ಫಿಫಾ ವಿಶ್ವಕಪ್ 2026ರ ಟೂರ್ನಿಯಲ್ಲಿ ಆಫ್ರಿಕಾದ ಪುಟ್ಟ ದ್ವೀಪ ರಾಷ್ಟ್ರ ಕೇಪ್ ವರ್ಡೆ (Cape Verde) ತನ್ನ ಅಸಾಧಾರಣ ಪ್ರದರ್ಶನವನ್ನು ಮುಂದುವರಿಸಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಸ್ಪೇನ್ ವಿರುದ್ಧ 0-0 ಅಂತರದಿಂದ ಡ್ರಾ ಸಾಧಿಸಿದ್ದ ಕೇಪ್ ವರ್ಡೆ ಇದೀಗ ಉರುಗ್ವೆ ತಂಡದ ಪಾಲಿಗೂ ಕಂಟಕವಾಗಿ ಪರಿಣಮಿಸಿದ್ದಾರೆ.
ಅಮೆರಿಕದ ಫ್ಲೋರಿಡಾದಲ್ಲಿರುವ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಆರಂಭದಿಂದಲೇ ಉರುಗ್ವೆ ತಂಡವು ಚೆಂಡಿನ ಮೇಲೆ ಶೇ. 66 ರಷ್ಟು ನಿಯಂತ್ರಣ ಸಾಧಿಸಿದ್ದರು. ಈ ನಿಯಂತ್ರಣದ ಹೊರತಾಗಿಯೂ ಕೇಪ್ ವರ್ಡೆ ತಂಡದ ರಕ್ಷಣಾ ಕೋಟೆಯನ್ನು ಭೇದಿಸಲು ಉರುಗ್ವೆ 44 ನಿಮಿಷಗಳನ್ನು ತೆಗೆದುಕೊಂಡಿದ್ದರು. ಆದರೆ ಅದಕ್ಕೂ ಮುನ್ನವೇ ಕೇಪ್ ವರ್ಡೆ ಮೊದಲ ಗೋಲು ದಾಖಲಿಸಿದ್ದರು ಎಂಬುದು ಉಲ್ಲೇಖಾರ್ಹ.
- ಪಂದ್ಯದ 21ನೇ ನಿಮಿಷದಲ್ಲಿ ಕೇಪ್ ವರ್ಡೆ ತಂಡದ ಕೆವಿನ್ ಪಿನಾ 30 ಯಾರ್ಡ್ ದೂರದಿಂದ ಅದ್ಭುತ ಲೋ-ಡ್ರಿಲ್ಡ್ ಫ್ರೀ-ಕಿಕ್ ಮೂಲಕ ಗೋಲು ಗಳಿಸಿದರು. ಇದು ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಕೇಪ್ ವರ್ಡೆ ಗಳಿಸಿದ ಮೊದಲ ಗೋಲು ಎಂಬುದು ವಿಶೇಷ.
- ಮೊದಲಾರ್ಧ ಮುಗಿಯಲು ಕೆಲವೇ ಕ್ಷಣಗಳ ಮಾತ್ರ ಬಾಕಿ ಇರುವಾಗ ಉರುಗ್ವೆ ತಂಡದ ಮ್ಯಾಕ್ಸಿಮಿಲಿಯಾನೊ ಅರಾಜೊ 44ನೇ ನಿಮಿಷದಲ್ಲಿ ಹೆಡರ್ ಮೂಲಕ ಗೋಲು ಬಾರಿಸಿ ಸಮಬಲ ತಂದರು.
- ಇದರ ಬೆನ್ನಲ್ಲೇ, ಅಂದರೆ ಇಂಜುರಿ ಟೈಮ್ನಲ್ಲಿ (45+2′ ನಿಮಿಷ) ಅರಾಜೊ ನೀಡಿದ ಪಾಸ್ ನೆರವಿನಿಂದ ಆಗಸ್ಟಿನ್ ಕ್ಯಾನೊಬಿಯೊ ಮತ್ತೊಂದು ಗೋಲು ಗಳಿಸಿ ಉರುಗ್ವೆಗೆ 2-1 ಮುನ್ನಡೆ ತಂದುಕೊಟ್ಟರು.
ಮೊದಲ 44 ನಿಮಿಷಗಳ ಕಾಲ ಕೇಪ್ ವರ್ಡೆ ರಕ್ಷಣಾ ಕೋಟೆಯನ್ನು ಭೇದಿಸಲು ಬೆವರಿಳಿಸಿದ್ದ ಉರುಗ್ವೆ ತಂಡವು ಆ ಬಳಿಕ ಬ್ಯಾಕ್ ಟು ಬ್ಯಾಕ್ ಗೋಲು ಗಳಿಸಿ ಮೊದಲಾರ್ಧದಲ್ಲಿ ಮುನ್ನಡೆ ಕಾಯ್ದುಕೊಂಡರು. ಹೀಗಾಗಿ ಈ ಪಂದ್ಯವನ್ನು ಉರುಗ್ವೆ ತಂಡ ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ದ್ವಿತೀಯಾರ್ಧದಲ್ಲೂ ಸಾಂಘಿಕ ಹೋರಾಟ ಪ್ರದರ್ಶಿಸಿದ ಕೇಪ್ ವರ್ಡೆ 61ನೇ ನಿಮಿಷದಲ್ಲಿ ತಿರುಗೇಟು ನೀಡಿತು.
- ಉರುಗ್ವೆ ಡಿಫೆಂಡರ್ ಮಥಿಯಾಸ್ ಒಲಿವೆರಾ ಮತ್ತು ಗೋಲ್ಕೀಪರ್ ಫೆರ್ನಾಂಡೊ ಮುಸ್ಲೆರಾ ನಡುವಿನ ಸಂವಹನ ಕೊರತೆಯ ಲಾಭ ಪಡೆದ ಕೇಪ್ ವರ್ಡೆಯ ಹೆಲಿಯೊ ವರೆಲಾ ಗೋಲ್ ಪೋಸ್ಟ್ಗೆ ಚೆಂಡನ್ನು ತಳ್ಳಿ 2-2 ಗೋಲುಗಳ ಸಮಬಲ ತಂದರು.
ಗೋಲುಗಳು ಸಮಬಲಗೊಳ್ಳುತ್ತಿದ್ದಂತೆ ಕೇಪ್ ವರ್ಡೆ ಮತ್ತೊಮ್ಮೆ ತನ್ನ ರಕ್ಷಣಾ ಕೋಟೆಯನ್ನು ಭದ್ರಪಡಿಸಿಕೊಂಡಿತು. ಉರುಗ್ವೆ ತಂಡವು ಸತತವಾಗಿ ಅಟ್ಯಾಕ್ ಮಾಡಿದರೂ, ಕೇಪ್ ವರ್ಡೆಯ ಡಿಫೆಂಡರ್ಗಳು ಪಟ್ಟು ಬಿಡದೇ ಹೋರಾಡಿದ್ದು ವಿಶೇಷವಾಗಿತ್ತು.
ಅಂತಿಮವಾಗಿ ಕೇಪ್ ವರ್ಡೆ ಕೆಚ್ಚೆದೆಯ ಹೋರಾಟದ ಮುಂದೆ ಉರುಗ್ವೆ ತಂಡ ಶರಣಾಗಬೇಕಾಯಿತು. ಇದರೊಂದಿಗೆ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು. ಈ ಸಮಬಲದೊಂದಿಗೆ ಕೇಪ್ ವರ್ಡೆ ಗ್ರೂಪ್ ‘H’ ಅಂಕಪಟ್ಟಿಯಲ್ಲಿ 2 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಬಲಿಷ್ಠ ಸ್ಪೇನ್ ವಿರುದ್ಧ ಸೆಟೆದು ನಿಂತ ಕೇಪ್ ವರ್ಡೆ..!
ಒಂದು ವೇಳೆ ಜೂನ್ 26 ರಂದು ಸೌದಿ ಅರೇಬಿಯಾ ವಿರುದ್ಧ ಪಂದ್ಯದಲ್ಲಿ ಕೇಪ್ ವರ್ಡೆ ಜಯ ಸಾಧಿಸಿದರೆ ನೇರವಾಗಿ ಐತಿಹಾಸಿಕ ‘ರೌಂಡ್ ಆಫ್ 32’ ಹಂತಕ್ಕೆ ಅರ್ಹತೆ ಪಡೆಯಲಿದೆ. ಹೀಗಾಗಿ ಜೂನ್ 26 ರಂದು ಕೇಪ್ ವರ್ಡೆ ಕಡೆಯಿಂದ ಮತ್ತಷ್ಟು ರೋಚಕ ಪಂದ್ಯಾಟವನ್ನು ನಿರೀಕ್ಷಿಸಬಹುದು.
Published On – 8:52 am, Mon, 22 June 26