ಕುಟುಂಬದ ಬಾಂಧವ್ಯ, ಪ್ರೀತಿ ಹಾಗೂ ತ್ಯಾಗದ ಭಾವನಾತ್ಮಕ ಕಥಾಹಂದರ ಹೊಂದಿರುವ ಕಲರ್ಸ್ ಕನ್ನಡ ವಾಹಿನಿಯ ‘ಪವಿತ್ರ ಬಂಧನ’ ಧಾರಾವಾಹಿ ವೀಕ್ಷಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಬಿಗ್ ಬಾಸ್ ಸ್ಪರ್ಧಿ ಸೂರಜ್ ನಾಯಕನಾಗಿ ನಟಿಸುತ್ತಿರುವ ಈ ಜನಪ್ರಿಯ ಧಾರಾವಾಹಿ ಇನ್ಮುಂದೆ ಹೊಸ ಸಮಯದಲ್ಲಿ ಪ್ರಸಾರ ಕಾಣಲಿದೆ. ಬರುವ ಸೋಮವಾರದಿಂದ ‘ಪವಿತ್ರ ಬಂಧನ’ ಧಾರಾವಾಹಿಯು ಪ್ರತಿದಿನ ಸಂಜೆ 6:30ಕ್ಕೆ ಪ್ರಸಾರವಾಗಲಿದೆ ಎಂದು ವಾಹಿನಿ ಬಳಗ ಅಧಿಕೃತವಾಗಿ ತಿಳಿಸಿದೆ.
ಬಂಧದಲ್ಲಿ ಹೊಸ ತಿರುವು:
ಪವಿತ್ರಾಳ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸನ್ನಿವೇಶಗಳು ಆಕೆಯ ಜೀವನದ ದಿಕ್ಕನ್ನೇ ಬದಲಾಯಿಸುತ್ತವೆ. ಪ್ರೀತಿಯ ಸುಂದರ ಕನಸು ಕಾಣುತ್ತಿದ್ದ ಆಕೆ, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ದೇವದತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಅನಿವಾರ್ಯತೆ ಎದುರಾಗುತ್ತದೆ. ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮುನ್ನವೇ ಮದುವೆಯಾಗುವ ಈ ಜೋಡಿಯ ಜೀವನ ಮುಂದಕ್ಕೆ ಯಾವ ತಿರುವು ಪಡೆಯಲಿದೆ ಎನ್ನುವುದೇ ಧಾರಾವಾಹಿಯ ಮುಖ್ಯ ಕಥಾವಸ್ತು.
ಈ ಅನಿರೀಕ್ಷಿತ ಪವಿತ್ರ ಬಂಧನ ಪ್ರೀತಿಯಾಗಿ ಬದಲಾಗುತ್ತದೆಯೇ ಅಥವಾ ಹಳೆಯ ಗೊಂದಲಗಳು ಇವರ ನಡುವೆ ಮತ್ತೆ ಬಿರುಕು ಮೂಡಿಸುತ್ತವೆಯೇ ಎಂಬ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ. ಸೂರಜ್ ನಟನೆಯ ಈ ಧಾರಾವಾಹಿ ಹೊಸ ಸಮಯಕ್ಕೆ ಕಾಲಿಡುತ್ತಿದ್ದು, ಕಿರುತೆರೆ ವೀಕ್ಷಕರಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.
ಇದನ್ನೂ ಓದಿ: ‘ರಾಶಿಕಾಗಿಂತ ನನಗೆ ಅವರೇ ಹೆಚ್ಚು ಇಷ್ಟ’; ಓಪನ್ ಆಗಿ ಹೇಳಿದ ಸೂರಜ್
ಕಥಾ ನಾಯಕ ಹಾಗೂ ನಾಯಕಿ ನಡುವಿನ ಪ್ರೀತಿ, ಪ್ರೇಮ ಹಾಗೂ ರೊಮ್ಯಾನ್ಸ್ ಧಾರಾವಾಹಿಯ ಹೈಲೈಟ್ ಆಗಿದೆ. ‘ಬಿಗ್ ಬಾಸ್’ನಲ್ಲಿ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ಸೂರಜ್ ಅವರು ಸಾಕಷ್ಟು ಹವಾ ಸೃಷ್ಟಿ ಮಾಡಿದರು. ಅವರ ಖ್ಯಾತಿ ನೋಡಿ ಈ ರೊಮ್ಯಾಂಟಿಕ್ ಧಾರಾವಾಹಿಯ ನಾಯಕನ ಪಟ್ಟವನ್ನು ಅವರಿಗೆ ನೀಡಲಾಯಿತು. ಬಿಗ್ ಬಾಸ್ ಆಗಮನದ ಹಿನ್ನೆಲೆಯಲ್ಲಿ ಈಗ ಹೊಸ ಸಮಯದೊಂದಿಗೆ ಧಾರಾವಾಹಿ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.