ನಿಖಿಲ್ ಕುಮಾರಸ್ವಾಮಿImage Credit source: tv9 kannada
ರಾಮನಗರ, ಆಗಸ್ಟ್ 02: ಬಿಡದಿ ಟೌನ್ಶಿಪ್ ಯೋಜನೆ (Bidadi Township) ವಿಚಾರವಾಗಿ ಪರ, ವಿರೋಧ ಮುಂದುವರೆದಿದೆ. ಇದೀಗ ಜೆಡಿಎಸ್ ಪಕ್ಷ ಪಾದಯಾತ್ರೆಗೆ ಸಜ್ಜಾಗಿದೆ. ‘ಆಗಸ್ಟ್ 9 ರಿಂದ 11ರವರೆಗೆ ಅಂದರೆ 3 ದಿನಗಳ ಕಾಲ ಬೈರಮಂಗಲದಿಂದ ಫ್ರೀಡಂಪಾರ್ಕ್ವರೆಗೆ ಒಟ್ಟು 38 ಕಿ. ಮೀ ಪಾದಯಾತ್ರೆ ಮಾಡುತ್ತೇವೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ದೇವೇಗೌಡ, ಕುಮಾರಸ್ವಾಮಿ ಭಾಗಿ
ರಾಮನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಇಂದು ನಿಖಿಲ್ ಕುಮಾರಸ್ವಾಮಿ ಪೂರ್ವಭಾವಿ ಸಭೆ ಮಾಡಿದರು. ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,‘ ಆಗಸ್ಟ್ 9ರಿಂದ 11ರವರೆಗೆ 3 ದಿನ ಪಾದಯಾತ್ರೆ ಮಾಡುತ್ತೇವೆ. ಪಾದಯಾತ್ರೆಯಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಭಾಗಿಯಾಗುತ್ತಾರೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ವಿವಾದದ ನಡುವೆಯೇ ಬಿಡದಿ ಟೌನ್ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
‘ರೈತರ ಸಮಸ್ಯೆಗೆ ಧ್ವನಿಯಾಗಿ ಜೆಡಿಎಸ್ ಕೆಲಸ ಮಾಡಿದೆ. ಈ ನಿಟ್ಟಿನಲ್ಲಿ ರೈತರ ಸಮಸ್ಯೆ ತಿಳಿಯಲು ಮತ್ತು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪಾದಯಾತ್ರೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಕಣ್ಣು ಕಾಣಿಸುತ್ತಿಲ್ಲ, ಕಿವಿಯೂ ಕೇಳಿಸುತ್ತಿಲ್ಲ. ಹೀಗಾಗಿ ರೈತರ ಪರ ನಿಲ್ಲುವುದು ನಮ್ಮ ಧರ್ಮ. ಟೌನ್ಶಿಪ್ ಬಗ್ಗೆ ಸ್ಥಳೀಯ ಶಾಸಕರು ಏನು ಬೇಕಾದರೂ ಮಾತಾಡಲಿ, ಯೋಜನೆ ವಿರುದ್ಧ ಕಾನೂನು ಹೋರಾಟಕ್ಕೂ ಮುಂದಾಗಿದ್ದೇವೆ’ ಎಂದರು.
ಜೆಡಿಎಸ್, ಬಿಜೆಪಿ ಪ್ರತ್ಯೇಕ ಪಾದಯಾತ್ರೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದಿಷ್ಟು
ಇನ್ನು ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ ನಡೆಸುತ್ತಿರುವ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ‘ಕೆಲವೊಮ್ಮೆ ಪ್ರತ್ಯೇಕವಾಗಿ, ಇನ್ನು ಕೆಲವೊಮ್ಮೆ ಒಟ್ಟಾಗಿ ಹೋರಾಟ ಮಾಡಬೇಕಾಗುತ್ತದೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ’ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.