ಚಿಕ್ಕಮಗಳೂರು, ಆಗಸ್ಟ್ 10: ಮಳೆಯನಾಡು ಎಂದೇ ಪ್ರಸಿದ್ಧವಾಗಿರುವ ಕಾಫಿನಾಡು ಚಿಕ್ಕಮಗಳೂರು (chikkamagaluru) ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೊಂಚ ವಿರಾಮ ನೀಡಿದ್ದ ಮಳೆ (Rain) ಮತ್ತೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಕೊಪ್ಪ, ಶೃಂಗೇರಿ, ಕಳಸ ಹಾಗೂ ಮೂಡಿಗೆರೆ ತಾಲೂಕಿನ ಹಲವು ಭಾಗಗಳಲ್ಲಿ ರಣಮಳೆಯಾಗುತ್ತಿದ್ದು, ವಾಡಿಕೆ ಪ್ರಮಾಣದಷ್ಟು ಮಳೆಯಾಗದಿದ್ದರೂ ಬಿಟ್ಟು ಬಿಟ್ಟು ಸುರಿಯುತ್ತಿರುವ ನಿರಂತರ ಗಾಳಿ-ಮಳೆಯಿಂದಾಗಿ ಭೂಮಿಯ ತೇವಾಂಶ ಹೆಚ್ಚಾಗಿ ನಾನಾ ಅವಾಂತರಗಳು ಸಂಭವಿಸುತ್ತಿವೆ.
ಮಳೆಗೆ ಧರೆ ಕುಸಿತ: ಮನೆ ನುಗ್ಗಿದ ಮಣ್ಣು ಮಿಶ್ರಿತ ನೀರು
ಕೊಪ್ಪ ತಾಲೂಕಿನ ಅಂಬಳಿಕೆ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಗೆ ಪವನ್ ಎಂಬುವವರ ಮನೆಯ ಬಳಿ ಇರುವ ಧರೆ ಕುಸಿಯುತ್ತಿದೆ. ಧರೆ ಕುಸಿದು ಮನೆಯ ಹಿಂಭಾಗಕ್ಕೆ ಬಂದಿದ್ದು. ಮಳೆ ಹೆಚ್ಚಾದರೆ ಸಂಪೂರ್ಣ ಧರೆ ಕುಸಿಯುವ ಆತಂಕ ಎದುರಾಗಿದೆ. ಮನೆಯೊಳಗು ಮಣ್ಣು ಮಿಶ್ರಿತ ನೀರು ನುಗ್ಗಿದ್ದು, ಸದ್ಯ ಮನೆ ಖಾಲಿ ಮಾಡಿದ್ದಾರೆ. ಇನ್ನಷ್ಟು ಮಳೆಯಾದರೆ 100 ಅಡಿಗಳ ಎತ್ತರದಿಂದ ಧರೆ ಕುಸಿದು ಮನೆ ಮೇಲೆ ಬೀಳುವ ಆತಂಕ ಎದುರಾಗಿದೆ.
ಇದನ್ನೂ ಓದಿ: ಮಡಿಕೇರಿಯ ಸ್ಟೋನ್ ಹಿಲ್ನಲ್ಲಿ ಭೂಕುಸಿತ: ಪೊಲೀಸ್ ವಸತಿಗೃಹಗಳತ್ತ ಕೊಚ್ಚಿಬಂತು ನೂರಾರು ಟನ್ ಕಸದ ರಾಶಿ!
ಕಾಫಿನಾಡ ಮಲೆನಾಡು ಭಾಗದಲ್ಲಿ ಗಾಳಿ-ಮಳೆ ಅಬ್ಬರ ಮುಂದುವರೆದಿದ್ದು, ನಿರಂತರ ಮಳೆಗೆ ಭೂಮಿಯ ತೇವಾಂಶ ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ-ಪದೇ ಗುಡ್ಡ ಕುಸಿಯುತ್ತಿದೆ. ಶೃಂಗೇರಿ ತಾಲೂಕಿನ ಸುತ್ತಮುತ್ತ ನಿರಂತರ ಮಳೆಯಿಂದ ನಾನಾ ಅವಾಂತರಗಳು ಸೃಷ್ಠಿಯಾಗಿವೆ. ಶೃಂಗೇರಿ ತಾಲೂಕಿನ ಕಡೇಮನೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಬೃಹತ್ ಗುಡ್ಡ ಕುಸಿದಿದೆ.
ಶೃಂಗೇರಿ-ಮಂಗಳೂರು ಹೆದ್ದಾರಿ ನಡುವೆ ಸಂಚಾರಕ್ಕೆ ಅಡಚಣೆ!
ಗಾಳಿ-ಮಳೆ ಹೆಚ್ಚಾದಂತೆ ರಸ್ತೆ ಬದಿಯ ಗುಡ್ಡವು ಮರಗಳ ಸಮೇತ ಧರೆಗೆ ಉರುಳಿದ್ದು, ರಾಷ್ಟ್ರೀಯ ಹೆದ್ದಾರಿ 169ರ ಕಾರ್ಕಳ-ಮಂಗಳೂರು- ಶೃಂಗೇರಿ ನಡುವಿನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರಸ್ತೆಗೆ ಬಿದ್ದಿರುವ ಭಾರೀ ಪ್ರಮಾಣದ ಮಣ್ಣು ಮತ್ತು ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ. ಆದರೆ, ಮಳೆಯಿಂದಾಗಿ ಸ್ವಲ್ಪ ಸ್ವಲ್ಪ ಮಣ್ಣು ಜಾರುತ್ತಿದ್ದು, ತೆರವು ಕಾರ್ಯ ಸವಾಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಮಾರ್ಗದಲ್ಲಿ ಮಳೆ ಹೆಚ್ಚಾದಂತೆಲ್ಲ ಭೂಮಿಯ ತೇವಾಂಶ ಹೆಚ್ಚಾಗಿ ಧರೆ ಕುಸಿತ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಹುಟ್ಟಿಸಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ತುಂಗಾ, ಭದ್ರಾ ಅಬ್ಬರಕ್ಕೆ ಹೊಲ-ಗದ್ದೆಗಳು ಜಲಾವೃತ
ಕೊಂಚ ವಿರಾಮ ನೀಡಿದ್ದ ಮಳೆ ಮತ್ತೆ ಮಲೆನಾಡು ಭಾಗದಲ್ಲಿ ಆರ್ಭಟ ಮುಂದುವರೆಸಿದೆ. ಕೊಪ್ಪ, ಶೃಂಗೇರಿ ಭಾಗದಲ್ಲಿ ಧರೆ ಕುಸಿಯುವ ಆತಂಕ ಸೃಷ್ಟಿಯಾಗಿದೆ. ವಾಡಿಕೆ ಪ್ರಮಾಣದಷ್ಟು ಮಳೆಯಾಗದೆ ಇದ್ದರು ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಅನಾಹುತಗಳು ಸಂಭವಿಸುತ್ತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.