
ಬಾಬರ್ ಆಝಂ (Babar Azam).. ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕ್ರಿಕೆಟಿಗ. ನಾಯಕನಾಗಿ ತಂಡವನ್ನು ಅನೇಕ ಗೆಲುವಿನತ್ತ ಮುನ್ನಡೆಸಿದ ಮತ್ತು ಆಟಗಾರನಾಗಿಯೂ ಹಲವು ಸ್ಮರಣೀಯ ಇನ್ನಿಂಗ್ಸ್ಗಳನ್ನು ಆಡಿದ್ದ ಹೆಗ್ಗಳಿಕೆಗೆ ಬಾಬರ್ ಅರ್ಹರು. ಆದರೆ ಕಳೆದೊಂದು ವರ್ಷದಿಂದ ಬಾಬರ್ ಅವರ ಪ್ರದರ್ಶನ ತೀರ ಕಳಪೆಯಾಗಿದೆ. ಮುಂಚೆ ರನ್ ಮಳೆ ಹರಿಸುತ್ತಿದ್ದ ಬಾಬರ್ ಇದೀಗ ರನ್ ಬರ ಎದುರಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಇತ್ತಿಚಿಗಷ್ಟೆ ಮುಗಿದ ಟಿ20 ವಿಶ್ವಕಪ್ನಲ್ಲೂ (T20 World Cup) ಬಾಬರ್ ಬ್ಯಾಟ್ ಮೌನವಾಗಿತ್ತು. ಹೀಗಾಗಿ ಬಾಬರ್ ಅವರ ಕಳಪೆ ಫಾರ್ಮ್ ತಜ್ಞರು ಮತ್ತು ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿತ್ತು. ಹೆಚ್ಚಿನವರು ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರಶ್ನಿಸಿದ್ದರೆ, ಪಾಕ್ ತಂಡದ ಮಾಜಿ ಕ್ರಿಕೆಟಿಗ ಬಸಿತ್ ಅಲಿ (Basit Ali), ಬಾಬರ್ ಮಾನಸಿಕವಾಗಿ ಅನರ್ಹ ಎಂದು ಜರಿದಿದ್ದಾರೆ.
ಏಕದಿನ ಸರಣಿಯಿಂದ ಬಾಬರ್ ಔಟ್
ವಾಸ್ತವವಾಗಿ ಟಿ20 ವಿಶ್ವಕಪ್ ಬಳಿಕ ಪಾಕಿಸ್ತಾನ ತಂಡ ಏಕದಿನ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಿದೆ. ಈ ಪ್ರವಾಸಕ್ಕೆ ಬಾಬರ್ ಆಝಂ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ. ಆದರೆ ಏಕದಿನ ಸರಣಿಯಲ್ಲಿ ಬಾಬರ್ ಅವರ ಪ್ರದರ್ಶನ ಉತ್ತಮವಾಗಿದ್ದರೂ ಅವರನ್ನು ತಂಡದಿಂದ ಕೈಬಿಟ್ಟಿದ್ದು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನ ತಂಡದ ಆಯ್ಕೆದಾರ ಆಕಿಬ್ ಜಾವೇದ್ ಅವರ ಬಳಿ ಈ ಬಗ್ಗೆ ಪ್ರಶ್ನೆ ಕೇಳಿದಾಗ, ‘ಬಾಬರ್ ಶ್ರೀಲಂಕಾದಿಂದ ಹಿಂದಿರುಗಿದ ನಂತರ ಗಾಯಕ್ಕೆ ತುತ್ತಾಗಿದ್ದಾರೆ. ಅದಕ್ಕಾಗಿಯೇ ಅವರಿಗೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ ಎಂದಿದ್ದರು.
ಬಾಬರ್ ಮಾನಸಿಕವಾಗಿ ಅನರ್ಹ
ಆದರೆ ಆಕಿಬ್ ಜಾವೇದ್ ಅವರ ಈ ಹೇಳಿಕೆಯನ್ನು ಅಲ್ಲಗಳೆದಿರುವ ಪಾಕಿಸ್ತಾನದ ಮಾಜಿ ಬ್ಯಾಟ್ಸ್ಮನ್ ಬಸಿತ್ ಅಲಿ, ಬಾಬರ್ ಆಝಂ ಗಾಯಗೊಂಡಿಲ್ಲ, ಬದಲಿಗೆ, ಸಮಸ್ಯೆ ಅವರ ಮನಸ್ಥಿತಿಯಲ್ಲಿದೆ ಎಂದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಬಗ್ಗೆ ಮಾತನಾಡಿರುವ ಬಸಿತ್, ‘ಬಾಬರ್ ಆಝಂ ದೈಹಿಕವಾಗಿ ಅಲ್ಲ, ಮಾನಸಿಕವಾಗಿ ಅನರ್ಹರು. ಹೀಗಾಗಿ ಬಾಂಗ್ಲಾದೇಶ ಪ್ರವಾಸಕ್ಕೆ ಬಾಬರ್ ಅವರನ್ನು ಆಯ್ಕೆ ಮಾಡದಿರುವುದು ಸರಿಯಾಗಿದೆ, ಏಕೆಂದರೆ ಅವರು ಈ ಸರಣಿಯಲ್ಲೂ ವಿಫಲರಾಗುತ್ತಿದ್ದರು’ ಎಂದಿದ್ದಾರೆ.
T20 World Cup: ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಿಂದ ಬಾಬರ್ ಆಝಂ ಔಟ್
ಸತತ 4ನೇ ಟೂರ್ನಿಯಲ್ಲೂ ಬಾಬರ್ ವೈಫಲ್ಯ
2026 ರ ವಿಶ್ವಕಪ್ ಬಾಬರ್ಗೆ ಉತ್ತಮವಾಗಿರಲಿಲ್ಲ. ಟೂರ್ನಿಯಲ್ಲಿ ಆರು ಇನ್ನಿಂಗ್ಸ್ಗಳನ್ನು ಆಡಿದ ಬಾಬರ್ ಕೇವಲ 91 ರನ್ ಮಾತ್ರ ಕಲೆಹಾಕಿದರು. ಇದರಲ್ಲಿ ಅವರ ಗರಿಷ್ಠ ಸ್ಕೋರ್ 46. ವಾಸ್ತವವಾಗಿ ಬಾಬರ್ ಐಸಿಸಿ ಟೂರ್ನಮೆಂಟ್ನಲ್ಲಿ ವಿಫಲರಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, 2025 ರ ಚಾಂಪಿಯನ್ಸ್ ಟ್ರೋಫಿ, 2024 ರ ಟಿ20 ವಿಶ್ವಕಪ್ ಮತ್ತು ಅದಕ್ಕೂ ಮೊದಲು ನಡೆದಿದ್ದ 2023 ರ ಏಕದಿನ ವಿಶ್ವಕಪ್ನಲ್ಲಿ ಬಾಬರ್ ಅವರ ಬ್ಯಾಟ್ ಮೌನವಾಗಿತ್ತು ಮತ್ತು ಈ ಎಲ್ಲಾ ಟೂರ್ನಿಗಳಲ್ಲಿ, ಪಾಕಿಸ್ತಾನ ತಂಡವು ಸೆಮಿಫೈನಲ್ ತಲುಪಲು ಸಹ ವಿಫಲವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ