ಆಸ್ಟ್ರೇಲಿಯಾದ ಪ್ರತಿಷ್ಠಿತ ಟಿ20 ಟೂರ್ನಿ ಬಿಗ್ ಬ್ಯಾಷ್ ಲೀಗ್‌ನ (BBL) ಮುಂದಿನ ಸೀಸನ್‌ನಲ್ಲಿ ಮೆಲ್ಬೋರ್ನ್ ನಗರದ ಬದ್ಧ ವೈರಿಗಳಾದ ಮೆಲ್ಬೋರ್ನ್ ಸ್ಟಾರ್ಸ್ (Melbourne Stars) ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ (Melbourne Renegades) ತಂಡಗಳು ಪ್ರತ್ಯೇಕ ಹಾಗೂ ಸ್ವತಂತ್ರ ತಂಡಗಳಾಗಿಯೇ ಮುಂದುವರಿಯಲಿವೆ. ಈ ಎರಡು ಜನಪ್ರಿಯ ಫ್ರಾಂಚೈಸಿಗಳನ್ನು ಒಂದಾಗಿಸುವ ‘ವಿಲೀನ ಯೋಜನೆ’ಯನ್ನು ಕ್ರಿಕೆಟ್ ವಿಕ್ಟೋರಿಯಾ ಅಧಿಕೃತವಾಗಿ ಕೈಬಿಟ್ಟಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ರಾಜ್ಯ ಮಂಡಳಿಗಳ ಮುಖ್ಯಸ್ಥರ ನಡುವೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಲೀಗ್‌ನ ಖಾಸಗೀಕರಣದ ಹೈಬ್ರಿಡ್ ಮಾದರಿಗೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಆದರೆ, ಈ ನೀತಿಗಳ ಜಾರಿಗೆ ಹೆಚ್ಚಿನ ಸಮಯ ಬೇಕಾಗುವುದರಿಂದ, ಮುಂಬರುವ ಬಿಗ್ ಬ್ಯಾಷ್ ಲೀಗ್ ಟೂರ್ನಿಗಳಲ್ಲಿ ಎರಡೂ ತಂಡಗಳು ತಮ್ಮ ಹಳೆಯ ಬ್ರ್ಯಾಂಡಿಂಗ್, ಜರ್ಸಿ ಬಣ್ಣ ಹಾಗೂ ಸ್ಥಳೀಯ ಸ್ಪರ್ಧಾತ್ಮಕತೆಯೊಂದಿಗೆ ಸ್ವತಂತ್ರವಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ದಿಢೀರ್ ತಿರುವು ಪಡೆದ ವಿಲೀನ!
ಕೇವಲ ಎರಡು ವಾರಗಳ ಹಿಂದೆ, ಕ್ರಿಕೆಟ್ ವಿಕ್ಟೋರಿಯಾ ಮಂಡಳಿಯು ಮೆಲ್ಬೋರ್ನ್ ಸ್ಟಾರ್ಸ್ ಬ್ರ್ಯಾಂಡ್ ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಎರಡೂ ತಂಡಗಳನ್ನು ವಿಲೀನಗೊಳಿಸುವುದಾಗಿ ಘೋಷಿಸಿತ್ತು. ಈ ಘೋಷಣೆಯೊಂದಿಗೆ ಮುಂಬರುವ ಬಿಗ್ ಬ್ಯಾಷ್ ಲೀಗ್ನಲ್ಲಿ ಮೆಲ್ಬೋರ್ನ್ ಹೆಸರಿನಲ್ಲಿ ಒಂದು ತಂಡ ಮಾತ್ರ ಕಣಕ್ಕಿಳಿಯಲಿದೆ ಎಂದು ತಿಳಿಸಲಾಗಿತ್ತು.
ಆದರೆ ಇದೀಗ, ಬಿಬಿಎಲ್ ಖಾಸಗೀಕರಣ, ಆಡಳಿತಾತ್ಮಕ ರಚನೆ ಮತ್ತು ಆಟಗಾರರ ವೇತನದ ಕುರಿತು ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ (ACA) ಜೊತೆಗಿನ ಮಾತುಕತೆಗಳು ಇನ್ನು ದೀರ್ಘಕಾಲದ ಪ್ರಕ್ರಿಯೆಯಾಗಿರುವುದರಿಂದ, ಈ ತರಾತುರಿಯ ನಿರ್ಧಾರವನ್ನು ಸದ್ಯಕ್ಕೆ ಕೈ ಬಿಡಲಾಗಿದೆ.
ಹೀಗಾಗಿ ಮುಂಬರುವ ಸೀಸನ್ನಲ್ಲೂ ಮೆಲ್ಬೋರ್ನ್ ತಂಡಗಳು ಬೇರೆ ಬೇರೆಯಾಗಿ ಕಣಕ್ಕಿಳಿಯಲಿದೆ. ಅದರಂತೆ ಬಿಗ್ ಬ್ಯಾಷ್ ಲೀಗ್‌ನ 16ನೇ ಸೀಸನ್‌ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡ ಎಂದಿನಂತೆ ಹಸಿರು ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ತಂಡ ಕೆಂಪು ಜೆರ್ಸಿಯಲ್ಲಿ ಅಭಿಮಾನಿಗಳನ್ನು ರಂಜಿಸಲಿವೆ.
ಮೆಲ್ಬೋರ್ನ್ ತಂಡಗಳ ಸ್ಟಾರ್ ಆಟಗಾರರು:
ವಿಕ್ಟೋರಿಯಾ ಕ್ರಿಕೆಟ್ ಮಂಡಳಿಯ ಒಪ್ಪಂದದ ಪ್ರಕಾರ ಎರಡೂ ಫ್ರಾಂಚೈಸಿಗಳ ಪ್ರಮುಖ ಆಟಗಾರರು ತಮ್ಮ ಹಳೆಯ ತಂಡಗಳಲ್ಲೇ ಮುಂದುವರಿಯಲಿದ್ದಾರೆ. ಅದರಂತೆ ಮುಂಬರುವ ಸೀಸನ್‌ನಲ್ಲಿ ಮೆಲ್ಬೋರ್ನ್ ತಂಡಗಳ ಪರ ಕಣಕ್ಕಿಳಿಯಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
- ಮೆಲ್ಬೋರ್ನ್ ಸ್ಟಾರ್ಸ್ (ಪುರುಷ ತಂಡ): ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಹಿಲ್ಟನ್ ಕಾರ್ಟ್‌ರೈಟ್, ಸ್ಯಾಮ್ ಹಾರ್ಪರ್
- ಮೆಲ್ಬೋರ್ನ್ ಸ್ಟಾರ್ಸ್ (ಮಹಿಳಾ ತಂಡ):ಮೆಗ್ ಲ್ಯಾನಿಂಗ್, ಅನ್ನಾಬೆಲ್ ಸದರ್ಲ್ಯಾಂಡ್, ಕಿಮ್ ಗಾರ್ತ್, ಮರಿಝಾನೆ ಕಪ್.
ಇದನ್ನೂ ಓದಿ: ಗೋಲು ಬಾರಿಸಿ ಕ್ಷಮೆಯಾಚಿಸಿದ ಯಾಸಿನ್ ಅಯಾರಿ..!
- ಮೆಲ್ಬೋರ್ನ್ ರೆನೆಗೇಡ್ಸ್ (ಪುರುಷ ತಂಡ):ಜೇಕ್ ಫ್ರೇಸರ್-ಮೆಕ್‌ಗುರ್ಕ್, ವಿಲ್ ಸದರ್ಲ್ಯಾಂಡ್, ಜೋಶ್ ಬ್ರೌನ್, ಜೇಸನ್ ಬೆಹ್ರೆನ್‌ಡಾರ್ಫ್.
- ಮೆಲ್ಬೋರ್ನ್ ರೆನೆಗೇಡ್ಸ್ (ಮಹಿಳಾ ತಂಡ): ಸೋಫಿ ಮೊಲಿನಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಕರ್ಟ್ನಿ ವೆಬ್, ನಿಕೋಲ್ ಫಾಲ್ಟಮ್.