೇರಿದೆ. ಈ ಪ್ರದೇಶಗಳನ್ನು ‘ರಿಸರ್ವ್’ ಎಂದು ಘೋಷಿಸಲಾಗಿದ್ದು, ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ.
ಈ ಹಿಂದೆ ಜಲಪಾತಗಳಲ್ಲಿ ಹುಚ್ಚಾಟ ನಡೆಸಿದ ಕಾರಣದಿಂದ ಜೀವ ಹಾನಿ ಸಂಭವಿಸಿರುವ ಪ್ರಕರಣಗಳು ವರದಿಯಾಗಿದ್ದವು. ಇದೇ ಕಾರಣಕ್ಕೆ, ಯಾವುದೇ ಅಪಾಯ ಸಂಭವಿಸುವುದನ್ನು ತಪ್ಪಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಜಲಪಾತಗಳ ಮಾರ್ಗಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ನಿಷೇಧವನ್ನು ಉಲ್ಲಂಘಿಸಿ ಒಳ ಪ್ರವೇಶಿಸುವವರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ