ನವದೆಹಲಿ, ಆಗಸ್ಟ್ 11: ಆಗಸ್ಟ್ 4ರಂದು ಹಾರಾಟದ ಮಧ್ಯೆ ದಿಢೀರನೆ ಸುಮಾರು 300 ಅಡಿ ಕೆಳಗೆ ಕುಸಿದು ಅಪಘಾತಕ್ಕೀಡಾಗಿದ್ದ ಫುಕೆಟ್-ದೆಹಲಿ ಏರ್ ಇಂಡಿಯಾ (Air India) ವಿಮಾನದ ಮುಖ್ಯ ಪೈಲಟ್ 2ನೇ ಡೋಪ್ ಪರೀಕ್ಷೆಯಲ್ಲೂ ಡ್ರಗ್ಸ್ (ಮಾದಕ ದ್ರವ್ಯ) ಸೇವಿಸಿರುವುದು ಖಚಿತವಾಗಿದೆ. ಈ ಘಟನೆಯ ನಂತರ ನಿಯಮಾವಳಿಗಳಂತೆ ಇಬ್ಬರೂ ಪೈಲಟ್ಗಳನ್ನು ಮಾದಕ ದ್ರವ್ಯ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಸಹ-ಪೈಲಟ್ನ ಪರೀಕ್ಷಾ ವರದಿಯಲ್ಲಿ ಯಾವುದೇ ದೋಷ ಕಂಡುಬಂದಿರಲಿಲ್ಲ. ಆದರೆ ಮುಖ್ಯ ಪೈಲಟ್ನ ಮೊದಲ ಡ್ರಗ್ಸ್ ಪರೀಕ್ಷೆಯಲ್ಲಿ ಅನುಮಾನಾಸ್ಪದ ಫಲಿತಾಂಶ ಬಂದಿದ್ದರಿಂದ, ಅವರ ಮಾದರಿಯನ್ನು ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗ ಬಂದಿರುವ ಅಂತಿಮ ವರದಿಯಲ್ಲಿ ಡ್ರಗ್ಸ್ ಸೇವನೆ ದೃಢಪಟ್ಟಿದೆ.
ಈ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ್ದ ಏರ್ ಇಂಡಿಯಾ ಡಿಸಿಜಿಎ (DGCA) ಮಾರ್ಗಸೂಚಿಗಳಂತೆ ಸಿಬ್ಬಂದಿಯನ್ನು ಮಾದಕ ದ್ರವ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಆದರೆ ಈವರೆಗೂ ಪರೀಕ್ಷೆಯ ಅಧಿಕೃತ ವರದಿ ತಮ್ಮ ಕೈಸೇರಿಲ್ಲ ಎಂದು ಹೇಳಿತ್ತು.
ಇದನ್ನೂ ಓದಿ: ಆಕಾಶದಿಂದ 300 ಅಡಿ ಕುಸಿದ ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ; 14 ಜನರಿಗೆ ಗಾಯ
ಏರ್ ಇಂಡಿಯಾ ಸಿಇಒಗೆ ಸಮನ್ಸ್:
ಈ ಗಂಭೀರ ಘಟನೆಯ ಬೆನ್ನಲ್ಲೇ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿಮಾನಯಾನ ನಿಯಂತ್ರಣ ಸಂಸ್ಥೆ (DGCA) ಏರ್ ಇಂಡಿಯಾದ ನಿರ್ಗಮಿತ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ಅವರಿಗೆ ಸಮನ್ಸ್ ನೀಡಿದ್ದವು. ವಿಲ್ಸನ್ ಹಾಗೂ ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಮತ್ತು ಇತರ ಅಧಿಕಾರಿಗಳನ್ನು ಭೇಟಿಯಾಗಿ ವಿವರಣೆ ನೀಡಿದ್ದಾರೆ. ಈ ಉನ್ನತ ಮಟ್ಟದ ಸಭೆಯಲ್ಲಿ ಟಾಟಾ ಸನ್ಸ್ ಅಧ್ಯಕ್ಷರ ಮುಖ್ಯ ಸಲಹೆಗಾರ ಪ್ರದೀಪ್ ಸಿಂಗ್ ಖರೋಲಾ, ಡಿಜಿಸಿಎ ಡೈರೆಕ್ಟರ್ ಜನರಲ್ ವೀರ್ ವಿಕ್ರಮ್ ಯಾದವ್ ಹಾಗೂ ಎಎಐಬಿ ಡೈರೆಕ್ಟರ್ ಜನರಲ್ ಜಿ.ವಿ.ಜಿ. ಯುಗಂಧರ್ ಉಪಸ್ಥಿತರಿದ್ದರು.
ಏನಿದು ಘಟನೆ?:
ಆಗಸ್ಟ್ 4ರಂದು ಏರ್ಬಸ್ A320 ವಿಮಾನ (AI2379) ಫುಕೆಟ್ನಿಂದ ದೆಹಲಿಗೆ ಬರುತ್ತಿದ್ದಾಗ ಹಾರಾಟದ ಮಧ್ಯದಲ್ಲೇ 300 ಅಡಿ ಕೆಳಗೆ ಕುಸಿದಿತ್ತು, ಆಗಸದಲ್ಲೇ ಪಲ್ಟಿಯಾಗಿತ್ತು. ನಂತರ ಪೈಲಟ್ಗಳು ವಿಮಾನವನ್ನು ಸುಸ್ಥಿತಿಗೆ ತಂದು ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿಸಿದ್ದರು. ಈ ದುರಂತದಲ್ಲಿ 4 ವಿಮಾನ ಸಿಬ್ಬಂದಿ, 17 ಪ್ರಯಾಣಿಕರು ಗಾಯಗೊಂಡಿದ್ದರು.
ಇದನ್ನೂ ಓದಿ: ನಶೆ ಏಟಲ್ಲ, ತಾಂತ್ರಿಕ ದೋಷ ಕಾರಣ; ಏರ್ ಇಂಡಿಯಾ ವಿಮಾನ ಗಿರಕಿ ಹೊಡೆದ ಘಟನೆಗೆ ಕಾರಣ ಹುಡುಕಿದ ತನಿಖೆ
ತನಿಖಾ ಮೂಲಗಳ ಪ್ರಕಾರ, ಹಾರಾಟದ ಸಮಯದಲ್ಲಿ ಆಟೋ-ಪೈಲಟ್ ವ್ಯವಸ್ಥೆ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತ್ತು. ಸಹ-ಪೈಲಟ್ ವಿಮಾನವನ್ನು ಮ್ಯಾನುವಲ್ ಆಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸಿದಾಗ ವಿಮಾನದ ‘ಸ್ಟಾಲ್ ವಾರ್ನಿಂಗ್’ ಅಲಾರಾಂ ಮೊಳಗಿತ್ತು. ಹೈಡ್ರಾಲಿಕ್ ಸಿಸ್ಟಮ್ನಲ್ಲಿ ದೋಷ, ತಾಂತ್ರಿಕ ವೈಫಲ್ಯಗಳು ಹಾಗೂ ವಾಯು ತರಂಗಗಳು ಒಂದೇ ಸಮಯದಲ್ಲಿ ಸಂಭವಿಸಿದ್ದು ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಈ ಕುರಿತು ಸಮಗ್ರ ತನಿಖೆ ನಡೆಸುತ್ತಿದೆ.
ಏರ್ ಇಂಡಿಯಾದ ನಿರ್ಗಮಿತ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ಅವರು ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಈ ಘಟನೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ವಿಮಾನಯಾನದಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು ಮತ್ತು ಯಾವುದೇ ಹಂತದಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 8:39 pm, Tue, 11 August 26