ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ (Fatty Liver) ಸಮಸ್ಯೆ ವೇಗವಾಗಿ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಆರಂಭಿಕ ಹಂತದಲ್ಲಿ ಹೆಚ್ಚಿನ ಲಕ್ಷಣಗಳು ಕಾಣಿಸದ ಕಾರಣ ಅನೇಕರು ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ತಜ್ಞರ ಪ್ರಕಾರ, ಫ್ಯಾಟಿ ಲಿವರ್ ಕೇವಲ ಯಕೃತ್ತಿನ ಸಮಸ್ಯೆಯಲ್ಲ; ಇದು ದೇಹದ ಇತರ ಪ್ರಮುಖ ಅಂಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ವೈದ್ಯರ ಪ್ರಕಾರ, ಯಕೃತ್ತಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಕೊಬ್ಬು ಜಮೆಯಾಗುವುದನ್ನು ಫ್ಯಾಟಿ ಲಿವರ್ ಎಂದು ಕರೆಯಲಾಗುತ್ತದೆ. ಯಕೃತ್ತು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಹಾಗೂ ದೇಹದ ಶಕ್ತಿಯನ್ನು ಸಮತೋಲನದಲ್ಲಿ ಇಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಈ ಯಕೃತ್ತಿನ ಕಾರ್ಯಕ್ಷಮತೆ ಕುಂದಿದಾಗ ದೇಹದ ಇತರ ಅಂಗಗಳ ಮೇಲೂ ಪರಿಣಾಮ ಕಾಣಿಸಿಕೊಳ್ಳಬಹುದು. ಹಾಗಾದರೆ ಈ ಸಮಸ್ಯೆ ಯಾವ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ, ಫ್ಯಾಟಿ ಲಿವರ್ ಸಮಸ್ಯೆಯನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಯಾವ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ?
ಲೇಡಿ ಹಾರ್ಡಿಂಗ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ನಿರ್ದೇಶಕ ಡಾ. ಎಲ್.ಎಚ್. ಘೋಟೇಕರ್ ಹೇಳುವ ಪ್ರಕಾರ, ಫ್ಯಾಟಿ ಲಿವರ್ ಸಮಸ್ಯೆಯಿಂದ ಹೃದಯ, ಮೂತ್ರಪಿಂಡ, ಪ್ಯಾಂಕ್ರಿಯಾಸ್ ಮತ್ತು ದೇಹದ ಮೆಟಾಬಾಲಿಸಂ ಮೇಲೂ ದುಷ್ಪರಿಣಾಮ ಉಂಟಾಗಬಹುದು. ಜೊತೆಗೆ ಫ್ಯಾಟಿ ಲಿವರ್ ಇರುವವರಲ್ಲಿ ಹೈ ಬ್ಲಡ್ ಪ್ರೆಶರ್, ಕೊಲೆಸ್ಟ್ರಾಲ್ ಹೆಚ್ಚಳ, ಇನ್ಸುಲಿನ್ ರೆಸಿಸ್ಟೆನ್ಸ್ ಹಾಗೂ ಟೈಪ್- 2 ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಯಕೃತ್ತು ಸರಿಯಾಗಿ ಕೆಲಸ ಮಾಡದಿದ್ದರೆ ದೇಹದಲ್ಲಿ ಉರಿಯೂತ ಹೆಚ್ಚಾಗಿ ಹೃದಯ ಮತ್ತು ರಕ್ತನಾಳಗಳ ಆರೋಗ್ಯಕ್ಕೂ ಹಾನಿಯಾಗಬಹುದು. ಕೆಲವೊಮ್ಮೆ ಮೂತ್ರಪಿಂಡದ ಕಾರ್ಯಕ್ಷಮತೆಯೂ ಕುಂದಬಹುದು. ಪ್ಯಾಂಕ್ರಿಯಾಸ್ ಮೇಲೆ ಪರಿಣಾಮ ಬಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ ಕಷ್ಟವಾಗಬಹುದು. ಸಮಸ್ಯೆ ಗಂಭೀರವಾದರೆ ಲಿವರ್ ಉರಿಯೂತ, ಫೈಬ್ರೋಸಿಸ್, ಸಿರೋಸಿಸ್ ಮತ್ತು ಲಿವರ್ ಫೇಲ್ಯರ್ ಅಪಾಯವೂ ಎದುರಾಗಬಹುದು.
ಇದನ್ನೂ ಓದಿ: ಈ ಆಹಾರಗಳನ್ನು ಸೇವನೆ ಮಾಡ್ತೀರಾ? ಹಾಗಿದ್ರೆ ಫ್ಯಾಟಿ ಲಿವರ್ ಸಮಸ್ಯೆ ಬರುತ್ತೆ ಹುಷಾರ್!
ಫ್ಯಾಟಿ ಲಿವರ್ ತಡೆಗಟ್ಟಲು ಏನು ಮಾಡಬೇಕು?
ಆರೋಗ್ಯಕರ ಆಹಾರ ಪದ್ಧತಿ ಮತ್ತು ನಿಯಮಿತ ವ್ಯಾಯಾಮ ಅತ್ಯಂತ ಮುಖ್ಯ. ಹೆಚ್ಚು ಎಣ್ಣೆ, ಸಕ್ಕರೆ, ಜಂಕ್ ಫುಡ್ ಮತ್ತು ಪ್ರೊಸೆಸ್ಡ್ ಆಹಾರವನ್ನು ಕಡಿಮೆ ಮಾಡಬೇಕು. ಹಣ್ಣು, ತರಕಾರಿ, ಧಾನ್ಯಗಳು ಮತ್ತು ಪ್ರೋಟೀನ್‌ಯುಕ್ತ ಆಹಾರ ಸೇವನೆ ಮಾಡಬೇಕು. ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ತೂಕ ನಿಯಂತ್ರಣದಲ್ಲಿಡುವುದು ಅಗತ್ಯ. ಜೊತೆಗೆ ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರುವುದು ಲಿವರ್ ಆರೋಗ್ಯಕ್ಕೆ ಸಹಕಾರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ