Headlines

ಬಹು ನಿರೀಕ್ಷಿತ ಧಾರವಾಡ-ಬೆಳಗಾವಿ ರೈಲು ಮಾರ್ಗಕ್ಕೆ ಸ್ಥಳೀಯರ ತೀವ್ರ ವಿರೋಧ: ಕಾರಣ ಇಲ್ಲಿದೆ

ಬಹು ನಿರೀಕ್ಷಿತ ಧಾರವಾಡ-ಬೆಳಗಾವಿ ರೈಲು ಮಾರ್ಗಕ್ಕೆ ಸ್ಥಳೀಯರ ತೀವ್ರ ವಿರೋಧ: ಕಾರಣ ಇಲ್ಲಿದೆ

ಧಾರವಾಡ, ಏಪ್ರಿಲ್​​ 08: ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಧಾರವಾಡ-ಬೆಳಗಾವಿ ನಡುವಿನ ರೈಲು ಮಾರ್ಗ ನಿರ್ಮಾಣಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನೂತನ ರೈಲು ಮಾರ್ಗದ ನೀಲ ನಕ್ಷೆಯ ಆಧಾರದಲ್ಲಿ ಸರ್ಕಾರದ ಹಾಗೂ ಖಾಸಗಿಯವರ ನೂರಾರು ಕಟ್ಟಡಗಳು ಕಾಮಗಾರಿ ಕಾರಣಕ್ಕೆ ನೆಲಸಮವಾಗಲಿದ್ದು, ಕೃಷಿ ಭೂಮಿಯೂ ರೈತರ ಕೈತಪ್ಪುವ ಆತಂಕ ಎದುರಾಗಿದೆ. ಹೀಗಾಗಿ ರೈಲು ಮಾರ್ಗ ಬದಲಾವಣೆ ಮಾಡುವಂತೆ ಆಗ್ರಹ ಕೇಳಿಬಂದಿದೆ.

ಕೈಗಾರಿಕಾ ಪ್ರದೇಶಕ್ಕಾಗಿ ಈಗಾಗಲೇ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ, ಬೇಲೂರು, ಚಿಕ್ಕಮಲ್ಲಿಗವಾಡ ಗ್ರಾಮಸ್ಥರು ತಮ್ಮೆಲ್ಲ ಭೂಮಿಯನ್ನು ಕಳೆದುಕೊಂಡಿದ್ದಾರೆ. ಹೀಗಿರುವಾಗ ಪ್ರಸ್ತುತ ಸಿದ್ಧವಾಗಿರುವ ನೀಲ ನಕ್ಷೆಯ ಅನ್ವಯ ಧಾರವಾಡ-ಬೆಳಗಾವಿ ನಡುವಿನ ರೈಲು ಮಾರ್ಗ ನಿರ್ಮಾಣ ಆಗಿದ್ದೇ ಆದಲ್ಲಿ, ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಕೇಂದ್ರೀಯ ಉಗ್ರಾಣದ ನೂತನ ಕಟ್ಟಡ ಸೇರಿದಂತೆ ಮತ್ತಿತರ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕಟ್ಟಡಗಳು‌ ನೆಲಸಮವಾಗಲಿವೆ. ಅಲ್ಲದೆ ಈ ರೈಲು ಮಾರ್ಗ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ 50 ಮೀಟರ್ ಪಕ್ಕದಲ್ಲೇ ಹಾದು ಹೋಗಲಿರುವ ಕಾರಣ, ಭವಿಷ್ಯದಲ್ಲಿ ಹೆದ್ದಾರಿಯನ್ನು ಮತ್ತಷ್ಟು ವಿಸ್ತರಣೆ ಮಾಡಲು ಕೂಡ ಈ ಯೋಜನೆಯಿಂದ ಹಿನ್ನಡೆಯಾಗಲಿದೆ ಎಂಬುದು ಸ್ಥಳೀಯರ ವಾದ.

ಇದನ್ನೂ ಓದಿ: ಕೈದಿಗಳ ಕಳ್ಳಾಟಕ್ಕಿಲ್ಲ ಬ್ರೇಕ್​; ಪರಪ್ಪನ ಅಗ್ರಹಾರದ ಬಳಿಕ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿಯೂ ಮೊಬೈಲ್​​ಗಳು ಪತ್ತೆ

ಧಾರವಾಡ-ಬೆಳಗಾವಿ ಮಧ್ಯೆ ಒಟ್ಟು 73 ಕಿ.ಮೀ. ನೂತನ ರೈಲು ಮಾರ್ಗ ನಿರ್ಮಾಣವಾಗಬೇಕಿದ್ದು, ಈ ಮಾರ್ಗಕ್ಕೆ‌ ಮೊದಲು ಅಂದಾಜು 927.42 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿತ್ತಾದರೂ ಈಗ ಆ ಮೊತ್ತ 2,509 ಕೋಟಿಗೆ ಹೆಚ್ಚಿದೆ ಎನ್ನಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 225 ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 602 ಎಕರೆ ಜಮೀನು ಈ ಮಾರ್ಗದ ನಿರ್ಮಾಣಕ್ಕೆ ಅಗತ್ಯವಿದ್ದು, ಸಣ್ಣ ರೈತರ ಜಮೀನಿನ ಮೂಲಕ ಈ ಮಾರ್ಗವೇನಾದರೂ ಹಾದು ಹೋದರೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಉಳಿಯುವ ತುಂಡು ಜಮೀನಿನಲ್ಲಿ ಕೃಷಿ ಮಾಡಲಾಗದಿರೋದು ಒಂದೆಡೆಯಾದರೆ, ಮಾರೋಣ ಎಂದರೆ ಜಾಗದ ಮೌಲ್ಯವೂ ಕಡಿಮೆಯಾಗಬಹುದೆಂಬ ಆತಂಕ ಕಾಡತೊಡಗಿದೆ.

ಇನ್ನು ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಈ ಮಾರ್ಗ ನಿರ್ಮಾಣವಾಗಿ ಸಾರ್ವಜನಿಕರಿಗೆ ಸೇವೆ ಲಭ್ಯವಾಗಬೇಕಿತ್ತು. ಆದರೆ ರಾಜ್ಯ ಸರಕಾರ ತನ್ನ ಪಾಲಿನ ಜವಾಬ್ದಾರಿಯಾಗಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಿಸದ ಕಾರಣ ಕಾಮಗಾರಿ ವಿಳಂಬವಾಗಿದೆ. ಈ ನಡುವೆ ಮಾರ್ಗ ನಿರ್ಮಾಣಕ್ಕೆ ಸ್ಥಳೀಯರ ವಿರೋಧವೂ ಕೇಳಿಬಂದಿರುವ ಕಾರಣ ಯೋಜನೆಗೆ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *