ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮಗಳು ಸಾಧ್ವಿ ಸೈಲ್ ಅವರು 61ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟ ಗೆದ್ದು ಸಾಧನೆ ಮಾಡಿದ್ದಾರೆ. ಏಪ್ರಿಲ್ 18ರಂದು ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಲ್ಲಿ ಫಿನಾಲೆ ನಡೆದಿದೆ. ಸಾಧ್ವಿ ಅವರು ಗೆದ್ದು ಕೀರಿಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಗೆದ್ದ ಬಳಿಕ ತಂದೆಯ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡಿ ಸಾಧ್ವಿ ಖುಷಿಪಟ್ಟಿದ್ದಾರೆ.
ವಿವಿಧ ರಾಜ್ಯಗಳ ಸ್ಪರ್ಧಿಗಳು ಫಿನಾಲೆಯಲ್ಲಿ ಇದ್ದರು. ಒಟ್ಟೂ 29 ಮಂದಿಯನ್ನು ಹಿಂದಿಕ್ಕಿ ಗೋವಾ ಪ್ರತಿನಿಧಿಸಿದ್ದ ಸಾಧ್ವಿ ಗೆದ್ದಿದ್ದಾರೆ. ಮಹಾರಾಷ್ಟ್ರದ ರಾಜನಂದಿನಿ ಅವರು ಮೊದಲ ರನ್ನರ್ ಅಪ್ ಆದರೆ, ಜಮ್ಮು ಹಾಗೂ ಕಾಶ್ಮೀರದ ಶ್ರೀತಿ ಅದ್ವೈತಾ ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ. ಕಳೆದ ವರ್ಷದ ವಿನ್ನರ್ ನಿಕಿತಾ ಪೋರ್ವಾಲ್ ಅವರು ಸಾಧ್ವಿಗೆ ಕಿರೀಟ ತೊಡಿಸಿದರು. ಕರ್ನಾಟಕವನ್ನು ಪ್ರತಿನಿಧಿಸಿದ್ದ ಖುಷಿ ರಮೇಶ್ ಅವರು ಟಾಪ್ 15ರಲ್ಲಿ ಸ್ಥಾನ ಪಡೆಯಲಷ್ಟೇ ಶಕ್ತರಾದರು.
‘ನನಗೆ ಈ ಅವಕಾಶ ಸಿಕ್ಕಿದ್ದಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ಇಲ್ಲಿ ಬಂದ ಪ್ರತಿಯೊಬ್ಬರೂ ವಿಜೇತರು. ಭಾರತವನ್ನು ಹೆಮ್ಮೆ ಪಡುವಂತೆ ಮಾಡುವುದು ನನ್ನ ಉದ್ದೇಶ’ ಎಂದು ಸಾಧ್ವಿ ಅವರು ಪ್ರತಿಕ್ರಿಯಿಸಿದ್ದಾರೆ. ಸಾಧ್ವಿ ಅವರು ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪದವಿ ಪಡೆದಿದ್ದಾರೆ.
ಇದನ್ನೂ ಓದಿ: ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಾಧ್ವಿ ಅವರು ಸ್ಪರ್ಧೆಗೆ ಹೋಗುವುದಕ್ಕೂ ಮೊದಲು 10 ಕೆಜಿ ತೂಕ ಇಳಿಸಿಕೊಂಡಿದ್ದರು ಎಂಬುದು ವಿಶೇಷ. ಸಾಧ್ವಿ ವಿವಿಧ ರೀತಿಯ ಹವ್ಯಾಸ ಹೊಂದಿದ್ದಾರೆ. ಛಾಯಾಗ್ರಹಣ, ಬ್ಯಾಡ್ಮಿಂಟನ್, ಜೇನುಸಾಕಣೆ ಮೊದಲಾದವು ಅವರ ಫೇವರಿಟ್ ಹಾಬಿ. ಸಾಧ್ವಿ ಅವರು 2026ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿಯಟ್ನಾಂನಲ್ಲಿ ಸ್ಪರ್ಧೆ ನಡೆಯಲಿದ್ದು, ಸೆಪ್ಟೆಂಬರ್ 5ರಂದು ಫಿನಾಲೆ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.