Headlines

ಬುಲೆಟ್ ರೈಲು ಯೋಜನೆ ವಿಳಂಬವನ್ನು ಟೀಕಿಸಿದ ಜಪಾನ್ ಮಾಜಿ ಸಚಿವ; ಭಾರತ ತಿರುಗೇಟು – Kannada News | Former Japan minister slams India for bullet train project delay Government hits back

ನವದೆಹಲಿ, ಜುಲೈ 17: ಮುಂಬೈ-ಅಹಮದಾಬಾದ್ ಬುಲೆಟ್ ರೈಲು (Bullet Train) ಯೋಜನೆ ವಿಳಂಬವಾಗುತ್ತಿದೆ ಎಂದು ಜಪಾನ್‌ನ ಮಾಜಿ ಸಚಿವರೊಬ್ಬರು ಮಾಡಿರುವ ಆರೋಪಗಳನ್ನು ಭಾರತ ತಳ್ಳಿಹಾಕಿದೆ. ಇದು ಕೇವಲ ಜಪಾನ್ ಮಾಜಿ ಸಚಿವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿರುವ ಭಾರತ ಈ ಯೋಜನೆಯ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಅಹಮದಾಬಾದ್-ಮುಂಬೈ ಹೈಸ್ಪೀಡ್ ರೈಲು ಯೋಜನೆಗೆ ಸಂಬಂಧಿಸಿದಂತೆ ಭಾರತ ಮತ್ತು ಜಪಾನ್ ನಡುವಿನ ಮಾತುಕತೆಗಳು ಉತ್ತಮವಾಗಿ ಸಾಗುತ್ತಿವೆ ಎಂದು ತಿಳಿಸಿದ್ದಾರೆ.

ಜಪಾನ್ ಮಾಜಿ ಸಚಿವರ ಸಾಮಾಜಿಕ ಜಾಲತಾಣದ ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ನಾವು ಆ ಪೋಸ್ಟ್ ಅನ್ನು ನೋಡಿದ್ದೇವೆ. ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೇ. ಜಪಾನ್ ನಮಗೆ 2030ರ ವೇಳೆಗೆ ‘E20 ರೈಲು ಸರಣಿ’ಯನ್ನು (E20 train series) ಪೂರೈಸಲಿದೆ. ಏಕೆಂದರೆ ಆ ರೈಲು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಈ ನಡುವೆ ಭಾರತದಲ್ಲಿ ನಿರ್ಮಾಣ ಕಾರ್ಯವು ತೀವ್ರ ಗತಿಯಲ್ಲಿ ಸಾಗುತ್ತಿದ್ದು, ಬುಲೆಟ್ ರೈಲಿನ ಮೊದಲ ವಿಭಾಗವು 2027ರಲ್ಲೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಆದ್ದರಿಂದ ಹೈ-ಸ್ಪೀಡ್ ರೈಲನ್ನು ಆದಷ್ಟು ಬೇಗ ಆರಂಭಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೈಸ್ಪೀಡ್ ಯುಗಕ್ಕೆ ಭಾರತ ಸಜ್ಜು: 2027 ಆಗಸ್ಟ್ 15 ರಿಂದ ದೇಶದ ಮೊದಲ ಬುಲೆಟ್ ರೈಲು ಸಂಚಾರ ಆರಂಭ

ಜಪಾನ್ ಮಾಜಿ ಸಚಿವರ ಆರೋಪವೇನು?:

ಜಪಾನ್‌ನ ಮಾಜಿ ನ್ಯಾಯಾಂಗ ಸಚಿವ ಹಿದೇಕಿ ಮಾಕಿಹರಾ ಅವರು, ಶಿಂಕನ್‌ಸೆನ್ ಯೋಜನೆಯ ಮಾತುಕತೆಯ ವೇಳೆ ಭಾರತೀಯ ಅಧಿಕಾರಿಗಳು ನೀಡಿದ ಭರವಸೆಗಳನ್ನು ಈಡೇರಿಸಲು ಪದೇ ಪದೇ ವಿಫಲರಾಗಿದ್ದಾರೆ. ಅವರು ಸ್ವಹಿತಾಸಕ್ತಿಗೆ ಆದ್ಯತೆ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಬುಲೆಟ್ ರೈಲು ಯೋಜನೆಯ ಸಿಗ್ನಲಿಂಗ್ ವ್ಯವಸ್ಥೆಯಿಂದ ಜಪಾನ್ ಅನ್ನು ಹೊರಗಿಡಲಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯ, “ಸಿಗ್ನಲಿಂಗ್ ಉಪಕರಣಗಳನ್ನು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿಯೇ ಆರ್ಡರ್ ಮಾಡಲಾಗಿದೆ. ಈ ವಿಷಯದಲ್ಲಿ ಜಪಾನ್‌ನಿಂದ ಯಾವುದೇ ಅಧಿಕೃತ ಪ್ರಸ್ತಾಪ ಬಂದಿರಲಿಲ್ಲ. ಹೈ-ಸ್ಪೀಡ್ ರೈಲು ಯೋಜನೆಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕೆಂಬ ಉಭಯ ದೇಶಗಳ ಗುರಿಗೆ ಅನುಗುಣವಾಗಿಯೇ ಈ ಇಡೀ ಯೋಜನೆ ಸಾಗುತ್ತಿದೆ” ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಬುಲೆಟ್ ರೈಲು ಕಾರಿಡಾರ್ ವೇಗದ ಪ್ರಗತಿ; ಜಪಾನ್​ನಿಂದ ಇ10 ಬರುವಷ್ಟರಲ್ಲೇ ಭಾರತ ನಿರ್ಮಿತ ಟ್ರೈನ್ ಬಳಕೆಗೆ ನಿರ್ಧಾರ

ಭಾರತದ ಮೊದಲ ಬುಲೆಟ್ ರೈಲು ಯೋಜನೆ ಹೇಗಿದೆ?:

ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಭಾರತದ ಮೊದಲ ಬುಲೆಟ್ ರೈಲು ಯೋಜನೆಯಾಗಿದ್ದು, ಇದು ಒಟ್ಟು 508 ಕಿಲೋಮೀಟರ್ ಉದ್ದವನ್ನು ಹೊಂದಿದೆ. ಇದು ಮಹಾರಾಷ್ಟ್ರ ಮತ್ತು ಗುಜರಾತ್ ನಡುವೆ ವೇಗದ ಸಂಪರ್ಕವನ್ನು ಕಲ್ಪಿಸಲಿದೆ. ಈ ಕಾರಿಡಾರ್ ಜಪಾನ್‌ನ ಪ್ರಸಿದ್ಧ ‘ಶಿಂಕನ್‌ಸೆನ್’ ತಂತ್ರಜ್ಞಾನವನ್ನು ಬಳಸುತ್ತಿದ್ದು, ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ ದೀರ್ಘಾವಧಿಯ ರಿಯಾಯಿತಿ ಸಾಲಗಳ ಮೂಲಕ ಈ ಯೋಜನೆಗೆ ಭಾಗಶಃ ಧನಸಹಾಯ ನೀಡುತ್ತಿದೆ.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC)ನಿಂದ ಆರಂಭವಾಗುವ ಈ ರೈಲುಗಳು ಗಂಟೆಗೆ 320 ಕಿಮೀ ವೇಗದಲ್ಲಿ ಚಲಿಸಲಿವೆ. ಇದು ಮುಂಬೈ, ವಾಪಿ, ಸೂರತ್, ಆನಂದ್, ವಡೋದರಾ ಮತ್ತು ಅಹಮದಾಬಾದ್ ನಡುವಿನ ಆರ್ಥಿಕ ಸಂಯೋಜನೆಯನ್ನು ಬಲಪಡಿಸಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:15 pm, Fri, 17 July 26

Source link

Leave a Reply

Your email address will not be published. Required fields are marked *