ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿರುವ ಹಿನ್ನೆಲೆ ಫುಲ್ ಬಾಡಿ ಚೆಕ್‌ಅಪ್‌ಗಳ (Full Body Checkup) ಮಹತ್ವವೂ ಹೆಚ್ಚುತ್ತಿದೆ. ವ್ಯಸ್ತ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿ, ಒತ್ತಡ ಮತ್ತು ವ್ಯಾಯಾಮದ ಕೊರತೆಯಿಂದ ಹಲವು ರೀತಿಯ ಕಾಯಿಲೆಗಳು ನಿಧಾನವಾಗಿ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಹೆಚ್ಚಿನ ಲಕ್ಷಣಗಳು ಕಾಣಿಸದೇ ಇರುವ ಕಾರಣ, ಹಲವರು ಸಮಸ್ಯೆಯನ್ನು ಗಮನಿಸದೇ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ದೇಹದ ಒಳಗಿನ ಬದಲಾವಣೆಗಳನ್ನು ಬೇಗ ಪತ್ತೆಹಚ್ಚಿ ಚಿಕಿತ್ಸೆ ಆರಂಭಿಸಲು ಸಾಧ್ಯವಾಗುತ್ತದೆ. ಜೊತೆಗೆ ಗಂಭೀರ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಯಾವ ವಯಸ್ಸಿನಲ್ಲಿ ಫುಲ್ ಬಾಡಿ ಚೆಕ್‌ಅಪ್ ಮಾಡಿಸಿಕೊಳ್ಳಬೇಕು, ಯಾರಿಗೆ ಇದರ ಅವಶ್ಯಕತೆ ಹೆಚ್ಚಾಗಿರುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಯಾವ ವಯಸ್ಸಿನಲ್ಲಿ ಫುಲ್ ಬಾಡಿ ಚೆಕ್‌ಅಪ್ ಆರಂಭಿಸಬೇಕು?
ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಸಾಮಾನ್ಯವಾಗಿ 25 ರಿಂದ 30 ವರ್ಷದ ನಂತರ ದೇಹದಲ್ಲಿ ಕೆಲವು ಬದಲಾವಣೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತವೆ. ಈ ವಯಸ್ಸಿನಲ್ಲಿ ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಕಡಿಮೆ ದೈಹಿಕ ಚಟುವಟಿಕೆ ಮತ್ತು ಮಾನಸಿಕ ಒತ್ತಡ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ 30 ವರ್ಷದ ನಂತರ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. 40 ವರ್ಷದ ನಂತರ ಡಯಾಬಿಟೀಸ್, ರಕ್ತದೊತ್ತಡ, ಹೃದಯ ಸಂಬಂಧಿತ ಸಮಸ್ಯೆಗಳು ಮತ್ತು ಥೈರಾಯ್ಡ್ ಸಮಸ್ಯೆಗಳ ಅಪಾಯ ಹೆಚ್ಚಾಗುವ ಕಾರಣ ನಿಯಮಿತ ಚೆಕ್‌ಅಪ್ ಇನ್ನಷ್ಟು ಅಗತ್ಯವಾಗುತ್ತದೆ.
ಯಾರಿಗೆ ಫುಲ್ ಬಾಡಿ ಚೆಕ್‌ಅಪ್ ಅಗತ್ಯ?
ಕುಟುಂಬದಲ್ಲಿ ಡಯಾಬಿಟೀಸ್, ಹೈ ಬಿಪಿ, ಹೃದಯ ಕಾಯಿಲೆ ಅಥವಾ ಥೈರಾಯ್ಡ್ ಸಮಸ್ಯೆಗಳ ಇತಿಹಾಸ ಇರುವವರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಧೂಮಪಾನ, ಮದ್ಯಪಾನ ಮಾಡುವವರು ಹಾಗೂ ಹೆಚ್ಚು ಒತ್ತಡದ ಜೀವನಶೈಲಿ ಹೊಂದಿರುವವರಿಗೂ ಫುಲ್ ಬಾಡಿ ಚೆಕ್‌ಅಪ್ ಅಗತ್ಯವಾಗಿದೆ. ಇದರ ಜೊತೆಗೆ ಅತಿಯಾದ ತೂಕ, ಅಸಮತೋಲನ ಆಹಾರ ಮತ್ತು ವ್ಯಾಯಾಮದ ಕೊರತೆ ಇರುವವರು ಕೂಡ ಸಮಯಕ್ಕೊಮ್ಮೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎಂದು ವೈದ್ಯರು ತಿಳಿಸಿದ್ದಾರೆ.
ಯಾವ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷೆ ಮಾಡಿಸಬೇಕು?
ನಿರಂತರ ದೌರ್ಬಲ್ಯ, ತೂಕ ಏಕಾಏಕಿ ಕಡಿಮೆಯಾಗುವುದು ಅಥವಾ ಹೆಚ್ಚಾಗುವುದು, ಪದೇಪದೇ ತಲೆನೋವು, ನಿದ್ರೆ ಸಮಸ್ಯೆ, ಉಸಿರಾಟ ತೊಂದರೆ ಅಥವಾ ದೇಹದಲ್ಲಿ ಅಸಹಜ ಬದಲಾವಣೆಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡಬಾರದು. ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುವುದು, ಹಸಿವು ಕಡಿಮೆಯಾಗುವುದು ಅಥವಾ ದೇಹದಲ್ಲಿ ಶಕ್ತಿ ಕೊರತೆ ಕಂಡುಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಫುಲ್ ಬಾಡಿ ಚೆಕ್‌ಅಪ್ ಮಾಡಿಸಿಕೊಳ್ಳುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ