Headlines

ಬೀಜಿಂಗ್‌ನ 109 ಅಂತಸ್ತಿನ ದೈತ್ಯ ಕಟ್ಟಡಕ್ಕೆ ಡಿಕ್ಕಿ ಹೊಡೆದ ವಿಮಾನ – Kannada News | Beijing Plane Crash: Light Aircraft Hits 109 Story China Zun Skyscraper

ಬೀಜಿಂಗ್, ಜೂನ್ 27: ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಭೀಕರ ವಿಮಾನ ಅಪಘಾತ(Plane Crash)ವೊಂದು ಸಂಭವಿಸಿದೆ. ನಗರದ ಅತ್ಯಂತ ಎತ್ತರದ ಹೆಗ್ಗುರುತಾಗಿರುವ, 109 ಅಂತಸ್ತಿನ ‘ಚೀನಾ ಜುನ್’ (CITIC Tower) ಸ್ಕೈಸ್ಕ್ರೇಪರ್ ಕಟ್ಟಡಕ್ಕೆ ಲಘು ವಿಮಾನವೊಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದಾಗಿ ಇಡೀ ನಗರದಲ್ಲಿ ವ್ಯಾಪಕ ಆತಂಕ ಮತ್ತು ಭೀತಿ ಸೃಷ್ಟಿಯಾಗಿದೆ.

ಅಪಘಾತ ಸಂಭವಿಸಿದ ತಕ್ಷಣವೇ ದೈತ್ಯ ಮಹಲಿನ ಮೇಲಿನ ಅಂತಸ್ತುಗಳಿಂದ ಅವಶೇಷಗಳು ಮತ್ತು ಗಾಜಿನ ತುಂಡುಗಳು ನೆಲಕ್ಕೆ ಬೀಳಲು ಆರಂಭಿಸಿದವು. ಘಟನೆಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿವೆ. ಇದರಲ್ಲಿ ಕಟ್ಟಡದ ಭಾಗಗಳು ಕುಸಿಯುತ್ತಿರುವುದು, ವಿಮಾನದ ಬಾಲದ ತುಂಡು ನೆಲಕ್ಕೆ ಬಿದ್ದಿರುವುದನ್ನು ಕಾಣಬಹುದು.

ತಕ್ಷಣವೇ ಕಾರ್ಯಪ್ರವೃತ್ತರಾದ ರಕ್ಷಣಾ ಸಿಬ್ಬಂದಿ ಕಟ್ಟಡದೊಳಗಿದ್ದ ನೂರಾರು ಜನರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಗೋಪುರದ ದ್ವಾರದ ಬಳಿ ಅಗ್ನಿಶಾಮಕ ದಳ, ಪೊಲೀಸ್ ಮತ್ತು ಆಂಬ್ಯುಲೆನ್ಸ್ ವಾಹನಗಳು ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿವೆ. ಅಪಘಾತಕ್ಕೀಡಾದ ವಿಮಾನವು ಚೀನಾ ದೇಶದಲ್ಲೇ ತಯಾರಾದ ಲಘು ಕ್ರೀಡಾ ವಿಮಾನವಾಗಿದೆ . ಇದನ್ನು ‘ಸನ್‌ವರ್ಡ್ ಎಸ್‌ಎ 60 ಎಲ್ ಅರೋರಾ’ (Sunward SA60L Aurora) ಎಂದು ಗುರುತಿಸಲಾಗಿದೆ.

ಮತ್ತಷ್ಟು ಓದಿ: ಅಹಮದಾಬಾದ್ ವಿಮಾನ ದುರಂತಕ್ಕೆ ಒಂದು ವರ್ಷ ತುಂಬಿದ್ರೂ ಪ್ರಕಟವಾಗದ ತನಿಖಾ ವರದಿ; ಎಎಐಬಿ ಗಡುವು ಮೀರಿದ ಭಾರತ!

ಈ ವಿಮಾನವನ್ನು ಸ್ಥಳೀಯ ಸಾಮಾನ್ಯ ವಿಮಾನಯಾನ ಕಂಪನಿಯೊಂದು ನಿರ್ವಹಿಸುತ್ತಿತ್ತು ಎನ್ನಲಾಗಿದೆ. ಆದರೆ, ಕಿಕ್ಕಿರಿದು ತುಂಬಿರುವ ನಗರದ ಮಧ್ಯೆ ಈ ವಿಮಾನವು ಗೋಪುರಕ್ಕೆ ಡಿಕ್ಕಿ ಹೊಡೆಯಲು ನಿಖರ ಕಾರಣವೇನು ಎಂಬುದು ಇನ್ನು ನಿಗೂಢವಾಗಿದೆ. ಜಾಗತಿಕ ವಿಮಾನ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ‘Flightradar24’ ಬಿಡುಗಡೆ ಮಾಡಿರುವ ಆರಂಭಿಕ ಮಾಹಿತಿಯ ಪ್ರಕಾರ, ಈ ಲಘು ವಿಮಾನವು ಅಪಘಾತಕ್ಕೂ ಮುನ್ನ ತನ್ನ ನಿಗದಿತ ಸಾಮಾನ್ಯ ಹಾರಾಟದ ಮಾರ್ಗದಿಂದ ಸಂಪೂರ್ಣವಾಗಿ ವಿಮುಖವಾಗಿತ್ತು. ಅದು ಅತ್ಯಂತ ಅಸಾಮಾನ್ಯವಾದ ಬೇರೆ ಮಾರ್ಗದಲ್ಲಿ ಚಲಿಸಿ ಬಂದು ನೇರವಾಗಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ.

ಬೀಜಿಂಗ್‌ನಲ್ಲಿ ಕಠಿಣ ನಿಯಮಗಳ ನಡುವೆಯೂ ದುರಂತ
ವಿಶೇಷವೆಂದರೆ, ಬೀಜಿಂಗ್‌ನಲ್ಲಿ ಸಣ್ಣ ವಿಮಾನ ಹಾಗೂ ಡ್ರೋನ್‌ಗಳ ಹಾರಾಟದ ಮೇಲೆ ಕಟ್ಟುನಿಟ್ಟಿನ ನಿಷೇಧವಿರುವಾಗಲೇ ಈ ಘಟನೆ ನಡೆದಿದೆ.

ವಿಡಿಯೋ

ಹೊಸ ಕಾನೂನಿನ ಪ್ರಕಾರ, ಮೇ 1 ರಿಂದ ಜಾರಿಗೆ ಬರುವಂತೆ ಬೀಜಿಂಗ್ ಅನ್ನು ಡ್ರೋನ್ ಮುಕ್ತ ವಲಯ ಎಂದು ಘೋಷಿಸಲಾಗಿದೆ. ಸರ್ಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ವ್ಯಕ್ತಿ ಇಲ್ಲಿ ಡ್ರೋನ್ ಅಥವಾ ಇಂತಹ ಸಣ್ಣ ವಿಮಾನಗಳನ್ನು ಖರೀದಿಸುವಂತಿಲ್ಲ, ಬಾಡಿಗೆಗೆ ಪಡೆಯುವಂತಿಲ್ಲ ಅಥವಾ ಹಾರಿಸುವಂತಿಲ್ಲ. ಇಷ್ಟೆಲ್ಲಾ ಕಾವಲು ಮತ್ತು ಕಠಿಣ ನಿಯಮಗಳ ನಡುವೆಯೂ ವಿಮಾನವು ರಾಜಧಾನಿಯ ಹೃದಯಭಾಗದ ಅತಿ ಎತ್ತರದ ಕಟ್ಟಡಕ್ಕೆ ಅಪ್ಪಳಿಸಿರುವುದು ಚೀನಾ ಆಡಳಿತಕ್ಕೆ ಭಾರಿ ತಲೆನೋವಾಗಿ ಪರಿಣಮಿಸಿದೆ. ಸದ್ಯ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ಆರಂಭವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *