ಕೊಪ್ಪಳ, ಜೂನ್ 26: ಮೂರು ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್ಗಳನ್ನು ನಿನ್ನೆಯಷ್ಟೇ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ ಲೋಕಾರ್ಪಣೆ ಗೊಳಿಸಿದ್ದರು. ಈ ವಿಚಾರ ಇದೇ ಡ್ಯಾಂನ ನೀರು ನಂಬಿಕೊಂಡಿದ್ದ ಲಕ್ಷಾಂತರ ಮಂದಿಯ ಸಂತಸಕ್ಕೆ ಕಾರಣವಾಗಿತ್ತು. ಆದರೆ ಈ ಸಂತಸದ ನಡುವೆಯೇ ಆತಂಕ ಪಡಬೇಕಾದ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ 41 ಟಿಎಂಸಿ ನೀರು ಜಲಾಶಯದಲ್ಲಿ ಕಡಿಮೆಯಾಗಿರೋದು, ಮುಂದೇನೆಂಬ ಪ್ರಶ್ನೆ ಹುಟ್ಟುಹಾಕಿದೆ.
ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 50 ಟಿಎಂಸಿ ನೀರಿತ್ತು. ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವ ಕಾರಣಕ್ಕೆ ಡ್ಯಾಂನಲ್ಲಿ ಸದ್ಯ ಲಭ್ಯವಿರೋದು ಕೇವಲ 9 ಟಿಎಂಸಿ ನೀರು ಮಾತ್ರ. ಆದರೆ ಇದೇ ನೀರನ್ನು ನಂಬಿಕೊಂಡು ಕರ್ನಾಟಕದ ವಿಜಯನಗರ, ಬಳ್ಳಾರಿ,ಕೊಪ್ಪಳ, ರಾಯಚೂರು ಜನರಿದ್ದಾರೆ. ಸಾಲದಕ್ಕೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ಕೂಡ ಇದರ ಮೇಲೆ ಅವಲಂಬಿತವಾಗಿವೆ. ಹೀಗಾಗಿ ಭವಿಷ್ಯದ ಆತಂಕ ತಲೆದೋರಿದ್ದು, ಕುಡಿಯುವ ನೀರಿಗೂ ಪರದಾಡಬೇಕಾದ ಸ್ಥಿತಿ ಬಂದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ: CM ಆಗಿ ಎಲ್ಲಾ 33 ಕ್ರಸ್ಟ್ ಗೇಟ್ ಚೇಂಜ್ ಮಾಡಿ ಉದ್ಘಾಟಿಸಿದ್ದು ನನ್ನ ಭಾಗ್ಯ ಎಂದ ಡಿಕೆಶಿ
ಕೃಷಿಕರು ಕಂಗಾಲು
ಲಕ್ಷಾಂತರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗಳಿಗೆ ನೀರುಣಿಸೋದು ಕೂಡ ಇದೇ ಜಲಾಶಯದ ನೀರು. ಬಿತ್ತನೆ ಕಾರ್ಯ ಆರಂಭಿಸಬೇಕಾದ ಈ ಸಂದರ್ಭದಲ್ಲಿ ಬೆಳೆಗೆ ನೀರು ಸಿಗುತ್ತಾ? ಇಲ್ಲವಾ? ಎಂಬ ಗೊಂದಲದಲ್ಲಿ ಅನ್ನದಾತರಿದ್ದು, ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಕಾರಣ ಕೇವಲ ಜಲಾಶಯದ ನೀರಿನ ಅವಲಂಬನೆಯೇ ರೈತರಿಗಿರುವ ಏಕೈಕ ಆಯ್ಕೆಯಾಗಿದೆ. ಹೀಗಾಗಿ ತಕ್ಷಣವೇ ಬರ ಘೋಷಣೆ ಮಾಡಿ ಎಂಬ ಆಗ್ರಹವೂ ಕೇಳಿಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.