ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಮತ್ತೊಮ್ಮೆ ತಮ್ಮ ನೇರ ನುಡಿಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ‘ಡಾನ್ 3’ ವಿವಾದಕ್ಕೆ ಸಂಬಂಧಿಸಿದಂತೆ ನಟ ರಣವೀರ್ ಸಿಂಗ್ (Ranveer Singh) ಅವರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕಂಗನಾ ಆಕ್ರೋಶ ಹೊರಹಾಕಿದ್ದಾರೆ. ‘ಚಿತ್ರರಂಗದ ಕೆಲವರಿಗೆ ಪಾಕಿಸ್ತಾನದ ಮೇಲೆ ಅತಿಯಾದ ಪ್ರೇಮವಿದೆ, ಅದಕ್ಕಾಗಿಯೇ ದೇಶಪ್ರೇಮದ ಸಿನಿಮಾ ಮಾಡಿದವರನ್ನು ಇಲ್ಲಿ ಟಾರ್ಗೆಟ್ ಮಾಡಲಾಗುತ್ತದೆ’ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ತಿಂಗಳು ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್ 3’ ಚಿತ್ರದಿಂದ ರಣವೀರ್ ಸಿಂಗ್ ಹೊರಬಂದಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ, FWICE (ಚಲನಚಿತ್ರ ಕಾರ್ಮಿಕರ ಒಕ್ಕೂಟ) ರಣವೀರ್ ವಿರುದ್ಧ ಅಸಹಕಾರದ ನಿರ್ದೇಶನವನ್ನು ಹೊರಡಿಸಿತ್ತು. ಈ ವಿಚಾರವಾಗಿ ರಣವೀರ್ ಪರವಾಗಿ ನಿಂತಿದ್ದ ಕಂಗನಾ, ಈಗ ಅದರ ಹಿಂದಿನ ಅಸಲಿ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ, ‘ನಮ್ಮ ಚಿತ್ರರಂಗದಲ್ಲಿ ಒಂದು ವರ್ಗಕ್ಕೆ ಪಾಕಿಸ್ತಾನದ ಮೇಲೆ ವಿಶೇಷ ಪ್ರೇಮವಿದೆ. ದಶಕಗಳಿಂದ ಬಾಲಿವುಡ್ ಸಿನಿಮಾಗಳು ನಮಗೆ ಪಾಕಿಸ್ತಾನದ ಬಗ್ಗೆ ಮೃದು ಧೋರಣೆ ಹೊಂದುವುದನ್ನೇ ಕಲಿಸುತ್ತಾ ಬಂದಿವೆ. ಆದರೆ ಯಾವಾಗ ರಣವೀರ್ ಸಿಂಗ್ ನಟನೆಯ ಧುರಂಧರ್ ರೀತಿಯ ಸಿನಿಮಾಗಳು ಪಾಕಿಸ್ತಾನದ ಅಸಲಿ ಮುಖವನ್ನು ಜಗತ್ತಿಗೆ ತೋರಿಸುತ್ತವೆಯೋ, ಆಗ ಇಲ್ಲಿನ ಕೆಲವರಿಗೆ ನೋವಾಗಲು ಶುರುವಾಗುತ್ತದೆ’ ಎಂದು ಕಿಡಿಕಾರಿದ್ದಾರೆ.
ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 3000 ಕೋಟಿ ರೂಪಾಯಿಗಳಿಗೂ ಹೆಚ್ಚು ಗಳಿಕೆ ಮಾಡಿ ದಾಖಲೆ ನಿರ್ಮಿಸಿತ್ತು. ಈ ಚಿತ್ರದಲ್ಲಿ ರಣವೀರ್ ಅವರು ಭಾರತೀಯ ಗೂಡಾಚಾರಿಯಾಗಿ ಪಾಕಿಸ್ತಾನದ ಭಯೋತ್ಪಾದಕ ಜಾಲವನ್ನು ಧ್ವಂಸ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಯಶಸ್ಸಿನ ನಂತರವೇ ರಣವೀರ್ ಅವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆ ಎಂಬುದು ಕಂಗನಾ ಅವರ ವಾದ.
ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ಸಿಕ್ಕ ಬಳಿಕವೂ ನನಗೆ ಕೆಲಸ ಸಿಗಲಿಲ್ಲ: ಸತ್ಯ ತೆರೆದಿಟ್ಟ ಕಂಗನಾ ರಣಾವತ್
‘ತಾವು ಇಷ್ಟು ವರ್ಷ ಮಾಡಿಕೊಂಡು ಬಂದ ಪಾಕಿಸ್ತಾನ ಪರವಾದ ಪ್ರಚಾರಕ್ಕೆ ಬೆಲೆ ಇಲ್ಲದಂತಾಯಿತೇ ಎಂಬ ಭಯ ಅವರಲ್ಲಿ ಮೂಡಿದೆ. ಹಾಗಾಗಿಯೇ ಧುರಂಧರ್ ಸಕ್ಸಸ್ ಬೆನ್ನಲ್ಲೇ ಇಂತಹ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ’ ಎಂದು ಕಂಗನಾ ಬಾಲಿವುಡ್ನ ಒಳಸಂಚಿನ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಬಾಲಿವುಡ್ ಮಂದಿ ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.