ಮೈಸೂರು ಮೂತ್ರ ವಿಸರ್ಜನೆ ತಡೆಗೆ ಹೊಸ ಪ್ಲಾನ್
ಮೈಸೂರು, ಮೇ.6: ಸಾರ್ವಜನಿಕ ಸ್ಥಳಗಳಲ್ಲಿ, ಅದರಲ್ಲೂ ಮುಖ್ಯವಾಗಿ ಬಸ್ ನಿಲ್ದಾಣಗಳ ಬಳಿಯ ಖಾಲಿ ಕಾಂಪೌಂಡ್ ಗೋಡೆಗಳ ಬಳಿ ಮೂತ್ರ ವಿಸರ್ಜನೆ ಮಾಡುವುದು ಮತ್ತು ಅದರಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸಲು ಮೈಸೂರು ಮಹಾನಗರ ಪಾಲಿಕೆ (Mysore Metropolitan Corporation) ಒಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪಾಲಿಕೆ ಮಾಡುತ್ತಿದೆ. ಸಾರ್ವಜನಿಕರೇ ಈ ಬಗ್ಗೆ ಕಾಳಜಿ ವಹಿಸಬೇಕಿತ್ತು. ಆದರೆ ದಂಡ ಎಲ್ಲ ರೀತಿಯ ಪ್ರಯೋ ಮಾಡಿದ್ರೂ ಪ್ರಯೋಜನ ಆಗಿರಲಿಲ್ಲ. ಇದೀಗ ಪಾಲಿಕೆ ಈ ಬಗ್ಗೆ ಗಂಭೀರವಾಗಿ ಚಿಂತೆ ನಡೆಸಿ, ಮಾಸ್ಟರ್ ಪ್ಲಾನ್ ಮಾಡಿದೆ.
ಮೈಸೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಸುಮಾರು 80 ಮೀಟರ್ ಉದ್ದದ ಕಾಂಪೌಂಡ್ ಗೋಡೆಗೆ ಸ್ಟೇನ್ ಲೆಸ್ ಸ್ಟೀಲ್ (Stainless Steel) ಶೀಟ್ಗಳನ್ನು ಅಳವಡಿಸಲಾಗಿದೆ. ಇದು ಕನ್ನಡಿಯಂತೆ ಕೆಲಸ ಮಾಡುತ್ತದೆ. ಈ ಶೀಟ್ಗಳ ಮುಂದೆ ಯಾರಾದರೂ ನಿಂತರೆ, ಅವರ ಪ್ರತಿಬಿಂಬವು ಕನ್ನಡಿಯಂತೆ ಕಾಣಿಸುವುದಲ್ಲದೆ, ಅವರ ಹಿಂಭಾಗದಲ್ಲಿ ಚಲಿಸುವವರಿಗೆ ಇವರು ಏನು ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಇದು ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವವರಿಗೆ ಮುಜುಗರ ಉಂಟುಮಾಡುವ ಮೂಲಕ ಅಂತಹ ಕೆಲಸ ಮಾಡದಂತೆ ತಡೆಯುತ್ತದೆ.
ಕನ್ನಡಿಯ ಸುತ್ತಲೂ ಆಕರ್ಷಕ ಎಲ್ಇಡಿ ಲೈಟ್ಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆ ಸ್ಟ್ರೀಟ್ ಲೈಟ್ಗಳ ಜೊತೆಗೆ ಇವು ಕೂಡ ಆನ್ ಆಗುತ್ತವೆ. ಇದು ಆ ಪ್ರದೇಶಕ್ಕೆ ಹೊಸ ಕಳೆ ನೀಡುತ್ತದೆ. ಸುಮಾರು 9.5 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಾಯೋಗಿಕವಾಗಿ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದ ಗೋಡೆಗೆ ಅಳವಡಿಸಲಾಗಿರುವ ಈ ಯೋಜನೆಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದು ರಾಜ್ಯದಲ್ಲೇ ಜಾರಿಯಾದ ಇಂತಹ ಮೊದಲ ಯೋಜನೆಯಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ