Headlines

ಬದುಕುವ ಆಸೆ ಇಲ್ಲ, ದಯಾಮರಣ ಕೊಡಿ: ಅಪಘಾತದಲ್ಲಿ 9 ಜನರನ್ನು ಕಳೆದುಕೊಂಡು, ಅಧಿಕಾರಿಗಳ ಕಿರುಕುಳಕ್ಕೆ ಬೆಂದ ವೃದ್ಧ ದಂಪತಿಯ ಕಣ್ಣೀರು – Kannada News | Elderly Couple’s Euthanasia Plea: Harassment After Family Loss Shocks Gujarat

ಸೂರತ್, ಜೂನ್ 23:ನಮಗೆ ಇನ್ನು ಬದುಕುವ ಆಸೆ ಉಳಿದಿಲ್ಲ, ನ್ಯಾಯ ಸಿಗದಿದ್ದರೆ ಸಾವು ಮಾತ್ರ ನಮಗೆ ಏಕೈಕ ದಾರಿ, ನಮಗೆ ದಯಾಮರಣ(Euthanasia )ಕ್ಕೆ ಅನುಮತಿ ಕೊಡಿ ಎಂದು ಗುಜರಾತ್​ನ ಸೂರತ್ ನಗರದ ನಿವಾಸಿ ಶ್ಯಾಮ್​ಭಾಯಿ ಗೆಹ್ಲೋಟ್ ಮತ್ತು ಅವರ ಪತ್ನಿ ಮಧುಬೆನ್ ಜಿಲ್ಲಾಧಿಕಾರಿಗೆ ಪತ್ರ ಬರೆದು ಕಣ್ಣೀರು ಹಾಕಿದ್ದಾರೆ. ಸ್ಥಳೀಯ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ತಮಗೆ ಕಳೆದ ಐದು ವರ್ಷಗಳಿಂದ ತೀವ್ರ ಆರ್ಥಿಕ, ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವೃದ್ಧ ದಂಪತಿ ಆರೋಪಿಸಿದ್ದಾರೆ.

ಒಂದೇ ಕುಟುಂಬದ 9 ಜನರ ಸಾವು, ವೃದ್ಧ ದಂಪತಿ ಒಂಟಿ
ಈ ದಂಪತಿ ಬದುಕು ಮೊದಲೇ ದುರಂತದಿಂದ ಕೂಡಿತ್ತು. ನವೆಂಬರ್ 7, 2016 ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇವರ ಏಕೈಕ ಮಗ, ಸೊಸೆ, ಮೊಮ್ಮಕ್ಕಳು, ಮಗಳು, ಅಳಿಯ ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಸದಸ್ಯರು ಸಾವನ್ನಪ್ಪಿದ್ದರು. ಅಂದಿನಿಂದ ಈ ವೃದ್ಧ ದಂಪತಿಗೆ ಜಗತ್ತಿನಲ್ಲಿ ಯಾರು ಇಲ್ಲದೆ, ಒಬ್ಬರನ್ನೊಬ್ಬರು ಆಸರೆ ಮಾಡಿಕೊಂಡು ಬದುಕುತ್ತಿದ್ದಾರೆ. ಬದುಕಿನ ಆಧಾರಕ್ಕಾಗಿ ಸಣ್ಣ ಅಂಗಡಿಗಳನ್ನು ನಂಬಿಕೊಂಡಿದ್ದರು.

ಅಂಗಡಿಗಳಿಗೆ ಬೀಗ: ದಂಪತಿ 2006 ರಲ್ಲಿ ಖರೀದಿಸಿದ್ದ 11 ಸಣ್ಣ ಅಂಗಡಿಗಳಿಗೆ 2021 ರಲ್ಲಿ ಮುನ್ಸಿಪಲ್ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೆ ಬೀಗ (ಸೀಲ್) ಹಾಕಿದ್ದರು. ಇದರ ವಿರುದ್ಧ ವೃದ್ಧ ದಂಪತಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿ ಭೀಕರ ಕಾನೂನು ಹೋರಾಟ ನಡೆಸಿದರು. ಅಗ್ನಿಶಾಮಕ ಇಲಾಖೆಯ ಅನುಕೂಲಕರ ವರದಿಯ ನಂತರ, ಇದೇ ವರ್ಷ ಜನವರಿ 31 ರಂದು ಅವರ ಅಂಗಡಿಗಳನ್ನು ಮತ್ತೆ ತೆರೆಯಲಾಯಿತು.

ಮತ್ತಷ್ಟು ಓದಿ: ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ: ಕಾರಣ ಇಲ್ಲಿದೆ

ಆದರೆ ಕೋರ್ಟ್‌ನಲ್ಲಿ ದಂಪತಿ ಗೆದ್ದ ಕೆಲವೇ ದಿನಗಳಲ್ಲಿ, ಅಂದರೆ ಮೇ 30 ರಂದು ಮುನ್ಸಿಪಲ್ ಇಂಜಿನಿಯರ್ ಸೂಚನೆಯ ಮೇರೆಗೆ ಯಾವುದೇ ಲಿಖಿತ ನೋಟಿಸ್ ನೀಡದೆ ಅಂಗಡಿಗಳಿಗೆ ಮತ್ತೆ ಬೀಗ ಜಡಿಯಲಾಗಿದೆ. ಸ್ಥಳೀಯ ನಾಯಕರನ್ನು ಭೇಟಿಯಾಗುವಂತೆ ಅಧಿಕಾರಿಗಳು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ನಮ್ಮ ಅಂಗಡಿಗಳನ್ನು ಕಿತ್ತುಕೊಂಡು, ಆಸ್ತಿಯನ್ನು ತಮ್ಮ ವಶಕ್ಕೆ ಪಡೆಯಲು ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿ ಸಂಚು ರೂಪಿಸಿದ್ದಾರೆ ಎಂದು ಶ್ಯಾಮ್‌ಭಾಯಿ ಗೆಹ್ಲೋಟ್ ಆರೋಪಿಸಿದ್ದಾರೆ. ಅಂಗಡಿಗೆ ಸೀಲ್ ಹಾಕಲು ಯಾವುದೇ ಅಧಿಕೃತ ಕಾರಣವನ್ನು ಮಹಾನಗರ ಪಾಲಿಕೆ ನೀಡುತ್ತಿಲ್ಲ ಎಂದು ಅವರು ದೂರಿದ್ದಾರೆ.

ದುಡಿಯುವ ಮಾರ್ಗವಿಲ್ಲದೆ, ಆರ್ಥಿಕವಾಗಿ ಸಂಪೂರ್ಣವಾಗಿ ಸಂಕಷ್ಟ ಎದುರಿಸುತ್ತಿರುವ ಈ ವೃದ್ಧ ದಂಪತಿ, ಅಧಿಕಾರಿಗಳ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವಾಗದೆ ಜಿಲ್ಲಾಧಿಕಾರಿಗೆ ಪತ್ರ ಬರೆದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಘಟನೆ ಸದ್ಯ ಇಡೀ ಗುಜರಾತ್‌ನಲ್ಲಿ ಭಾರಿ ಸಂಚಲನ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *