ಮಡಿಕೇರಿ, ಜುಲೈ 27: ಮಂಜಿನ ನಗರಿ, ಪ್ರವಾಸಿಗರ ಸ್ವರ್ಗ ಎಂದೆಲ್ಲ ಕರೆಸಿಕೊಳ್ಳುವ ಮಡಿಕೇರಿ ನಗರದ ರಸ್ತೆಗಳು ಶೋಚನೀಯ ಸ್ಥಿತಿಗೆ ತಲುಪಿದ್ದು, ನಗರಕ್ಕೆ ಭೇಟಿ ನೀಡುವವರು ಮತ್ತು ಸ್ಥಳೀಯ ನಿವಾಸಿಗಳಿಗೆ ನಿತ್ಯ ನರಕ ದರ್ಶನ ಮಾಡಿಸಯತ್ತಿವೆ. ರೋಡ್ ಸಂಪೂರ್ಣ ಹದಗೆಟ್ಟು ನೂರಾರು ಗುಂಡಿಗಳು ಬಿದ್ದಿರುವ ಕಾರಣ ಸಂಚಾರಕ್ಕೆ ವಾಹನ ಸವಾರರು ಸರ್ಕಸ್ ನಡೆಸಬೇಕಿದೆ. ಜನರಲ್ ತಿಮ್ಮಯ್ಯ ವೃತ್ತದಿಂದ ರಾಜಾಸೀಟ್ ತೆರಳುವ ರಸ್ತೆ, ಹೊಸ ಖಾಸಗಿ ಬಸ್ ನಿಲ್ದಾಣ ರಸ್ತೆ, ಅಬ್ಬಿಫಾಲ್ಸ್ ರಸ್ತೆ, ಸಂಪಿಗೆ ಕಟ್ಟೆ ರಸ್ತೆ ಸೇರಿ ಪ್ರಮುಖ ಮಾರ್ಗಗಳಲ್ಲಿಯೇ ಗುಂಡಿ ಬಿದ್ದಿದ್ದು, ಮಳೆ ವೇಳೆ ಇವುಗಳಲ್ಲಿ ನೀರು ನಿಲ್ಲುತ್ತಿವೆ. ಹೀಗಾಗಿ ಗುಂಡಿ ಯಾವುದು ಎಂದು ಗೊತ್ತಾಗದೆ ಪ್ರಾಣ ಕೈಯಲ್ಲಿ ಹಿಡಿದು ಜನ ಸಂಚರಿಸಬೇಕಿದೆ.
ರಸ್ತೆ ದುರಸ್ತಿ ಮಾಡದೆ ನಿರ್ಲಕ್ಷ್ಯ
ಮಳೆಗಾಲ ಆರಂಭಕ್ಕೂ ಮೊದಲು ಈ ರಸ್ತೆಗಳಿಗೆ ಕನಿಷ್ಠ ತೇಪೆ ಹಾಕುವ ಕೆಲಸ ಮಾಡಬೇಕಿತ್ತು. ಆದ್ರೆ ಜೂನ್ ತಿಂಗಳಾಂತ್ಯದವರೆಗೆ ಈ ಬಾರಿ ಬಿಸಿಲಿದ್ದರೂ ಮಡಿಕೇರಿ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಎಚ್ಚೆತ್ತುಕೊಳ್ಳಲಿಲ್ಲ. ಹಾಗಾಗಿ ಇದೀಗ ರಸ್ತೆಗಳೆಲ್ಲ ದುಸ್ಥಿತಿ ತಲುಪಿವೆ. ಪರಿಣಾಮ ಈ ರಸ್ತೆಯಲ್ಲಿ ನಿತ್ಯ ಓಡಾಡುವ ಸಾವಿರಾರು ಸ್ಥಳೀಯರು, ಪ್ರವಾಸಿಗರು ನಗರಸಭೆಗೆ ಶಾಪ ಹಾಕುತ್ತಲೇ ತೆರಳುತ್ತಿದ್ದಾರೆ. ಗುಂಡಿ ತಪ್ಪಿಸಲು ಹೋಗಿ ಅಪಘಾತಗಳು ನಗರದಲ್ಲಿ ಮಾಮೂಲು ಎಂಬಂತಾಗಿದ್ದು, ಮಡಿಕೇರಿಯ ಸೌಂದರ್ಯ ಸವಿಯಲು ಆಗಮಿಸುವ ಪ್ರವಾಸಿಗರು ಕೂಡ ಇಲ್ಲಿನ ರಸ್ತೆ ದುಸ್ಥಿತಿ ಕಂಡು ಕಂಗಾಲಾಗಿದ್ದಾರೆ.
ಇದನ್ನೂ ಓದಿ: “ಅಮ್ಮ ಏಳಮ್ಮ…” ತಾಯಿಯ ಶವದ ಬಳಿ ಮರಿ ಆನೆಯ ಮೂಕರೋಧನೆ; ಕಣ್ಣೀರಿಟ್ಟ ಜನತೆ
ರಸ್ತೆಗಳನ್ನ ಉನ್ನತ ದರ್ಜೆಗೇರಿಸುವಂತೆ ಮನವಿ
ಜೋರಾಗಿ ಮಳೆ ಸುರಿಯುವ ವೇಳೆ ರಸ್ತೆ ತುಂಬ ನೀರು ತುಂಬಿಕೊಂಡು ಬಹಳ ಸಮಸ್ಯೆ ಆಗುತ್ತಿದೆ. ಹೀಗಾಗಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಹೆಚ್ಚಿನ ಅನುದಾನ ತಂದು ನಗರದ ರಸ್ತೆಗಳನ್ನ ಉನ್ನತ ದರ್ಜೆಗೇರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಆ ಮೂಲಕ ನಗರ ಕುಖ್ಯಾತಿಗೆ ಪಾತ್ರವಾಗುತ್ತಿರೋದನ್ನು ತಪ್ಪಿಸಲು ಸಹಕರಿಸುವಂತೆ ಕೇಳಿಕೊಂಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 3:53 pm, Mon, 27 July 26