
ಗುರುಗ್ರಾಮ, ಮಾರ್ಚ್ 22: ಪ್ರೀತಿಸಿ ನಾಲ್ಕು ತಿಂಗಳ ಹಿಂದೆ ಮದುವೆ(Marriage)ಯಾಗಿದ್ದ ವ್ಯಕ್ತಿ ವರದಕ್ಷಿಣೆಗಾಗಿ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ರೇಡಿಯಾಲಜಿಸ್ಟ್ ಆಗಿರುವ ಅರುಣ್ ಶರ್ಮಾ ಮತ್ತು ನರ್ಸ್ ಆಗಿರುವ ಕಾಜಲ್ ಗುರುಗ್ರಾಮ್ನ ನರ್ಸಿಂಗ್ ಹೋಂನಲ್ಲಿ ಸಹೋದ್ಯೋಗಿಗಳಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. ದೀರ್ಘಕಾಲ ಒಟ್ಟಿಗೆ ಕೆಲಸ ಮಾಡಿದ ಅವರ ಬಾಂಧವ್ಯ ಸ್ನೇಹವಾಗಿ ಬದಲಾಗಿತ್ತು ಮತ್ತು ಅವರಿಗೆ ತಿಳಿಯದೇ ಪ್ರೀತಿಯಲ್ಲಿ ಬಿದ್ದಿದ್ದರು.
ಅವರು ಒಂದು ಹೆಜ್ಜೆ ಮುಂದಿಟ್ಟು ಕಳೆದ ನವೆಂಬರ್ನಲ್ಲಿ ವಿವಾಹವಾದರು, ಒಟ್ಟಿಗೆ ಅವರ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದರು. ಆದರೆ, ಆ ಸಂಬಂಧವು ನಾಲ್ಕು ತಿಂಗಳೊಳಗೆ ದುರಂತ ಅಂತ್ಯಗೊಂಡಿತು, ಅರುಣ್ ವರದಕ್ಷಿಣೆಗಾಗಿ ಆಕೆಯ ಕೊಲೆಯನ್ನೇ ಮಾಡಿದ್ದಾನೆ.
ಮದುವೆಯಾದ ಕೂಡಲೇ, ಅರುಣ್ ತನ್ನ ಹೆಂಡತಿಯ ಮೇಲೆ ಕ್ಷುಲ್ಲಕ ವಿಷಯಗಳಿಗೆ ದೈಹಿಕವಾಗಿ ಹಲ್ಲೆ ಮಾಡಲು ಶುರುಮಾಡಿದ್ದ ಎಂದು ಕಾಜಲ್ ಸಹೋದರ ಹೇಳಿದ್ದಾರೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಮತ್ತು ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ಓದಿ: ಮದುವೆ ಮನೆಗಳೇ ಈತನ ಟಾರ್ಗೆಟ್: ಕುಖ್ಯಾತ ಕಳ್ಳ ಪಲ್ಸರ್ ಬಾಬು ಅರೆಸ್ಟ್; 42 ಲಕ್ಷ ರೂ.ಗೂ ಅಧಿಕ ಮೌಲ್ಯದ ಸ್ವತ್ತು ವಶ!
ಮಾರ್ಚ್ 4 ರ ಹೋಳಿ ಹಬ್ಬದಂದು, ದಂಪತಿ ಗುರುಗ್ರಾಮ್ನ ಗರ್ಹಿ ಹರ್ಸಾರು ಎಂಬಲ್ಲಿ ಕಾಜಲ್ ಅವರ ಕುಟುಂಬದೊಂದಿಗೆ ಸ್ವಲ್ಪ ದಿನ ಇರಬೇಕೆಂದು ಬಂದಿದ್ದರು. ಸುಮಾರು ಎರಡು ವಾರಗಳ ನಂತರ, ಮಾರ್ಚ್ 17 ರಂದು, ಅರುಣ್, ಕಾಜಲ್ ಅವರನ್ನು ದೈಹಿಕವಾಗಿ ಹಲ್ಲೆ ಮಾಡಿದ್ದ.
ಮರುದಿನ ಬೆಳಗ್ಗೆ, ಅರುಣ್ ಕಾಜಲ್ ಅವರನ್ನು ಕೆಳಗಡೆಗೆ ಕರೆದೊಯ್ದಿದ್ದ ಆಗ ಇಬ್ಬರ ನಡುವೆ ಜಗಳ ನಡೆದಿತ್ತು. ಸ್ವಲ್ಪ ಸಮಯದ ನಂತರ, ಕಾಜಲ್ ಪ್ರಜ್ಞೆ ತಪ್ಪಿ ಬಿದ್ದಿದ್ದಳು, ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು, ಕುಟುಂಬವು ಕಾಜಲ್ ಳನ್ನು ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ, ತುಂಬಾ ತಡವಾಗಿತ್ತು, ಆಕೆ ಕೊನೆಯುಸಿರೆಳೆದಿದ್ದಳು.
ಕಾಜಲ್ ಅವರ ಕುಟುಂಬವು ಶೌಚಾಲಯದಲ್ಲಿ ಸಿರಿಂಜ್ ಸಿಕ್ಕಿದೆ ಎಂದು ಹೇಳಿಕೊಂಡಿದ್ದು, ಅರುಣ್ ಆಕೆಗೆ ವಿಷ ಪೂರಿತ ಚುಚ್ಚುಮದ್ದು ನೀಡಿದ್ದಾನೆ ಎಂದು ಅವರು ಶಂಕಿಸಿದ್ದಾರೆ. ಪೊಲೀಸರ ವಿಚಾರಣೆಯ ಸಮಯದಲ್ಲಿ, ಅರುಣ್ ಕಾಜಲ್ಗೆ ವಿಷಕಾರಿ ಇಂಜೆಕ್ಷನ್ ನೀಡಿದ್ದರಿಂದ ಆಕೆಯ ಸಾವು ಸಂಭವಿಸಿದೆ ಎಂದು ಒಪ್ಪಿಕೊಂಡಿದ್ದಾನೆ.
ಉತ್ತರ ಪ್ರದೇಶದ ಗಾಜಿಯಾಬಾದ್ನ ಬೆಹ್ತಾ ಹಾಜಿಪುರದ ನಿವಾಸಿ ಅರುಣ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಅರುಣ್ನನ್ನು ರೈಲ್ವೆ ನಿಲ್ದಾಣದಿಂದ ಬಂಧಿಸಲಾಗಿದ್ದು, ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ