ಕೋಲ್ಕತ್ತಾ, ಮೇ 06: ಪಶ್ಚಿಮ ಬಂಗಾಳ(West Bengal)ದ ವಿಧಾನಸಭಾ ಚುನಾವಣೆಯಲ್ಲಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತ ಸಾಧಿಸಿರುವ ಬಿಜೆಪಿ, ಈಗ ಸರ್ಕಾರ ರಚನೆಯ ಕಸರತ್ತನ್ನು ತೀವ್ರಗೊಳಿಸಿದೆ. ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ಘೋಷಿಸಿರುವಂತೆ ಮೇ 9ರಂದು ಮುಖ್ಯಮಂತ್ರಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ವಿಶೇಷವೆಂದರೆ, ಮೇ 9 ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನವಾಗಿದ್ದು, ಅಂದೇ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಲು ನಿರ್ಧರಿಸಿದೆ. ಇದು ಬಂಗಾಳದ ಸಾಂಸ್ಕೃತಿಕ ಮತ್ತು ರಾಜಕೀಯ ಅಸ್ಮಿತೆಯನ್ನು ಬೆಸೆಯುವ ಪ್ರಯತ್ನವೆಂದು ವಿಶ್ಲೇಷಿಸಲಾಗುತ್ತಿದೆ.
ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಹೆಸರು ಮುಂಚೂಣಿಯಲ್ಲಿದೆ. 2021ರಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯವರನ್ನು ಸೋಲಿಸಿದ್ದ ಸುವೇಂದು, ಈಗ ಭವಾನಿಪುರದಲ್ಲೂ ಮಮತಾ ಅವರ ವಿರುದ್ಧ 15,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ಸರ್ಕಾರ ರಚನೆಯ ಕುರಿತು ಚರ್ಚಿಸಲು ಸುವೇಂದು ಅಧಿಕಾರಿ ಮತ್ತು ಇತರ ಉನ್ನತ ನಾಯಕರು ಮಂಗಳವಾರ ನವದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಲಿದ್ದಾರೆ. ಬಿಜೆಪಿಯ ಈ ಗೆಲುವನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಬಂಗಾಳಕ್ಕೆ ಹೊಸ ಯುಗದ ಆರಂಭ ಎಂದು ಹೇಳಿದ್ದಾರೆ. ಸೇಡು ತೀರಿಸಿಕೊಳ್ಳುವ ರಾಜಕೀಯದ ಬದಲು ಅಭಿವೃದ್ಧಿ ಆಧಾರಿತ ಬದಲಾವಣೆಯತ್ತ ಗಮನ ಹರಿಸಲು ಅವರು ಕರೆ ನೀಡಿದ್ದಾರೆ.
ಮತ್ತಷ್ಟು ಓದಿ: ಸಿಎಂ ಸ್ಥಾನಕ್ಕೆ ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ದರೆ ಪಶ್ಚಿಮ ಬಂಗಾಳದಲ್ಲಿ ಏನಾಗುತ್ತದೆ?
ಮತ್ತೊಂದೆಡೆ, ಕೇವಲ 80 ಸ್ಥಾನಗಳಿಗೆ ಕುಸಿದಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 100 ಸ್ಥಾನಗಳಲ್ಲಿ ವಂಚನೆಯಿಂದ ತಮ್ಮನ್ನು ಸೋಲಿಸಲಾಗಿದೆ ಎಂದು ಅವರು ದೂರಿದ್ದಾರೆ. ಆದರೆ, ಬಿಜೆಪಿ ಈ ಆರೋಪಗಳನ್ನು ಅಲ್ಲಗಳೆದಿದ್ದು, ಮಮತಾ ಅವರ ರಾಜಕೀಯ ನಿವೃತ್ತಿ ಕಾಲ ಬಂದಿದೆ ಎಂದು ಸುವೇಂದು ಅಧಿಕಾರಿ ಲೇವಡಿ ಮಾಡಿದ್ದಾರೆ.
17ನೇ ವಿಧಾನಸಭೆಯ ಅವಧಿ ಮೇ 7ಕ್ಕೆ ಕೊನೆಗೊಳ್ಳಲಿದ್ದು, ಮೇ 9ರಂದು ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಬಂಗಾಳದ ಜನತೆ ನೀಡಿದ ಈ ಭರ್ಜರಿ ಜನಾದೇಶವು ಪೂರ್ವ ಭಾರತದಲ್ಲಿ ಬಿಜೆಪಿಯ ಬಲವರ್ಧನೆಗೆ ನಾಂದಿ ಹಾಡಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿ ಯಾರು ಎಂಬ ಅಧಿಕೃತ ಘೋಷಣೆ ಹೊರಬೀಳಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ