Headlines

ಬಾಗಲಕೋಟೆ: ಭಾರಿ ಮಳೆಗೆ ಜಮಖಂಡಿ ತರಕಾರಿ ಮಾರುಕಟ್ಟೆ ಜಲಾವೃತ – Kannada News | Bagalkot Rain Fury: Heavy Rains Flood Gotay Vegetable Market in Jamkhandi; Trees Uprooted on Vijayapura

ಬಾಗಲಕೋಟೆ, ಜೂನ್ 15: ಬಾಗಲಕೋಟೆ ಜಿಲ್ಲೆಯಾದ್ಯಂತ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದ್ದು, ಜಮಖಂಡಿ ತಾಲೂಕಿನ ಹಲವೆಡೆ ಭಾರಿ ಮಳೆಯಿಂದಾಗಿ ವ್ಯಾಪಕ ಅವಾಂತರಗಳು ಸೃಷ್ಟಿಯಾಗಿವೆ. ಜಮಖಂಡಿ ತಾಲೂಕಿನ ಗೋಟೆ ಗ್ರಾಮದ ಸಾಪ್ತಾಹಿಕ ಸಂತೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ತರಕಾರಿ ಮಾರುಕಟ್ಟೆ ಸಂಪೂರ್ಣ ಜಲಾವೃತಗೊಂಡಿತು. ಮಾರುಕಟ್ಟೆಯ ಮೈದಾನದಲ್ಲೆಲ್ಲಾ ಮಂಡಿಯುದ್ದ ನೀರು ನಿಂತಿದ್ದರಿಂದ ತರಕಾರಿ ಬುಟ್ಟಿಗಳು ಹಾಗೂ ಕ್ರೇಟ್‌ಗಳು ನೀರಿನಲ್ಲಿ ಮುಳುಗಡೆಯಾದವು. ಹಠಾತ್ ಮಳೆಯಿಂದ ಕಂಗಾಲಾದ ವ್ಯಾಪಾರಿಗಳು ತಮಗಾಗುವ ಭಾರಿ ನಷ್ಟವನ್ನು ತಪ್ಪಿಸಲು ಟೊಮೆಟೊ, ಹಸಿರು ಸೊಪ್ಪು ಹಾಗೂ ಇತರೆ ತರಕಾರಿಗಳನ್ನು ನೀರಿನಿಂದ ರಕ್ಷಿಸಲು ಹರಸಾಹಸ ಪಟ್ಟರು. ಅದರಲ್ಲೂ ವಿಶೇಷವಾಗಿ ಮಹಿಳಾ ವ್ಯಾಪಾರಿಗಳು ಮಳೆಯಲ್ಲೇ ನೆನೆಯುತ್ತಾ ತರಕಾರಿ ಬುಟ್ಟಿಗಳನ್ನು ಎತ್ತರದ ಸ್ಥಳಗಳಿಗೆ ಸಾಗಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಹಳದಿ ಟಾರ್ಪಲ್‌ಗಳನ್ನು ಮುಚ್ಚಿ ತರಕಾರಿಗಳನ್ನು ರಕ್ಷಿಸಲು ವ್ಯಾಪಾರಿಗಳು ಯತ್ನಿಸಿದರಾದರೂ, ಬಹುತೇಕ ತರಕಾರಿಗಳು ಕೊಳೆತು ಹೋಗುವ ಸ್ಥಿತಿ ತಲುಪಿರುವುದರಿಂದ ಸಣ್ಣ ವ್ಯಾಪಾರಿಗಳು ಕಣ್ಣೀರು ಹಾಕುವಂತಾಗಿದೆ.

ಇದೇ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಬಳಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಬೃಹತ್ ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿವೆ. ಜಮಖಂಡಿ-ವಿಜಯಪುರ ಮುಖ್ಯ ರಸ್ತೆಯಲ್ಲೇ ಈ ಘಟನೆ ಸಂಭವಿಸಿದ್ದರಿಂದ ರಸ್ತೆಯ ಎರಡೂ ಬದಿಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು, ಸಾರ್ವಜನಿಕರು ಹಾಗೂ ಪ್ರಯಾಣಿಕರು ತೀವ್ರ ಪರದಾಡುವಂತಾಯಿತು. ಸದ್ಯ ಜಮಖಂಡಿ-ವಿಜಯಪುರ ರಸ್ತೆಯಲ್ಲಿ ವಾಹನ ಸಂಚಾರ ಯಥಾಸ್ಥಿತಿಗೆ ಮರಳಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *