ಹೊಸ ‘ಸ್ಪೈಡರ್ಮ್ಯಾನ್’ (Spiderman) ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾಕ್ಕೆ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಎಂದು ಹೆಸರಿಡಲಾಗಿದ್ದು, ಸಿನಿಮಾದ ಎರಡನೇ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ಈ ಹಿಂದಿನ ‘ಸ್ಪೈಡರ್ಮ್ಯಾನ್: ನೋ ವೇ ಹೋಮ್’ ಸಿನಿಮಾನಲ್ಲಿ ಸ್ಪೈಡರ್ಮ್ಯಾನ್ ಅನ್ನು ಇಡೀ ಜಗತ್ತೇ ಮರೆತು ಹೋಗುತ್ತದೆ. ಅವನ ಗೆಳೆಯರು, ಕುಟುಂಬದವರು ಎಲ್ಲರೂ ಸ್ಪೈಡರ್ಮ್ಯಾನ್ ಇದ್ದನೆಂಬುದನ್ನೇ ಮರೆತಿದ್ದಾರೆ. ಹಾಗಾಗಿ ಇದೀಗ ‘ಸ್ಪೈಡರ್ಮ್ಯಾನ್’ ಒಂಟಿಯಾಗಿದ್ದಾನೆ. ಅವನಿಗೆ ಗೆಳೆಯರಿಲ್ಲ, ಅವನ ಗರ್ಲ್ಫ್ರೆಂಡ್ ಸಹ ಬೇರೊಬ್ಬನ ಜೊತೆಗಿದ್ದಾಳೆ. ಇದೀಗ ಬಿಡುಗಡೆ ಆಗಿರುವ ಟ್ರೈಲರ್ ನೋಡಿದರೆ ಆತನ ಗೆಳೆಯರೇ ಈಗ ವೈರಿಗಳಾಗಿದ್ದಾರೆ.
ಈಗ ಬಿಡುಗಡೆ ಆಗಿರುವ ಟ್ರೈಲರ್‌ನಲ್ಲಿ ತೋರಿಸಿರುವಂತೆ ಪೀಟರ್ (‘ಸ್ಪೈಡರ್ಮ್ಯಾನ್’) ನ್ಯೂಯಾರ್ಕ್‌ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಾ, ಸ್ಪೈಡರ್ ಮ್ಯಾನ್ ಆಗಿ ಬದುಕುತ್ತಿರುವುದು ಕಾಣುತ್ತದೆ. ನಗರವನ್ನು ರಕ್ಷಿಸುತ್ತಿದ್ದರೂ, ತನ್ನ ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿರುವ ನೋವು ಅವನಲ್ಲಿ ಎದ್ದು ಕಾಣುತ್ತದೆ.
ಈ ಟ್ರೈಲರ್‌ನಲ್ಲಿ ಪೀಟರ್‌ಗೆ ಉಂಟಾಗುತ್ತಿರುವ ನಿಗೂಢ ದೈಹಿಕ ಬದಲಾವಣೆ ಅಥವಾ ರೂಪಾಂತರದ ಬಗ್ಗೆ ತೋರಿಸಲಾಗಿದೆ. ಸ್ಪೈಡರ್ಮ್ಯಾನ್ ದೇಹದಲ್ಲಿ ಬದಲಾವಣೆ ಆಗುತ್ತಿದ್ದು, ಆತ ಕೆಲ ಬಾರಿ ಒಳ್ಳೆಯವನಾಗಿ ಕೆಲ ಬಾರಿ ಕೆಟ್ಟವನಾಗಿಯೂ ವರ್ತಿಸುತ್ತಿದ್ದಾನೆ. ಅವನ ಕಣ್ಣುಗಳು ಕಪ್ಪಗಾಗುತ್ತಿದ್ದು, ವಿಲನ್ ಆಗಿ ಬದಲಾಗುತ್ತಿದ್ದಾನೆ. ತನ್ನಲ್ಲಿರುವ ಋಣಾತ್ಮಕ ಅಂಶವನ್ನು ತೆಗೆದು ಹಾಕುವ ಪ್ರಯತ್ನವೂ ಮಾಡುತ್ತಿದ್ದಾನೆ.
ಇದನ್ನೂ ಓದಿ:ಸ್ಪೈಡರ್ಮ್ಯಾನ್ ವೇಷ ತೊಟ್ಟು ಬೈಕ್ನಲ್ಲಿ ಸ್ಟಂಟ್ ಮಾಡಿದ ವ್ಯಕ್ತಿ,15 ಸಾವಿರ ರೂ. ದಂಡ
ಟ್ರೈಲರ್‌ನಲ್ಲಿನ ಅತ್ಯಂತ ಅನಿರೀಕ್ಷಿತ ಕ್ಷಣವೆಂದರೆ ಹಲ್ಕ್ ಮತ್ತು ಸ್ಪೈಡರ್ ಮ್ಯಾನ್ ನಡುವಿನ ಕಾದಾಟ. ತನ್ನ ದೇಹದಲ್ಲಿನ ಬದಲಾವಣೆಗಳ ಬಗ್ಗೆ ಬ್ಯಾನ್ನರ್‌ನ ಸಹಾಯ ಪಡೆಯಲು ಪೀಟರ್ ಹೋಗುತ್ತಾನೆ, ಆದರೆ ವಿಷಯವು ಇಬ್ಬರೂ ಹೀರೋಗಳ ನಡುವಿನ ಭೀಕರ ಕದನಕ್ಕೆ ದಾರಿ ಮಾಡಿಕೊಡುತ್ತದೆ. ಹಲ್ಕ್ ತನ್ನ ಸ್ವಂತ ಇಚ್ಛೆಯಿಂದಲ್ಲದೆ, ಯಾವುದೋ ನಿಗೂಢ ಶಕ್ತಿಯ ಪ್ರಭಾವಕ್ಕೆ ಒಳಗಾಗಿ ಸ್ಪೈಡರ್ ಮ್ಯಾನ್ ಮೇಲೆ ದಾಳಿ ಮಾಡುತ್ತಿರಬಹುದು ಎಂಬ ಸುಳಿವು ಟ್ರೈಲರ್‌ನಲ್ಲಿದೆ. ಅಸಲಿಗೆ ಇಬ್ಬರೂ ಅವೇಂಜರ್ಸ್ ಟೀಮ್ನಲ್ಲಿರುವವರು ಆದರೆ ಈಗ ಅವರೇ ವಿರೋಧಿಗಳಾಗಿ ಕಿತ್ತಾಡಿದ್ದಾರೆ.
ಟ್ರೈಲರ್‌ನಲ್ಲಿ ಸಾಕಷ್ಟು ಆಕ್ಷನ್, ಭಾವುಕ ಸನ್ನಿವೇಶಗಳನ್ನು ತೋರಿಸಲಾಗಿದೆ. ಆದರ ಜೊತೆಗೆ ಕೆಲವು ಕುತೂಹಲಗಳನ್ನು ಸಹ ಮೂಡಿಸಲಾಗಿದೆ. ಕೆಲವು ಹೊಸ ಪಾತ್ರಗಳನ್ನು ಈ ಸಿನಿಮಾನಲ್ಲಿ ಪರಿಚಯ ಮಾಡಿಸಲಾಗಿದೆ. ಜನರ ಮನಸ್ಸನ್ನು ಕಬ್ಜ ಮಾಡುವ ಪಾತ್ರ ಒಂದಿದೆ. ಇನ್ನೂ ಕೆಲವು ಹೊಸ ಪಾತ್ರಗಳಿವೆ. ಜಪಾನಿ ಸಮುರಾಯ್ ರೀತಿಯ ಜನರ ವಿರುದ್ಧ ಸ್ಪೈಡರ್ ಮ್ಯಾನ್ ಫೈಟ್ ಮಾಡುತ್ತಿದ್ದಾನೆ. ಇದೆಲ್ಲ ಈ ಹಿಂದಿನ ಸ್ಪೈಡರ್ಮ್ಯಾನ್ ಕತೆಗಳಿಂದ ಹೊರತಾಗಿರುವ ಅಂಶಗಳಾಗಿವೆ.
ಈ ಹೊಸ ಟ್ರೈಲರ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕತೆಯ ಗಂಭೀರತೆ, ಭಾವನಾತ್ಮಕ ಅಂಶಗಳು ಮತ್ತು ದೊಡ್ಡ ಮಟ್ಟದ ಆಕ್ಷನ್ ದೃಶ್ಯಗಳನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಒಟ್ಟಾರೆಯಾಗಿ, ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ 2026 ರ ಅತೀ ಹೆಚ್ಚು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶನದ ಈ ಚಿತ್ರವು ಜುಲೈ 30 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ