ವಾಷಿಂಗ್ಟನ್, ಜುಲೈ 10: ಶೂನ್ಯ ಗುರುತ್ವಾಕರ್ಷಣೆ ಇರುವ, ಭೂಮಿಯಿಂದ ನೂರಾರು ಕಿಲೋಮೀಟರ್ ಎತ್ತರದಲ್ಲಿ ತೇಲುತ್ತಿರುವ ಬಾಹ್ಯಾಕಾಶ(Space) ನಿಲ್ದಾಣದಲ್ಲಿ ಪುಟ್ಟದೊಂದು ಉದ್ಯಾನ ಕಂಗೊಳಿಸುತ್ತಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳು ಯಶಸ್ವಿಯಾಗಿ ಸಸ್ಯಗಳನ್ನು ಬೆಳೆಸುತ್ತಿದ್ದು, ಈ ಮಿನಿ ಗಾರ್ಡನ್ನ ಅತ್ಯಾಕರ್ಷಕ ಟೈಮ್ಲ್ಯಾಪ್ಸ್ ವಿಡಿಯೋವನ್ನು ಯುರೋಪಿಯನ್ ಗಗನಯಾತ್ರಿ ಸೋಫಿ ಅಡೆನೊಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಾಹ್ಯಾಕಾಶ ನಿಲ್ದಾಣದ ‘ಕೊಲಂಬಸ್’ ಪ್ರಯೋಗಾಲಯದಿಂದ ಹೊರಬರುತ್ತಿರುವ ವಿಚಿತ್ರ ಗುಲಾಬಿ ಮತ್ತು ಕೆನ್ನೇರಳೆ ಬಣ್ಣದ ಬೆಳಕಿನ ರಹಸ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ.
ಏನಿದು ವೆಗ್ಗಿ ತಂತ್ರಜ್ಞಾನ? ಗುಲಾಬಿ ಬೆಳಕಿನ ರಹಸ್ಯವೇನು?
ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಸಲು ನಾಸಾ ಅಭಿವೃದ್ಧಿಪಡಿಸಿರುವ ವಿಶೇಷ ತರಕಾರಿ ಉತ್ಪಾದನಾ ವ್ಯವಸ್ಥೆಗೆ ‘ವೆಗ್ಗಿ’ ಎಂದು ಹೆಸರಿಡಲಾಗಿದೆ.
ಕೃತಕ ಸೂರ್ಯ: ಬಾಹ್ಯಾಕಾಶದಲ್ಲಿ ಭೂಮಿಯಂತೆ ನೈಸರ್ಗಿಕ ಸೂರ್ಯನ ಬೆಳಕು ಮತ್ತು ಮಣ್ಣು ಇರುವುದಿಲ್ಲ. ಹಾಗಾಗಿ, ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಮತ್ತು ಅವುಗಳ ಬೆಳವಣಿಗೆಗೆ ಸೂಕ್ತವಾದ ವಿಶಿಷ್ಟ ಬೆಳಕಿನ ತರಂಗಾಂತರವನ್ನು ಹೊರಸೂಸುವ ಎಲ್ಇಡಿ ಲೈಟ್ಗಳನ್ನು ಬಳಸಲಾಗುತ್ತದೆ. ಇದೇ ಕಾರಣಕ್ಕೆ ಈ ಬಾಹ್ಯಾಕಾಶದ ಚೇಂಬರ್ ಸದಾ ಕೆನ್ನೇರಳೆ-ಗುಲಾಬಿ ಬಣ್ಣದಲ್ಲಿ ಅದ್ಭುತವಾಗಿ ಹೊಳೆಯುತ್ತಿರುತ್ತದೆ.
ಮತ್ತಷ್ಟು ಓದಿ: ಚಂದ್ರನ ಅಂಗಳ ಸುತ್ತಿ ಭೂಮಿಗೆ ಸುರಕ್ಷಿತವಾಗಿ ವಾಪಸಾದ ನಾಸಾ ಗಗನಯಾತ್ರಿಗಳ ತಂಡ: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು
ಪ್ರಸ್ತುತ ನಡೆಯುತ್ತಿರುವ ‘ಎಕ್ಸ್ಪೆಡಿಶನ್ 74’ ಮಿಷನ್ನ ಭಾಗವಾಗಿ ಬಾಹ್ಯಾಕಾಶದಲ್ಲಿ ‘ಅಲ್ಫಾಲ್ಫಾ’ ಸಸ್ಯಗಳನ್ನು ಬೆಳೆಸುವ ‘ವೆಜ್-06’ ಪ್ರಯೋಗವನ್ನು ಕೈಗೊಳ್ಳಲಾಗಿದೆ.
ಗುರುತ್ವಾಕರ್ಷಣೆ ಇಲ್ಲದ ಜಾಗದಲ್ಲಿ ಸಸ್ಯಗಳು ಮತ್ತು ಬ್ಯಾಕ್ಟೀರಿಯಾಗಳು ಒಟ್ಟಿಗೆ ಸೇರಿ ಗಾಳಿಯಿಂದ ಸಾರಜನಕವನ್ನು ಹೀರಿ, ಅದನ್ನು ಸಸ್ಯಗಳಿಗೆ ಬೇಕಾದ ಪೋಷಕಾಂಶಗಳಾಗಿ ಹೇಗೆ ಪರಿವರ್ತಿಸುತ್ತವೆ ಎಂದು ತಿಳಿಯುವುದು.
ವಿಡಿಯೋ
Day 144, orbit 2233 — Many of you noticed the pink glow in the recent timelapses done in Columbus… That’s thanks to Veggie 🌱, the International Space Station’s vegetable production system — our little space garden! The Veggie chamber glows magenta-pink because it emits a light… pic.twitter.com/3BXa2Ze0dI
— Adenot Sophie (@Soph_astro) July 7, 2026
ಲಿಗ್ನಿನ್ ಅಧ್ಯಯನ: ಭೂಮಿಯ ಮೇಲೆ ಸಸ್ಯಗಳು ನೇರವಾಗಿ, ಗಟ್ಟಿಯಾಗಿ ನಿಲ್ಲಲು ನೆರವಾಗುವ ‘ಲಿಗ್ನಿನ್’ ಎಂಬ ದ್ರವ್ಯವು ಬಾಹ್ಯಾಕಾಶದ ಶೂನ್ಯ ಗುರುತ್ವದಲ್ಲಿ ಹೇಗೆ ಬದಲಾಗುತ್ತದೆ ಎಂದು ಸಂಶೋಧಿಸುವುದು.
ಗಗನಯಾತ್ರಿಗಳು ಈ ಸಸ್ಯಗಳಿಗೆ ನಿಯಮಿತವಾಗಿ ನೀರು ಹಾಕಿ, ಆರೈಕೆ ಮಾಡಿ ಯಶಸ್ವಿಯಾಗಿ ಕೊಯ್ಲು ಮಾಡಿದ್ದಾರೆ. ಈ ಸಸ್ಯಗಳ ಬೇರು ಮತ್ತು ಎಲೆಗಳನ್ನು ವಿಶೇಷ ಫ್ರೀಜರ್ನಲ್ಲಿ ಶೇಖರಿಸಿಡಲಾಗಿದ್ದು, ಹೆಚ್ಚಿನ ಸಂಶೋಧನೆಗಾಗಿ ಇತ್ತೀಚೆಗೆ ‘ಸ್ಪೇಸ್ಎಕ್ಸ್ ಡ್ರ್ಯಾಗನ್’ ನೌಕೆಯ ಮೂಲಕ ಭೂಮಿಗೆ ಕಳುಹಿಸಿಕೊಡಲಾಗಿದೆ.
ಬಾಹ್ಯಾಕಾಶದಲ್ಲಿ ಇದು ನಮ್ಮ ಮನೆ: ಗಗನಯಾತ್ರಿ ಭಾವುಕ ನುಡಿ
ಬಾಹ್ಯಾಕಾಶದಲ್ಲಿ ಗಿಡಗಳ ಆರೈಕೆ ಮಾಡುವುದು ಕೇವಲ ವಿಜ್ಞಾನವಲ್ಲ, ಅದೊಂದು ಭಾವನಾತ್ಮಕ ಅನುಭವ ಎನ್ನುತ್ತಾರೆ ಸೋಫಿ ಅಡೆನೊಟ್.ಯಾಂತ್ರಿಕವಾಗಿ ಜಗತ್ತಿನಿಂದ ದೂರವಿರುವ ನಮಗೆ, ಈ ಪುಟ್ಟ ತೋಟವು ನಮ್ಮ ಭೂಮಿಯ ಮನೆ ಮತ್ತು ಅದರ ಮಣ್ಣಿನ ಸುವಾಸನೆಯನ್ನು ನೆನಪಿಸುತ್ತದೆ. ದಿನದಿನಕ್ಕೂ ಗಿಡಗಳು ಬೆಳೆಯುವುದನ್ನು ನೋಡುವುದರಲ್ಲಿ ಒಂದು ವಿಶೇಷ ಸಮಾಧಾನವಿದೆ ಎಂದು ಅವರು ಹೇಳಿದ್ದಾರೆ.
ಭವಿಷ್ಯದ ಮಂಗಳ ಗ್ರಹದ ಯಾನಕ್ಕೆ ಇದು ಏಕೆ ಮುಖ್ಯ?
ಮುಂದಿನ ದಿನಗಳಲ್ಲಿ ಮನುಷ್ಯರನ್ನು ಚಂದ್ರ ಹಾಗೂ ಮಂಗಳ ಗ್ರಹಕ್ಕೆ ದೀರ್ಘಾವಧಿಯ ಪ್ರವಾಸಕ್ಕೆ ಕಳುಹಿಸಲು ಜಾಗತಿಕ ಬಾಹ್ಯಾಕಾಶ ಸಂಸ್ಥೆಗಳು ಸಿದ್ಧತೆ ನಡೆಸುತ್ತಿವೆ. ಇಷ್ಟು ದೀರ್ಘ ಪ್ರಯಾಣದಲ್ಲಿ ಭೂಮಿಯಿಂದಲೇ ಪ್ಯಾಕ್ ಮಾಡಿದ ಆಹಾರವನ್ನು ಕೊಂಡೊಯ್ಯುವುದು ಅಸಾಧ್ಯ.
ಹೀಗಾಗಿ, ಬಾಹ್ಯಾಕಾಶದಲ್ಲೇ ತಾಜಾ ತರಕಾರಿ ಮತ್ತು ಆಹಾರ ಬೆಳೆಯುವುದು ಗಗನಯಾತ್ರಿಗಳ ಪೋಷಣೆಗೆ ಮಾತ್ರವಲ್ಲದೆ, ಅವರ ಮಾನಸಿಕ ಆರೋಗ್ಯಕ್ಕೂ ಅತ್ಯಂತ ಅಗತ್ಯವಾಗಿದೆ. ಅಲ್ಲದೆ, ಇಲ್ಲಿ ನಡೆಯುವ ಸಂಶೋಧನೆಯು ಭೂಮಿಯ ಮೇಲಿನ ಅರಣ್ಯೀಕರಣ ಮತ್ತು ಕೃಷಿಯ ಸುಧಾರಣೆಗೂ ನೆರವಾಗಲಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ