ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಎರಡನೇ ಬಾರಿ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಅವರು ನಟಿಸುತ್ತಿರುವ ಬಹುನಿರೀಕ್ಷಿತ ‘ರಾಕಾ’ (Raaka) ಸಿನಿಮಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹರಿದಾಡುತ್ತಿದ್ದವು. ದೀಪಿಕಾ ಗರ್ಭಿಣಿಯಾಗಿರುವ ಕಾರಣ ಚಿತ್ರದಲ್ಲಿ ಅವರ ಪಾತ್ರಕ್ಕೆ ಕತ್ತರಿ ಹಾಕಲಾಗುತ್ತಿದೆ ಅಥವಾ ಅವರನ್ನು ಸಿನಿಮಾದಿಂದ ಕೈಬಿಡಲಾಗುತ್ತಿದೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ, ಈಗ ಚಿತ್ರತಂಡ ಈ ಎಲ್ಲಾ ವದಂತಿಗಳಿಗೆ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ.
ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ ‘ರಾಕಾ’ ಚಿತ್ರದಿಂದ ದೀಪಿಕಾ ಅವರ ಪಾತ್ರವನ್ನು ಟ್ರಿಮ್ ಮಾಡಲಾಗುತ್ತಿದೆ ಎಂಬ ವರದಿಗಳು ಸಂಪೂರ್ಣ ಆಧಾರರಹಿತ ಎಂದು ಚಿತ್ರತಂಡ ಹೇಳಿದೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಚಿತ್ರತಂಡದವರು, ‘ಎಲ್ಲವೂ ಯೋಜನೆಯಂತೆಯೇ ನಡೆಯುತ್ತಿದೆ. ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಅತ್ಯಂತ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರೀಕರಣವು ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿದೆ’ ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ದೀಪಿಕಾ ಪಡುಕೋಣೆ ಅವರು ಗರ್ಭಿಣಿಯಾಗಿದ್ದರೂ ಸಹ ಚಿತ್ರದ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣದ ವೇಳಾಪಟ್ಟಿಗೆ ಯಾವುದೇ ತೊಂದರೆಯಾಗದಂತೆ ಅವರು ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಚಿತ್ರದ ಕೆಲವು ಪ್ರಮುಖ ಸಾಹಸ ದೃಶ್ಯಗಳಲ್ಲೂ ಅವರು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಪ್ರೆಗ್ನೆಂಟ್ ಆದ ಕಾರಣ ಚಿತ್ರತಂಡವು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣ ನಡೆಸುತ್ತಿದೆ.
ಅಟ್ಲಿ ನಿರ್ದೇಶನದ ಈ ಚಿತ್ರವನ್ನು ‘ಸನ್ ಪಿಕ್ಚರ್ಸ್’ ಸಂಸ್ಥೆ ನಿರ್ಮಿಸುತ್ತಿದೆ. ಈಗಾಗಲೇ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ಅವರ ಫಸ್ಟ್ ಲುಕ್ ಪೋಸ್ಟರ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಚಿತ್ರವು 2027ರಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಪ್ರೆಗ್ನೆನ್ಸಿಯಲ್ಲಿರುವಾಗಲೇ ದೊಡ್ಡ ರಿಸ್ಕ್ ತೆಗೆದುಕೊಂಡ ದೀಪಿಕಾ ಪಡುಕೋಣೆ
ಈ ಮೊದಲು ದೀಪಿಕಾ ಪಡುಕೋಣೆ ಅವರು ‘ಸ್ಪಿರಿಟ್’ ಹಾಗೂ ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್ನಿಂದ ಹೊರಬಂದಿದ್ದರು. ದಿನಕ್ಕೆ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುವುದಾಗಿ ಅವರು ಷರತ್ತು ಹಾಕಿದ್ದರಿಂದ ಆ ಸಿನಿಮಾ ತಂಡಗಳು ಅವರನ್ನು ಬಿಟ್ಟು ಬೇರೆ ನಟಿಯರನ್ನು ಆಯ್ಕೆ ಮಾಡಿಕೊಂಡವು. ಆದರೂ ದೀಪಿಕಾ ಡಿಮ್ಯಾಂಡ್ ಕಡಿಮೆ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.